ಜೆಕೆ ಸಿಮೆಂಟ್ ವಿರುದ್ಧ ರೈತರ ಸಮರ: ಪ್ರಭಾವಿ ಸಚಿವರಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಯಾಕಿಲ್ಲ?
ಹೋರಾಟಕ್ಕೆ ತಾತ್ಕಾಲಿಕ ಸುಖಾಂತ್ಯ: ಭರವಸೆ ಈಡೇರುತ್ತದೆಯೇ?
ಅಪ್ಪು ಪೋತರಾಜ
ಸುದ್ದಿ ಮಿತ್ರ; ಬೆಂಗಳೂರು: ಕೈಗಾರಿಕಾ ಅಭಿವೃದ್ಧಿ ಅಗತ್ಯವೇ ಸರಿ. ಆದರೆ, ಅದರ ಜೊತೆಗೆ ರೈತರ ಬದುಕು, ಕೃಷಿ ಮತ್ತು ಪರಿಸರದ ರಕ್ಷಣೆಯೂ ಸಮಾನವಾಗಿ ಮುಖ್ಯವಾಗಿದೆ. ಲೋಕಾಪುರ ಭಾಗದ ಹೋರಾಟವು ಕೇವಲ ಒಂದು ಗ್ರಾಮದ ಸಮಸ್ಯೆಯಲ್ಲ; ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಮತೋಲನ ಸಾಧಿಸುವ ಅಗತ್ಯವನ್ನು ನೆನಪಿಸುವ ಹೋರಾಟವಾಗಿದೆ.
ಅಭಿವೃದ್ಧಿ ಬೇಕು ಆದರೆ ರೈತರ ಬದುಕಿನ ಬೆಲೆಗೆ ಅಲ್ಲ ಎಂಬುದು ಲೋಕಾಪುರ ಭಾಗದ ಜನರ ಒಕ್ಕೊರಲಿನ ಧ್ವನಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಲೋಕಾಪುರ ಸಮೀಪದ ಜೆಕೆ ಸಿಮೆಂಟ್ ಕಾರ್ಖಾನೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ, ಬೆಳೆ ಹಾನಿ ಹಾಗೂ ಮೂಲಭೂತ ಸಮಸ್ಯೆಗಳ ವಿರುದ್ಧ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರ ಹೋರಾಟ ಇತ್ತೀಚೆಗೆ ಜಿಲ್ಲಾಡಳಿತ ಮಧ್ಯಸ್ಥಿಕೆಯಿಂದ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಜಿಲ್ಲಾಡಳಿತ, ಕಾರ್ಖಾನೆ ಆಡಳಿತ ಹಾಗೂ ರೈತ ಮುಖಂಡರ ನಡುವೆ ನಡೆದ ಸಭೆಯಲ್ಲಿ ಹಲವು ಬೇಡಿಕೆಗಳಿಗೆ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಅದಾಗ್ಯೂ ಮುಧೋಳ ಕ್ಷೇತ್ರವೂ ರಾಜಕಾರಣಿಗಳ ಪಾಲಿಗೆ ಅದೃಷ್ಟ ಹಲವು ದಶಕಗಳಿಂದ ಪ್ರಭಾವಿ ರಾಜಕೀಯ ನಾಯಕತ್ವ ದೊರೆತಿದೆ. ರಾಜ್ಯ ಸಚಿವ ಸಂಪುಟದಲ್ಲಿ ಆರ್ ಬಿ ತಿಮ್ಮಾಪೂರ, ಗೋವಿಂದ ಕಾರಜೋಳ ಇವರು ಸಚಿವ ಸ್ಥಾನ ಅಲಂಕರಿಸಿದ್ದವರು, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲ, ಪ್ರಭಾವಿ ಸಚಿವರು ಇದ್ದರೂ ಸಮಸ್ಯೆ ಬಗೆಹರಿಯದಿದ್ದರೆ, ಅದು ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯ ವೈಫಲ್ಯವೇ, ಕೈಗಾರಿಕಾ ಸಂಸ್ಥೆ ಮಾಲಿಕರ ಪ್ರಭಾವದಿಂದಾಗಿ ರಾಜಕೀಯ ನಾಯಕರು ಕಠಿಣ ನಿಲುವು ತಾಳಲು ಹಿಂದೇಟು? ಹೀಗೆ ನೂರಾರು ಪ್ರಶ್ನೆ ಹುಟ್ಟಿದೆ.
ಜೆ.ಕೆ ಸಿಮೆಂಟ್ ಕಾರ್ಖಾನೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ, ಕಾರ್ಖಾನೆಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಗ್ರಾಮಸ್ಥರು, ರೈತರು ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದು, ಹೋರಾಟ ಮಾಡಿದರು ಶಾಶ್ವತ ಪರಿಹಾರ ಸಿಕ್ಕಿಲ್ಲ.
ಈ ಭಾಗದಲ್ಲಿ ಕಾರ್ಖಾನೆ ಮತ್ತು ಗಣಿಗಾರಿಕೆ ಪ್ರದೇಶಗಳಿಂದ ಹೊರಹೊಮ್ಮುವ ಧೂಳು ಕೃಷಿ ಭೂಮಿಯ ಮೇಲೆ ಜಮೆಯಾಗುತ್ತಿರುವುದರಿಂದ ಬೆಳೆಗಳ ಇಳುವರಿ ಕುಸಿಯುತ್ತಿದೆ,ಗಣಿಗಾರಿಕೆಗಾಗಿ ನಡೆಸಲಾಗುವ ಸ್ಫೋಟ ಕಾರ್ಯಾಚರಣೆಗಳಿಂದ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ,ಗಣಿಗಾರಿಕೆ ಚಟುವಟಿಕೆಗಳಿಂದ ಭೂಗರ್ಭ ಜಲಮಟ್ಟ ಕುಸಿಯುತ್ತಿದ್ದು, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ,ಭಾರೀ ವಾಹನಗಳ ನಿರಂತರ ಸಂಚಾರದಿಂದ ಈ ಪ್ರದೇಶದಲ್ಲಿ ರಸ್ತೆಗಳು ಹಾಳಾಗಿದ್ದು, ಅಪಘಾತಗಳ ಭೀತಿಯೂ ಹೆಚ್ಚಾಗಿದೆ.
ರೈತರ ಪ್ರತಿಭಟನೆ ಮಣಿದ ಜಿಲ್ಲಾಡಳಿತ: ಹದಿನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ರೈತರು, ಕಾರ್ಖಾನೆ ಆಡಳಿತ ಮಂಡಳಿ ಅವರ ಜೊತೆಗೂಡಿ ಸಭೆ ನಡೆಸಿ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಜಿಲ್ಲಾಡಳಿತ ಮತ್ತು ಕಾರ್ಖಾನೆ ಆಡಳಿತ ಮಂಡಳಿಯು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಮಾಲಿನ್ಯ ಪರಿಶೀಲನೆಗೆ ಸಮಿತಿ ರಚನೆ: ಜಿಲ್ಲಾಧಿಕಾರಿ ಸಂಗಪ್ಪ ಅವರ ಸೂಚನೆ ಮೇರೆಗೆ ಜಮಖಂಡಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಂಟಿ ಕೃಷಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು, ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿ ಕಾರಿ, ಜಿಲ್ಲಾ ಪಶುಪಾಲನೆ ಉಪನಿರ್ದೇಶಕರು, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಉಪನಿರ್ದೇಶಕರು, ಪಂಚಾಯತ್ ಎಂಜಿನಿಯರಿಂಗ್ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರು, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ, ಮುಧೋಳ ತಹಸೀಲ್ದಾರ್, ತಾಪಂ ಇಒ ಸದಸ್ಯರಾಗಿದ್ದಾರೆ.
ಭರವಸೆಗಳು ಕಾಗದದಲ್ಲೇ ಉಳಿಯಬಾರದು
ಈ ಭಾಗದ ಜನರು ಹಿಂದೆ ಕೂಡ ಹಲವು ಬಾರಿ ಭರವಸೆಗಳನ್ನು ಪಡೆದಿದ್ದರೂ, ಅವುಗಳ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ನೀಡಿರುವ ಭರವಸೆಗಳು ಕೇವಲ ಮಾತುಗಳಾಗಿ ಉಳಿಯದೆ, ನಿಗದಿತ ಅವಧಿಯಲ್ಲಿ ಜಾರಿಯಾಗಬೇಕು ಎಂಬುದು ಆ ಭಾಗದ ಗ್ರಾಮಸ್ಥರ ಒತ್ತಾಯವಾಗಿದೆ.