ಜಮಖಂಡಿ ರಾಜಕೀಯದಲ್ಲಿ ಮತ್ತೆ ಸಕ್ರಿಯರಾದ ಮುರಗೇಶ ನಿರಾಣಿ! 2028ರ ಚುನಾವಣೆಗೆ ಈಗಿನಿಂದಲೇ ತಂತ್ರಗಾರಿಕೆ; ರಾಜಕೀಯಕ್ಕಾಗಿ ಲಯನ್ಸ್ ಕ್ಲಬ್ ವೇದಿಕೆಯಾಗಿಸಿಕೊಂಡರಾ ಸಂಗಮೇಶ ನಿರಾಣಿ ?
ಅಪ್ಪು ಪೋತರಾಜ
ಬೆಂಗಳೂರು:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಕಾವು ಪಡೆಯತೊಡಗಿದ್ದು, ಉತ್ತರ ಕರ್ನಾಟಕ ಪ್ರಭಾವಿ ರಾಜಕೀಯ ನಾಯಕ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಮುರಗೇಶ ನಿರಾಣಿ ಅವರು ಜಮಖಂಡಿ ಕ್ಷೇತ್ರದಲ್ಲೂ ತಮ್ಮ ರಾಜಕೀಯ ನೆಲೆ ವಿಸ್ತರಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದು.
ಕಳೆದ ಎರಡು ದಶಕಗಳಿಂದ ಜಮಖಂಡಿ ಕ್ಷೇತ್ರದಲ್ಲಿ ತಮ್ಮದೇ ಆದ ರಾಜಕೀಯ ನೆಲೆ ನಿರ್ಮಿಸಲು ನಿರಂತರ ಪ್ರಯತ್ನ ನಡೆಸುತ್ತಿರುವ ನಿರಾಣಿ ಸಹೋದರರು ಇದೀಗ ಸಂಗಮೇಶ ನಿರಾಣಿ ಜಮಖಂಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿದು ಸಾಮಾಜಿಕ ಚಟುವಟಿಕೆಗಳ ಮೂಲಕ ಮತ್ತೊಮ್ಮೆ ಜನರ ನಡುವೆ ಸಕ್ರಿಯರಾಗತ್ತಿರುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಬಿಸಿ ಚರ್ಚೆಯಾಗಿದೆ, 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಗಮೇಶ ನಿರಾಣಿ ಈಗಿನಿಂದಲೇ ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತದೆ.
2 ದಶಕಗಳ ರಾಜಕೀಯ ಆಸಕ್ತಿ ಪ್ರಯತ್ನ ಬಿಡದ ನಿರಾಣಿ :
ಮುರಗೇಶ ನಿರಾಣಿ ಮೂಲತ ಬೀಳಗಿ ಕ್ಷೇತ್ರದ ರಾಜಕಾರಣಿಯಾಗಿದ್ದರೂ, ಜಮಖಂಡಿ ಕ್ಷೇತ್ರದ ರಾಜಕೀಯದ ಮೇಲೆ ಹಲವು ವರ್ಷಗಳಿಂದ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಕೈಗಾರಿಕಾ ಸಚಿವ ಸೇರಿದಂತೆ ಹಲವು ಮಹತ್ವದ ಸಚಿವ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಭಾವ ಹೆಚ್ಚಿರುವ ಹಿನ್ನೆಲೆಯಲ್ಲಿ, ಈ ಭಾಗದಲ್ಲಿ ತಮ್ಮದೇ ರಾಜಕೀಯ ಶಕ್ತಿ ಕೇಂದ್ರ ನಿರ್ಮಿಸಲು ನಿರಂತರವಾಗಿ ನಿರಾಣಿ ಸಹೋದರರು ಪ್ರಯತ್ನಿಸುತ್ತಿದ್ದಾರೆ.
2013ರಲ್ಲಿ ನಿರಾಣಿ ಆಪ್ತ ಸ್ಪರ್ಧೆ ಬಿಜೆಪಿ ಮತ ವಿಭಜನೆ?
2013ರ ವಿಧಾನಸಭಾ ಚುನಾವಣೆಯಲ್ಲಿ ಮುರಗೇಶ ನಿರಾಣಿ ಅವರ ಆಪ್ತ ಉಮೇಶ ಮಹಾಬಳಶೆಟ್ಟಿ ಕೆಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಮತ್ತು ಕೆಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಮತ ವಿಭಜನೆ ಉಂಟಾಗಿ, ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿಗೆ ಹಿನ್ನಡೆಯಾಯಿತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿ.ಸಿದ್ದು ನ್ಯಾಮಗೌಡ ಅವರಿಗೆ ವರಧಾನಯಾಗಿ ಪರಿಣಮಿಸಿತು ಎಂಬ ಮಾತಗಳು ಕ್ಷೇತ್ರದಲ್ಲಿ ಇಂದಿಗೂ ಕೇಳಿಬರುತ್ತವೆ.ಆ ಚುನಾವಣೆಯ ನಂತರ ಜಮಖಂಡಿಯಲ್ಲಿ ನಿರಾಣಿ ಬೆಂಬಲಿತ ರಾಜಕೀಯ ಶಕ್ತಿಯ ಪ್ರಭಾವ ಹೆಚ್ಚಾಯಿತು.
2018ರಲ್ಲಿ ಮುರಗೇಶ ಸಹೋದರ ಸಂಗಮೇಶ ನಿರಾಣಿ ಸ್ಪರ್ಧೆ :
2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುರಗೇಶ ನಿರಾಣಿ ಅವರು ಬೀಳಗಿ ಬದಲಾಗಿ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದರು, ಆದರೆ ಪಕ್ಷವು ಅವರಿಗೆ ಅವಕಾಶ ನೀಡಿರಲಿಲ್ಲ. ಇದೇ ವೇಳೆ ಅವರ ಸಹೋದರ ಸಂಗಮೇಶ್ ನಿರಾಣಿ ಅವರನ್ನು
ಪಕ್ಷದ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಇದರಿಂದ ಬಿಜೆಪಿಯ ಮತ ಬ್ಯಾಂಕ್ ವಿಭಜನೆಯಾಗಿ, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡರು.
2023ರಲ್ಲಿ ಬಿಜೆಪಿ ಗೆಲುವು
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರನ್ನು 4,716 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಜಮಖಂಡಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.ಆದರೆ ಈ ಗೆಲುವಿನ ಅಂತರ ಹೆಚ್ಚು ಇರಲಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವ ಬೆಳೆಯುತ್ತಿರುವ ಯಾವುದೇ ಬೆಳವಣಿಗೆ ಬಿಜೆಪಿ ಒಳರಾಜಕಾರಣದ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ಆರಂಭವಾಗಿವೆ.
ಜಗದೀಶ್ ಗುಡಗುಂಟಿಗೆ ಹೆಚ್ಚಿದ ರಾಜಕೀಯ ಸವಾಲು?
ಬಿಜೆಪಿ ಹಾಲಿ ಶಾಸಕ ಜಗದೀಶ್ ಗುಡಗುಂಟಿ ಕ್ಷೇತ್ರದಲ್ಲಿ ತಮ್ಮದೇ ಸಂಘಟನೆ ಮತ್ತು ಕಾರ್ಯಕರ್ತರ ಪಡೆ ಹೊಂದಿದ್ದರೂ, ಮುರಗೇಶ ನಿರಾಣಿ ಸಾಮಾಜಿಕ ವೇದಿಕೆಗಳ ಮೂಲಕ ಮತ್ತೆ ಜನಸಂಪರ್ಕ ಹೆಚ್ಚಿಸುತ್ತಿರುವುದು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹೊಸ ಸವಾಲು ಸೃಷ್ಟಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕಳೆದ ಎರಡು ದಶಕಗಳಿಂದ ಎಂ ಆರ್ ಎನ್ ಫೌಂಡೇಶನ್ ಮೂಲಕ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ, ಆರೋಗ್ಯ ಸೇವೆ, ಕ್ರೀಡಾ ಕಾರ್ಯಕ್ರಮಗಳ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನಗಳು ಹೆಚ್ಚಾಗಿತ್ತು. 2023 ರ ಚುನಾವಣೆ ನಂತರ ಎಂ ಆರ್ ಎನ್ ಫೌಂಡೇಶನ್ ಕಾರ್ಯಚಟುವಟಿಕೆಗಳು ನಿಧಾನಗತಿಯ ಹೊಂದಿದ್ದು. ಈಗ ವಿಶೇಷವಾಗಿ ನಿರಾಣಿ ಸಹೋದರರು ವಿವಿಧ ಸಂಘಟನೆಗಳು, ಸೇವಾ ಸಂಸ್ಥೆಗಳು ಮತ್ತು ಸಾಮಾಜಿಕ ವೇದಿಕೆಗಳ ಮೂಲಕ ಜನರ ನಡುವೆ ಸಂಪರ್ಕ ಸಾಧಿಸುವ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.
ಲಯನ್ಸ್ ಕ್ಲಬ್ ವೇದಿಕೆ ನಿರಾಣಿ ರಾಜಕೀಯಕ್ಕೆ ಹೊಸ ಅಖಾಡವೇ?
ಸಾಮಾಜಿಕ ಸೇವೆ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ 2026-27ನೇ ಸಾಲಿನ ಅಧ್ಯಕ್ಷರಾಗಿ ಸಂಗಮೇಶ ನಿರಾಣಿ ಆಯ್ಕೆ, ಅವರೊಂದಿಗೆ ಇವರ ಆಪ್ತರು ಪದಾಧಿಕಾರಿಗಳು ಆಗಿದ್ದು, ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಜನಪರ ಲಯನ್ಸ್ ಕ್ಲಬ್ ವನ್ನು ತಮ್ಮ ರಾಜಕೀಯ ಪುನರ್‌ಪ್ರವೇಶಕ್ಕೆ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿವೆಯೇ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಜಮಖಂಡಿ ಕ್ಷೇತ್ರದಲ್ಲಿ ಸುದೀರ್ಘ ಕಾಲದಿಂದ ಸ್ಥಳೀಯ ನಾಯಕತ್ವವೇ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೊರಗಿನ ಪ್ರಭಾವಿ ನಾಯಕರಿಗೂ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವುದು ಸವಾಲಿನ ವಿಷಯವಾಗಿದೆ. ಇದೇ ಕಾರಣಕ್ಕೆ ಕಳೆದ ಹಲವು ವರ್ಷಗಳಿಂದ ನಡೆದ ಪ್ರಯತ್ನಗಳ ಹೊರತಾಗಿಯೂ ನಿರಾಣಿ ಕುಟುಂಬಕ್ಕೆ ನಿರೀಕ್ಷಿತ ರಾಜಕೀಯ ಯಶಸ್ಸು ಸಿಕ್ಕಿಲ್ಲ.
ಆದಾಗ್ಯೂ, ನಿರಾಣಿ ಕುಟುಂಬದ ಆರ್ಥಿಕ, ಸಾಮಾಜಿಕ ಹಾಗೂ ಸಂಘಟನಾ ಬಲವನ್ನು ಗಮನಿಸಿದರೆ, ಮುಂಬರುವ ದಿನಗಳಲ್ಲಿ ಜಮಖಂಡಿ ಕ್ಷೇತ್ರದ ರಾಜಕೀಯದಲ್ಲಿ ಹೊಸ ಸಮೀಕರಣಗಳು ಮೂಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 2028ರ ಚುನಾವಣೆಯ ಹೊಸ್ತಿಲಿನಲ್ಲಿ ನಿರಾಣಿ ಸಹೋದರರ ಮುಂದಿನ ರಾಜಕೀಯ ನಡೆ ಏನಿರಲಿದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.