ಇವತ್ತು ನನ್ನ ಬಳಿ ಎಲ್ಲವೂ ಇದೆ, ಎಲ್ಲ ಅಪ್ಪ ಅಮ್ಮನ ಭಿಕ್ಷೆ, ಚೆನ್ನಾಗಿದ್ದೀನಿ, ನೆಮ್ಮದಿಯಾಗಿ ಮಲಗ್ತೀನಿ, ಚೆನ್ನಾಗಿರೋ ಬಟ್ಟೆ ಗಿಟ್ಟೆ ಹಾಕ್ತೀನಿ ಅನ್ನೋದಕ್ಕೆ ಅವರೆ ಕಾರಣ, ನೆನಪಿರಲಿ, ನಾನು ಚಿಕ್ಕವನಿದ್ದಾಗಲೇ ತುಂಬಾ ಕಷ್ಟವನ್ನ ನೋಡಿದ್ದೀನಿ, ಬಿಡಿ, ನಿಮ್ ನಿಮ್ ಕಷ್ಟ ನಿಮ್ ನಿಮ್ಗೆ, ನನ್ನದು ನಿಮ್ಮ ಕಷ್ಟದ ಮುಂದೆ ದೊಡ್ಡದು ಎನ್ನಿಸಲ್ಲ, ನೋಡಿ, ನಾನೊಬ್ಬ ಬ್ರಾಹ್ಮಣ, ಹವ್ಯಕ, ಬ್ರಾಹ್ಮಣರೆಲ್ಲರೂ ಶ್ರೀಮಂತರು, ಬಡವರ ಮೇಲೆ ಶೋಷಣೆ ಮಾಡ್ತಿದ್ರು ಅಂತ ಏನೇನೋ ಹೇಳ್ತಾರೆ ಬಿಡಿ, ಆದರೆ ನಾನು ಜಾತಿಯಲ್ಲಿ ಬ್ರಾಹ್ಮಣ ಆರ್ಥಿಕತೆಯಲ್ಲಿ ಶೂದ್ರ, ನಿಜ ಹೇಳ್ತೀನಿ, ನಿನ್ನ ಹತ್ತಿರ ದುಡ್ಡಿಲ್ಲ ಅಂದ್ರೆ ಈ ಜಗತ್ತು ನಿನ್ನ ತೀರಾ, ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತೆ, ನನ್ನ ತಂದೆಯನ್ನ ನಾನು ಕಾಣುತ್ತಿದ್ದದ್ದು ದಿನಕ್ಕೆ ಖಾಲಿ ನಾಲ್ಕು ಗಂಟೆ ಮಾತ್ರ, ಕತ್ತೆ ದುಡಿದ ಹಾಗೆ ದುಡಿತಿದ್ದ, ಪುಣ್ಯಾತ್ಮ, ಬರೀ ಒಂದೂವರೆ ಸಾವಿರಕ್ಕೆ ರಕ್ತ ಸುರಿಸುತ್ತಿದ್ದ, ಬಿಡಿ, ನಾನು ನಾಲ್ಕು ಗೋಡೆಗಳ ಮಧ್ಯೆ ಬೆಳೆದೆ, ಕೆಳಗೆ ಹೋದರೆ, ಸಿಮೆಂಟು, ಧೂಳು ಅದಕ್ಕಿಂತ ಹೆಚ್ಚಾಗಿ ಮೆಟ್ಟಿಲಿಗಳನ್ನ ಇಳಿಯೋದಕ್ಕೆ ನಾನಿನ್ನೂ ಚಿಕ್ಕವನು ಅಮ್ಮನಿಗೆ ಮೆಟ್ಟಿಲು ಇಳಿಯೋದಕ್ಕೆ ಹೋಗಿ ಎಲ್ಲಿ ಬಿದ್ದು ಬಿಡುತ್ತಾನೋ ಅನ್ನೋ ಭಯ! ಇನ್ನು ನಮ್ಮ ಮನೆಯೆನೂ ಅರಮನೆಯಲ್ಲ ಒಂದು ಚಿಕ್ಕ ಕೋಣೆ, ಅಲ್ಲೆ ಮಲಗ ಬೇಕು, ಅಲ್ಲೇ ಪೂಜೆ, ಅಲ್ಲೆ ಊಟ, ಅಲ್ಲೆ ಅಡುಗೆ, ನೀವು ನಂಬಲಿಕ್ಕಿಲ್ಲ, ಯಾರೋ ಕುಡಿದು ಬಿಸಾಡಿದ ಬಾಟಲ್ಗಳನ್ನ ನನ್ನಮ್ಮ ಆಯ್ದು ತರೋಳು, ಅದನ್ನ ತೊಳೆದು ನೀರು ತುಂಬಿಸಿ ನನ್ನ ಬ್ಯಾಗಿಗೆ ಹಾಕಿ ಕಳಿಸುತ್ತಿದ್ಳು! ನಾನು ಸುಮಾರು 2009ರ ವರೆಗೂ ಬೇರೆಯವರ ಬಟ್ಟೆಯನ್ನೇ, ನಾನೇನು ಹೊಸ ಬಟ್ಟೆ ಕಂಡವನಲ್ಲ, ಒಮ್ಮೆ ಜೀನ್ಸ್ ಪ್ಯಾಂಟು ಬೇಕೆಂದು ಆಸೆ ತಲೆಗೆ ಹತ್ತಿತ್ತು, ಹಠ ಮಾಡಿದ್ದೆ, ಪಾಪ, ಊಟಕ್ಕೆ ಕಷ್ಟವಿದ್ದಾಗ 600 ರೂಪಾಯಿಯ ಜೀನ್ಸೆಲ್ಲಿ ತಂದು ಕೊಡೋದು? ಅಮ್ಮ ನನಗೆ ಸಿಕ್ಕ ಸಿಕ್ಕಂತೆ ಬಾರಿಸಿದ್ದಳು, ಇವತ್ತಿಗೂ ನಾನು ಜೀನ್ಸ್ ಹಾಕೋದೆ ಇಲ್ಲ! ಆದರೆ ಇತ್ತೆಚೆಗೆ ಕೂಡಿಟ್ಟ ಹಣದಲ್ಲಿ ಗುಸ್ಸಿ ಬ್ರಾಂಡಿನ ಒಂದು ಪ್ಯಾಂಟ್ ತಗೊಂಡಿದ್ದೆ, ಅದೂ ಕೂಡ ದೊಗಳೆ ದೊಗಳೆ!
ನಾನು ಬೆಳೆದದ್ದೆಲ್ಲ ನನ್ನ ಚಿಕ್ಕಮ್ಮನ ಮಕ್ಕಳು ಬಿಟ್ಟ ಅಂಗಿ, ಪ್ಯಾಂಟು ಹಾಕಿಯೆ, ಕೆಲವೊಂದು ಹರಿದಿರುತ್ತಿತ್ತು, ಆದರೂ ಅನಿವಾರ್ಯ ಬಟ್ಟೆ ಬೇಕಲ್ಲ! ಪಾಪ ಅವರು ಅಷ್ಟಾದರೂ ಕೊಡುತ್ತಿದ್ರು, ನಂಗಾಗ ಅದೆ ಭೃಷ್ಟಾನ್ನ! ನಾನು ಏನು ಕೇಳಿದ್ರೂ ಇಲ್ಲ ಅಂತಿರ್ಲಿಲ್ಲ, ಬೇಕಾದುದನ್ನೆಲ್ಲ ಅಪ್ಪ ತಂದು ಕೊಡವ್ನು, ಆತನಿಗೆ ಚಪ್ಪಲಿ ಇರ್ತಿರ್ಲಿಲ್ಲ, ನಂಗ್ ತಂದು ಕೊಡ್ತಿದ್ದ, ಅಮ್ಮನ ಸೀರೆ ಹರಿದು ಹೋಗ್ತಿತ್ತು, ನನ್ನ ಶರ್ಟಿಗೆ ಕಾಜಿ ಹಾಕೋಳು!
ನನ್ನಮ್ಮ ನನ್ನ ಓದಿಸೋದಕ್ಕೆ ಕೆಲಸ ಹುಡುಕಿದ್ಳು, ಮೊದಲು ಗೇರು ಬೀಜದ ಸಿಪ್ಪೆ ಬಿಡಿಸೋದು, ನಂತ್ರ ಯಾವ್ದೋ ಇಬ್ಬರು ವೃದ್ಧರ ಸೇವೆ ಮಾಡೋದು, ನಿಜ ಹೇಳ್ತೀನಿ, ನನ್ನಮ್ಮ ಅವರ ಕಕ್ಕ ತೆಗಿತಿದ್ರೆ ನಾನು ಅಳ್ತಿದ್ದೆ, ನಂಗೆ ನೋಡೋದಕ್ ಆಗ್ತಿರ್ಲಿಲ್ಲ! ಆಕೆ ಅವರ ಬಟ್ಟೆ ತೊಳೆಯೋಳು, ಸ್ನಾನ ಮಾಡಿಸೋಳು, ಕೇವಲ ಮೂವತ್ತೈದು ರೂಪಾಯಿಗೆ ಏನಲ್ಲ ಮಾಡಿದ್ದಾಳೆ ನನ್ನಮ್ಮ? ಹೋಗಲಿ ಬಿಡಿ, ನನ್ನೆದುರಲ್ಲೆ ಆಕೆಯನ್ನ ಮಂಚಕ್ಕೆ ಕರೆದಿದ್ದರೂ ನಾನಾಗ ಅಸಹಾಯಕನಾಗಿದ್ದೆ, ಆದರೆ ದೇವರು ಆಕೆಯನ್ನ ಕಾಪಾಡಿದ್ದ!
ಅಪ್ಪ, ಬರಿಗಾಲಲ್ಲಿ ನಡೆದಿದ್ದಾನೆ, ಹಗಲು ರಾತ್ರಿ ನಂಗಾಗಿ ದುಡಿದಿದ್ದಾನೆ, ಇವತ್ತಿಗೂ ದುಡಿತಿದ್ದಾನೆ, ನಾನು ಕಷ್ಟ ಕಮ್ಮಿಯಾಗುತ್ತೆ ಅಂತ ಕಾಲ ಅನ್ನೋ ಚಾನಲ್ಗೆ ಪಾರ್ಟ್ ಟೈಂ ಸೇರಿಕೊಂಡಿದ್ದೆ, ಅಪ್ಪನಿಗೆ ಕಿಂಚಿತ್ತೂ ಇಷ್ಟವಾಗಲಿಲ್ಲ, ಬೈದು ಬಿಡಿಸಿಬಿಟ್ಟ! ಈಗಲೂ ನೀನು ಪಾರ್ಟ್ ಟೈಂ ಮಾಡೋದು ನಂಗಿಷ್ಟ ಆಗಲ್ಲ ಅಂತ ಹೇಳ್ತಿರ್ತಾನೆ!
ನಾನು ಇವತ್ತು ಒಳ್ಳೇಯ ಕಾಲೇಜಿನಲ್ಲಿ ಡಿಗ್ರಿ ಮಾಡ್ತಿದ್ದೀನಿ ಅನ್ನೋದಕ್ಕೆ ಅಪ್ಪನ ಅನಿಯಮಿತ ಬೆವರೆ ಕಾರಣ; ಅಪ್ಪನೊಂದಿಗೆ ಗಲಾಟೆ ಆಗುತ್ತೆ ಕಾಮನ್ ಬಿಡಿ ಅವೆಲ್ಲ! ಇನ್ನು ಅಮ್ಮನಿಗೆ ನಡೆಯೋದಕ್ಕಾಗಲ್ಲ, ಮಂಡಿ ನೋವು, ಏನೋ ಏಗ್ತಾ ಕೆಲಸ ಮಾಡ್ತಾಳೆ, ನನ್ನದೊಂದು ಆಸೆ ನನಗೆಲ್ಲವನ್ನ ಕೊಟ್ಟ ತಂದೆ ತಾಯಿಗೆ ನಾನು ಎಲ್ಲವನ್ನೂ ಕೊಡಬೇಕು, ಪ್ರೀತಿ, ಮಮತೆ, ಸಾಧ್ಯವಾದರೆ ಅವರು ಕೊಡಿಸಿದ ಅರ್ಧದಷ್ಟರದ್ದು!
ಜೀವನದಲ್ಲಿ ಸಂಬಂಧಿಗಳನ್ನ ದೂರವಿಟ್ಟಿರಬೇಕು, ಎಲ್ಲೊ ಹೊಟ್ಟೆಗಿಲ್ಲದಿದ್ದಾಗ ಬೇಡವೆಂದರೂ ಸಹಾಯ ಮಾಡಿರ್ತಾರೆ ಆಮೆಲೆ “ನಮ್ಮಿಂದಲೇ ಅವರು” ಎನ್ನುವಂತ ಮಾತು; ಅವರೆಲ್ಲ ಹಳೆ ಚಪ್ಪಲಿ ತರ!! ಕೆಲವೊಮ್ಮೆ ನಾರುತ್ತವೆ, ಇನ್ನು ನಾವೆಲ್ಲ ನಮ್ಮ ಜೀವನವನ್ನ ನಾವೆ ಕೆತ್ತಿಕೊಳ್ಳುವ ಜಕಣಾಚಾರಿ ಇದ್ದಂತೆ, ಸುಂದರ ಜೀವನ ರೂಪಿಸಿಕೊಳ್ಳಬೇಕು! ನೆಮ್ಮದಿಯಾಗಿರೋದಕ್ಕೆ ಮನೆ ಮಠಗಳು ಬೇಕಿಲ್ಲ ಕಣ್ರಿ, ನಮ್ಮನ್ನೆ ನೋಡಿ, ಸ್ವಂತ ಮನೆ-ಜಾಗ ಸುಡುಗಾಡು ಯಾವುದು ಇಲ್ಲ, ನಾವು ಹೋದದ್ದೆ ಊರು, ಉಳಿದದ್ದೆ ಮನೆ! ಹಣ ಇದ್ದವನಿಗೆ ಒಂದೇ ಊರು ಒಂದೇ ಮನೆ ನಮಗೆ ಹಾಗಲ್ಲ, ಜಗತ್ತೆ ಊರು, ಅದೇ ಮನೆ!