ಪ್ರೇಮಿಗಾಗಿ ಕುಟುಂಬವನ್ನೇ ಸರ್ವನಾಶ ಮಾಡಿದಳಾ ಯುವತಿ? ಕೆ.ಆರ್.ಪುರದಲ್ಲಿ ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ; ಬೆಚ್ಚಿಬಿದ್ದ ಬೆಂಗಳೂರು!
ಬೆಂಗಳೂರು (ಜೂ.23): ರಾಜ್ಯ ರಾಜಧಾನಿ ಬೆಂಗಳೂರನ್ನು ಬೆಚ್ಚಿಬೀಳಿಸುವಂತಹ ಭೀಕರ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗೆಹಳ್ಳಿ ಪ್ರದೇಶದಲ್ಲಿ ನಡೆದಿದ್ದು, ಒಂದೇ ಕುಟುಂಬದ ಮೂವರು ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಇಡೀ ನಗರದಲ್ಲಿ ತೀವ್ರ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.
ಪ್ರೀತಿ ವಿಚಾರಕ್ಕೆ ಕುಟುಂಬ ಸರ್ವ ನಾಶ:
ನಿನ್ನೆ ರಾತ್ರಿ ಯುವತಿ ಪೋಷಕರು ಹಾಗೂ ಯುವಕನ ನಡುವೆ ಭಾರೀ ಗಲಾಟೆಯಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಯುವತಿಯೇ ಆತನ ಪ್ರಿಯಕರನ ಜೊತೆ ಸೇರಿ ತಂದೆ, ತಾಯಿ ಹಾಗೂ ತಂಗಿಯನ್ನ ಕೊಂದಿದ್ದಾಳೆ ಎನ್ನಲಾಗ್ತಿದೆ. ಸೋಮಸುಂದರ್ (55), ಮುತ್ತುಲಕ್ಷ್ಮಿ (48), ಮಗಳು ಸುಪ್ರಿಯಾ (20) ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಮೃತರ ಮೊದಲ ಮಗಳು ಶ್ವೇತಾ ಎಂಬಾಕೆಯೇ ಪ್ರಿಯಕರ ಕೆನತ್ ಜೊತೆ ಸೇರಿ ಕೊಲೆಗೈದಿದ್ದಾರೆ. ಈ ಜೋಡಿ ಲೀವ್ ಇನ್ ರಿಲೇಶನ್ ಶಿಫ್ ನಲ್ಲಿದ್ದರಂತೆ. ಇದಕ್ಕೆ ಪೋಷಕರು ಕೂಡ ವಿರೋಧ ವ್ಯಕ್ತಪಡಿಸಿದ್ದರಂತೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಬಾಯ್ ಫ್ರೆಂಡ್ ಜೊತೆ ಸೇರಿ ತಂದೆ ತಾಯಿ ಹಾಗೂ ತಂಗಿ ಕೊಲೆಯನ್ನೇ ಶ್ವೇತಾ ಹತ್ಯೆ ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದ ಬಳಿಕ ಯುವತಿ ಹಾಗೂ ಆಕೆಯ ಪ್ರೇಮಿ ನಾಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮತ್ತು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಇವರಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದು, ವಿವಿಧ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.
ಮನೆಯೊಳಗೆ ನಡೆದಿರುವ ಈ ತ್ರಿವಳಿ ಹತ್ಯೆ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಪೂರ್ವಯೋಜಿತ ಕೃತ್ಯವೇ? ಕುಟುಂಬದ ಸದಸ್ಯರಿಗೆ ಮೊದಲೇ ಯಾವುದೇ ಬೆದರಿಕೆ ಇತ್ತೇ? ಪ್ರೇಮ ಸಂಬಂಧವೇ ಹತ್ಯೆಗೆ ಕಾರಣವೇ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣಗಳಿವೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಶೀಗೆಹಳ್ಳಿ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಿಸಿದ್ದು, ಸ್ಥಳೀಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಟುಂಬ ಕಲಹ, ಪ್ರೇಮ ಸಂಬಂಧ ಹಾಗೂ ವೈಯಕ್ತಿಕ ವೈಷಮ್ಯಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ:
ವಿಚಾರ ತಿಳಿಯುತ್ತಿದ್ದಂತೆ ಕೆ ಆರ್ ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದು, ಪಾಗಲ್ ಪ್ರೇಮಿಗಾಗಿ ಹುಡುಕಾಡಿದ್ದಾರೆ. ಕೊಲೆಯಾದವರ ಮೃತದೇಹವನ್ನ ಅವಲಹಳ್ಳಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.