ಬಿಎಲ್‌ಓಗಳಿಗೆ ಬೆದರಿಕೆ ಹಾಕಿದರೆ ಕ್ರಿಮಿನಲ್ ಕೇಸ್: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ- ಯತ್ನಾಳ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಸೋಮವಾರ ನಗರದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿ.ಎಲ್.ಒ) ಅಗತ್ಯ ಮಾಹಿತಿಯನ್ನು ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೂತ್ ನಂ.70ರ ಬಿ.ಎಲ್.ಒ, ಮೇಲ್ವಿಚಾರಕರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ಬಿ.ಎಲ್.ಒ ಗಳಿಗೆ ಕೆಲವರಿಂದ ಬೆದರಿಕೆ ಹಾಗೂ ಒತ್ತಡದ ಕರೆಗಳು ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೂ ಯಾರ ಒತ್ತಡಕ್ಕೆ, ಬೆದರಿಕೆಗೆ ಮಣಿಯದೇ ಚುನಾವಣಾ ಅಧಿಕಾರಿಗಳ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲು ತಿಳಿಸಿದರು.
ಕೆಲವು ಗೂಂಡಾಗಳು ಪ್ರದೇಶ ಮತ್ತು ಬೂತಗಳು ಸಂಬಂಧವಿಲ್ಲದಿದ್ದರೂ ಸಹ ಬಿ.ಎಲ್.ಎ-2 ಎಂದು ಹೇಳಿಕೊಂಡು ಪ್ರತಿ ಬೂತಗಳಿಗೆ ಭೇಟಿ ನೀಡಿ ಬಿ.ಎಲ್.ಒ ಗಳಿಗೆ ದಬ್ಬಾಳಿಕೆ ಮಾಡಿ ತಮ್ಮ ಲೀಡರ್ ಮಾತಾಡುತ್ತಾರೆ ಎಂದು ಫೋನ್ ಹಚ್ಚಿ ಕೊಟ್ಟು ಒತ್ತಡ ಹೇರುತ್ತಿರುವುದನ್ನು ನಾನು ಸಹಿಸುವುದಿಲ್ಲ. ಯಾರಾದರೂ ಹೊರಗಿನವರು ಬಂದಲ್ಲಿ ಮೊಬೈಲ್ ದಲ್ಲಿ ಫೋಟೋ ಹೊಡೆದು ಕಳಿಸಿದರೆ ಮತ್ತು ಬಿ.ಎಲ್.ಒ ಗಳ ಮೇಲೆ ಒತ್ತಡ ಹೇರುವುದಾಗಲಿ, ದಬ್ಬಾಳಿಕೆ ಮಾಡಿ ಸಮಯ ಹಾಳು ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಬಿ.ಎಲ್.ಒ ಗಳು ಸೇರಿದಂತೆ ಈ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳಾಗಲಿ, ನಾಗರಿಕರಾಗಲಿ ಹೆದರದೇ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಎಂದು ಅಭಯ ಹಸ್ತ ನೀಡಿದರು.
ನಗರದ ಎಲ್ಲ ಮತದಾರ ನಾಗರಿಕರು ಬಿ.ಎಲ್.ಒ ಗಳು ನೀಡಿದ ಅರ್ಜಿ ಪಾರ್ಮ್ ಗಳನ್ನು ಮೊದಲು ಝರಾಕ್ಷ್ ಪ್ರತಿಯಲ್ಲಿ ತುಂಬಿ, ಬಿ.ಎಲ್.ಒ ಗಳಿಗೆ ತೋರಿಸಿ ನಂತರ ಮೂಲ ಪ್ರತಿ (ಓರಿಜನಲ್ ಫಾರ್ಮ್) ಯಲ್ಲಿ ತುಂಬಿ ಬಿ.ಎಲ್.ಒ ಗಳಿಗೆ ಸಹಕಾರ ನೀಡಬೇಕು. ಬಿ.ಎಲ್.ಒ ಗಳು ಸಹ ಮನೆ ಮನೆಗೆ ಹೋಗಿ ಸಮಾಧಾನದಿಂದ ತಪ್ಪಾಗದ ರೀತಿಯಲ್ಲಿ ಫಾರ್ಮ್ ತುಂಬಿಸಿ ಅಶೀಕ್ಷಿತ, ಕಾರ್ಮಿಕ ವರ್ಗ, ಬಡ ಕೂಲಿ ಕಾರ್ಮಿಕರಿಗೂ ಸಹಕಾರ ನೀಡಿ, ಪರಸ್ಪರ ಸಹಾಯ ಸಹಕಾರ ದಿಂದ ನಿಗದಿತ ಸಮಯದೊಳಗೆ (ಜುಲೈ 29) ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಲಹೆ ನೀಡಿದರು.
ಈಗಾಗಲೇ ಸುತ್ತಮುತ್ತಲಿನ ಕಾಖಂಡಕಿ, ತಿಕೋಟಾ, ಜುಮನಾಳ, ಶಿವಣಗಿ ಇತ್ಯಾದಿಗಳಿಂದ ಅಲ್ಪಸಂಖ್ಯಾತರ ಮತಗಳು ನಗರ ಪ್ರದೇಶದಲ್ಲಿ ಸೇರ್ಪಡೆಯಾಗಿವೆ ಎಂಬ ಆರೋಪವಿದ್ದು, ಇವುಗಳನ್ನು ಸಹ ರೇಶನ್ ಪಡೆಯಲು, ಸೊಸಾಯಿಟಿ ಸಾಲಕ್ಕಾಗಿ ತಮ್ಮ ಮೂಲ ವಾಸಸ್ಥಾನ ಗ್ರಾಮಗಳಲ್ಲಿಯೇ ಉಳಿಸುವುದು ಅವಶ್ಯವಾಗಿದೆ. ನಗರ ಪ್ರದೇಶದಿಂದ ರದ್ದುಗೊಳಿಸುವ ಪ್ರಕ್ರಿಯೆಯೂ ಆರಂಭವಾಗಿದ್ದು, ಇದು ಮ್ಯಾಪಿಂಗ್ ಸಮಯದಲ್ಲಿಯೂ ಗುರುತಿಸಲಾಗಿದೆ ಎಂದು ತಿಳಿಸಿದರು.
ಕೆಲವರು ಈ ಎಸ್.ಐ.ಆರ್ ಗೆ ಅಂಜಿ ಇಲ್ಲಸಲ್ಲದ ಆರೋಪ ಮಾಡುತ್ತ ತಿರುಗಾಡುತ್ತಿರುವ ಮುಖಂಡರು ನನ್ನ ವಿರುದ್ಧ ಹಾಕಿದ ಕೇಸ್ ನಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿ ಸೋತು, ಲಕ್ಷಕ್ಕೂ ಅಧಿಕ ದಂಡವನ್ನು ತುಂಬಿ ಇಂಗು ತಿಂದ ಮಂಗನಂತೆ ಹುಚ್ಚನಂತೆ ಬಿ.ಎಲ್.ಒ ಗಳಿಗೆ ಫೋನ್ ಮಾಡಿ ಹೆದರಿಸುತ್ತಿರುವುದನ್ನು ಅನೇಕ ಬಿ.ಎಲ್.ಒ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಇಂತವರ ವಿರುದ್ಧ ತಕ್ಷಣ ಕಾಯ್ದೆ ಪ್ರಕಾರ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.