Loading...

ಜಮಖಂಡಿ ಶುಗರ್ಸ್‌ನಲ್ಲಿ ಗೌಪ್ಯ ಸಭೆ: ಡಿಸಿಸಿ ಬ್ಯಾಂಕ್‌ನಲ್ಲಿ ಹೊಸ ಖಾತೆ? ಮಾಜಿ ಶಾಸಕ ಆನಂದ್ ವಿರುದ್ಧ ಆಂತರಿಕ ಭಿನ್ನಮತದ ಚರ್ಚೆ

Suddi Mitra Editor

June 30, 2026 • 06:00 AM

ಜಮಖಂಡಿ ಶುಗರ್ಸ್‌ನಲ್ಲಿ ಗೌಪ್ಯ ಸಭೆ: ಡಿಸಿಸಿ ಬ್ಯಾಂಕ್‌ನಲ್ಲಿ ಹೊಸ ಖಾತೆ? ಮಾಜಿ ಶಾಸಕ ಆನಂದ್ ವಿರುದ್ಧ ಆಂತರಿಕ ಭಿನ್ನಮತದ ಚರ್ಚೆ

ಅಪ್ಪು ಪೋತರಾಜ

ಜಮಖಂಡಿ: (ಸುದ್ದಿ ಮಿತ್ರ) ಜಮಖಂಡಿ ಶುಗರ್ಸ್ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದಿರುವ ಗೌಪ್ಯ ಸಭೆ ರಾಜಕೀಯ ಹಾಗೂ ಸಹಕಾರ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಸ್ಥೆಯ ಕೆಲವು ನಿರ್ದೇಶಕ ಮಂಡಳಿ ಸದಸ್ಯರು ಆಡಳಿತಾತ್ಮಕ ವಿಚಾರಗಳು ಹಾಗೂ ಹಣಕಾಸು ವ್ಯವಹಾರಗಳ ಕುರಿತು ಮಹತ್ವದ ಸಭೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಆನಂದ್ ನ್ಯಾಮಗೌಡ ಅವರ ಕಾರ್ಯವೈಖರಿಯ ಬಗ್ಗೆ ಕೆಲ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಸಂಸ್ಥೆಯ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.

ಇದೇ ವೇಳೆ, ಜಮಖಂಡಿ ಶುಗರ್ಸ್‌ನ ಬ್ಯಾಂಕ್ ಖಾತೆ ಬದಲಾವಣೆಯ ಪ್ರಕ್ರಿಯೆ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಇದುವರೆಗೆ ಬಳಕೆಯಲ್ಲಿದ್ದ ಬ್ಯಾಂಕ್ ಖಾತೆಯ ಬದಲಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್)ನಲ್ಲಿ ರಾಜೀವ ಕಡಪಟ್ಟಿ  ಹಾಗೂ ರಾಜೇಂದ್ರ ಪಾಟೀಲ ಇವರ ಹೆಸರಿನಲ್ಲಿ ಹೊಸ ಖಾತೆ ತೆರೆಯಲಾಗಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಖಾತೆ ಬದಲಾವಣೆಯ ಹಿಂದೆ ಆಡಳಿತಾತ್ಮಕ ಹಾಗೂ ಆರ್ಥಿಕ ಕಾರಣಗಳಿವೆಯೇ ಅಥವಾ ಬೇರೆ ಉದ್ದೇಶಗಳಿವೆಯೇ ಎಂಬ ಕುರಿತು ಸಂಸ್ಥೆಯ ಷೇರುದಾರರು ಹಾಗೂ ರೈತ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ. ಈ ಬೆಳವಣಿಗೆಗಳ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಅಧಿಕೃತ ಸ್ಪಷ್ಟನೆ ನೀಡಿದ ಬಳಿಕವೇ ಸಂಪೂರ್ಣ ಚಿತ್ರಣ ಹೊರಬರುವ ಸಾಧ್ಯತೆ ಇದೆ.

ಇನ್ನೊಂದೆಡೆ, ಜಮಖಂಡಿ ಶುಗರ್ಸ್‌ನ ಆಡಳಿತ ತನ್ನ ಹಿಡಿತದಿಂದ ಕೈತಪ್ಪದಂತೆ ಮಾಜಿ ಶಾಸಕ ಆನಂದ್ ನ್ಯಾಮಗೌಡ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಕಾರ್ಖಾನೆಯಲ್ಲಿನ ಆಂತರಿಕ ಭಿನ್ನಮತ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿಯೂ ಸಂಧಾನದ ಪ್ರಯತ್ನಗಳು ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯಸ್ಥಿಕೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ತೆರೆಮರೆಯ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.

ಈ ಮಧ್ಯೆ, ಬೆಳವಣಿಗೆಗಳು ಮಹತ್ವದ ತಿರುವು ಪಡೆದುಕೊಂಡಿದ್ದು, ಕಾರ್ಖಾನೆಯ ಎಲ್ಲ ನಿರ್ದೇಶಕ ಮಂಡಳಿ ಸದಸ್ಯರು ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆಯ ಬಳಿಕ ಜಮಖಂಡಿ ಶುಗರ್ಸ್‌ನ ಮುಂದಿನ ಆಡಳಿತಾತ್ಮಕ ಬೆಳವಣಿಗೆಗಳು ಯಾವ ದಿಕ್ಕಿನಲ್ಲಿ ಸಾಗಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

- Advertisement -