Loading...

ಲಯನ್ಸ್ ಕ್ಲಬ್ ಕಾರ್ಯಕ್ರಮ ಅದ್ದೂರಿ; 2028ರತ್ತ ಜಮಖಂಡಿ ಹೊಸ ರಾಜಕೀಯ ದಿಕ್ಸೂಚಿ ! ನಿರಾಣಿ ಸುತ್ತ ರೂಪುಗೊಳ್ಳುತ್ತಿರುವ ಹೊಸ ರಾಜಕೀಯ ಸಮೀಕರಣಗಳು

Suddi Mitra Editor

June 28, 2026 • 06:01 PM

ಲಯನ್ಸ್ ಕ್ಲಬ್ ಕಾರ್ಯಕ್ರಮ ಅದ್ದೂರಿ; 2028ರತ್ತ ಜಮಖಂಡಿ  ಹೊಸ ರಾಜಕೀಯ ದಿಕ್ಸೂಚಿ !  ನಿರಾಣಿ ಸುತ್ತ ರೂಪುಗೊಳ್ಳುತ್ತಿರುವ ಹೊಸ ರಾಜಕೀಯ ಸಮೀಕರಣಗಳು

ಅಪ್ಪು ಪೋತರಾಜ..

ಬೆಂಗಳೂರು/ ಜಮಖಂಡಿ:ಸುದ್ದಿ ಮಿತ್ರ; ಜಮಖಂಡಿ ರಾಜಕೀಯದಲ್ಲಿ ಇತ್ತೀಚೆಗೆ ನಡೆಯುವುತ್ತಿರುವ ಕೆಲವು ಬೆಳವಣಿಗೆಗಳು ಕ್ಷೇತ್ರದ ಭವಿಷ್ಯದ ರಾಜಕೀಯ ದಿಕ್ಕಿನ ಕುರಿತು ಹೊಸ ಚರ್ಚೆಗಳಿಗೆ ಕಾರಣವಾಗಿವೆ. ಅದರಲ್ಲೂ ಉದ್ಯಮಿ ಹಾಗೂ ರಾಜಕೀಯವಾಗಿ ಪ್ರಭಾವಿ ಕುಟುಂಬವೆಂದು ಗುರುತಿಸಿಕೊಂಡಿರುವ ನಿರಾಣಿ ಕುಟುಂಬದ ಸುತ್ತ ರೂಪುಗೊಳ್ಳುತ್ತಿರುವ ರಾಜಕೀಯ ಚಟುವಟಿಕೆಗಳು ವಿಶೇಷ ಗಮನ ಸೆಳೆದಿವೆ.

ಜಮಖಂಡಿ ಬಸವ ಭವನದಲ್ಲಿ ನಡೆದ ಸಂಗಮೇಶ ನಿರಾಣಿ ಅವರ ಲಯನ್ಸ್ ಕ್ಲಬ್ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಕಂಡುಬಂದ ಜನಸಮೂಹ, ವಿವಿಧ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಅಭಿಮಾನಿಗಳ ಸಂಖ್ಯೆಯನ್ನು ಗಮನಿಸಿದರೆ, ಇದು ಕೇವಲ ಒಂದು ಸಾಮಾಜಿಕ ಸಂಘಟನೆಯ ಕಾರ್ಯಕ್ರಮವಾಗಿತ್ತೇ ಅಥವಾ ಭವಿಷ್ಯದ ರಾಜಕೀಯ ಸಮೀಕರಣಗಳ ಮುನ್ಸೂಚನೆಯೇ ಎಂಬ ಪ್ರಶ್ನೆ ಉದ್ಭವಿಸುವಂತಾಗಿದೆ.

ಸಾಮಾನ್ಯವಾಗಿ ಲಯನ್ಸ್ ಕ್ಲಬ್‌ನಂತಹ ಸೇವಾ ಸಂಸ್ಥೆಗಳ ಕಾರ್ಯಕ್ರಮಗಳು ರಾಜಕೀಯೇತರವಾಗಿರಬೇಕೆಂಬ ನಿರೀಕ್ಷೆ ಇರುತ್ತದೆ. ಆದರೆ ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರ ಸಕ್ರಿಯ ಭಾಗವಹಿಸುವಿಕೆ, ಕಾರ್ಯಕ್ರಮದ ವೈಭವ ಹಾಗೂ ಜನರ ಉತ್ಸಾಹವು ಇದನ್ನು ರಾಜಕೀಯ ವಲಯದ ಚರ್ಚೆಯ ವಿಷಯವಾಗಿಸಿದೆ. ಅಲ್ಲದೇ ಜಮಖಂಡಿ ಜಿಲ್ಲೆ ಸಾವಳಗಿ ತಾಲ್ಲೂಕು ಕೇಂದ್ರವಾಗಿ ಮಾಡುವುದು ನಿರಾಣಿ ಸಹೋದರರ ಗುರಿಯಾಗಿದೆ ಎಂದು ಸಂಗಮೇಶ ನಿರಾಣಿ ಅವರ ಹೇಳಿದ ಈ ಮಾತು ಎಲ್ಲಾ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡಿದೆ.

2028ರ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದ್ದರೂ, ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಈಗಾಗಲೇ ವೇಗ ಪಡೆಯುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ವಿಶೇಷವಾಗಿ ಮಾಜಿ ಸಚಿವ ಮುರಗೇಶ ನಿರಾಣಿ ಅವರು ಈ ಬಾರಿ ಜಮಖಂಡಿ ಕ್ಷೇತ್ರದ ರಾಜಕೀಯ ಅಖಾಡದಲ್ಲಿ ನೇರವಾಗಿ ಸಕ್ರಿಯ ಪಾತ್ರ ವಹಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿವೆ.

ರಾಜ್ಯ ರಾಜಕೀಯದ ಮಟ್ಟದಲ್ಲಿಯೂ ನಾಯಕತ್ವದ ಬದಲಾವಣೆಗಳು ಹಾಗೂ ಹೊಸ ಸಮೀಕರಣಗಳು ಹಿಂದುಳಿದ ವರ್ಗಗಳ ರಾಜಕೀಯದ ಮೇಲೆ ಪರಿಣಾಮ ಬೀರುತ್ತಿವೆ ಎಂಬ ವಿಶ್ಲೇಷಣೆಗಳಿವೆ. ವಿಶೇಷವಾಗಿ ಕುರುಬ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಕೆಲ ಮುಖಂಡರು ತಮ್ಮ ಭವಿಷ್ಯದ ರಾಜಕೀಯ ನೆಲೆಯನ್ನು ಮರುಪರಿಶೀಲಿಸುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಮಖಂಡಿ ಕ್ಷೇತ್ರವೂ ಹೊರತಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನಿರಾಣಿ ಕುಟುಂಬದೊಂದಿಗೆ ವಿವಿಧ ಸಮುದಾಯಗಳ ಮುಖಂಡರು, ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಕೆಲ ನಾಯಕರು ಸಂಪರ್ಕ ಬೆಳೆಸುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. 

ಆದಾಗ್ಯೂ, ಯಾವುದೇ ಸಮುದಾಯದ ಅಥವಾ ನಾಯಕರ ರಾಜಕೀಯ ಒಲವು ಸಂಪೂರ್ಣವಾಗಿ ಬದಲಾಗಿದೆ ಎಂಬ ನಿರ್ಣಯಕ್ಕೆ ಈಗಲೇ ಬರುವುದು ಸೂಕ್ತವಲ್ಲ. ರಾಜಕೀಯದಲ್ಲಿ ಅಂತಿಮ ತೀರ್ಮಾನವನ್ನು ಚುನಾವಣೆಗಳೇ ನಿರ್ಧರಿಸುತ್ತವೆ. ನಾಯಕತ್ವದ ನಿರ್ಧಾರಗಳು, ಪಕ್ಷಗಳ ಸಂಘಟನಾ ಸಾಮರ್ಥ್ಯ, ಸ್ಥಳೀಯ ಸಮಸ್ಯೆಗಳು ಮತ್ತು ಜನಾಭಿಪ್ರಾಯ ಇವೆಲ್ಲವೂ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ.

ಒಟ್ಟಾರೆಯಾಗಿ, ಜಮಖಂಡಿಯಲ್ಲಿ ಹೊಸ ರಾಜಕೀಯ ಸಮೀಕರಣಗಳು ರೂಪುಗೊಳ್ಳುತ್ತಿರುವ ಚರ್ಚೆಗಳು ಜೋರಾಗಿದ್ದರೂ, ಅವುಗಳ ನಿಜವಾದ ಪರಿಣಾಮ ಏನೆಂಬುದು ಮುಂದಿನ ದಿನಗಳ ರಾಜಕೀಯ ಬೆಳವಣಿಗೆಗಳ ನಂತರವೇ ಸ್ಪಷ್ಟವಾಗಲಿದೆ. ಆದರೆ ಒಂದು ವಿಚಾರ ಮಾತ್ರ ಸ್ಪಷ್ಟ — ಜಮಖಂಡಿ ರಾಜಕೀಯದಲ್ಲಿ ಹೊಸ ದಿಕ್ಸೂಚಿಯ ಕುರಿತ ಚರ್ಚೆ ಈಗಾಗಲೇ ಆರಂಭವಾಗಿದೆ.

- Advertisement -