Loading...

ಸಚಿವ ಸಂಪುಟ ಕಸರತ್ತು: ಡಿಕೆಶಿ ಸಚಿವ ಸಂಪುಟದಲ್ಲಿ ಯಾವ ಮಹಿಳಾ ಶಾಸಕಿಗೆ ದೊರೆಯಲಿದೆ ಮಂತ್ರಿಗಿರಿ...?

Suddi Mitra Editor

July 08, 2026 • 10:55 AM

ಸಚಿವ ಸಂಪುಟ ಕಸರತ್ತು: ಡಿಕೆಶಿ ಸಚಿವ ಸಂಪುಟದಲ್ಲಿ  ಯಾವ ಮಹಿಳಾ ಶಾಸಕಿಗೆ ದೊರೆಯಲಿದೆ ಮಂತ್ರಿಗಿರಿ...?

ಅಪ್ಪು ಪೋತರಾಜ

ಇನಸೈಡ್ ಸ್ಟೋರಿ - 2

ಬೆಂಗಳೂರು : ಮೊದಲನೇಯ ಹಂತದ ಸಚಿವ ಸಂಪುಟದಲ್ಲಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನಮಾನ ನೀಡಿಲ್ಲ. ಹೀಗಾಗಿ ಎರಡನೇಯ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವ ಮಹಿಳಾ ಶಾಸಕಿ ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ಆರೋಪವನ್ನು ವ್ಯವಸ್ಥಿತವಾಗಿ ಬಿಜೆಪಿ ಕಾಂಗ್ರೆಸ್ ತಲೆಗೆ ಕಟ್ಟಿದೆ. ಈಗ ಮಹಿಳೆಯರಿಗೆ ಸಚಿವ ಸ್ಥಾನ ನೀಡದೇ ಹೋದರೆ ಕಾಂಗ್ರೆಸ್‌ಗೆ ಮತ್ತೊಂದು ಸಂಕಟ ಎದುರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸ್ಥಾನ ಅಲಂಕರಿಸಿದ ಲಕ್ಷ್ಮೀ ಹೆಬ್ಬಾಳಕರ ಮತ್ತೊಮ್ಮೆ ಸಚಿವೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇನ್ನೂ ನಯನ ಮೋಟಮ್ಮ, ಅತ್ತ ವಿಧಾನ ಪರಿಷತ್‌ನಲ್ಲಿ ಹಿರಿಯ ಸದಸ್ಯೆ, ಸಚಿವೆಯಾಗಿರುವ ಅನುಭವ ಹೊಂದಿರುವ ಉಮಾಶ್ರೀ ಸಹ ಸಚಿವೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಬಾರಿಯೂ ಸಚಿವೆಯಾಗುವ ಇಂಗಿತ ವ್ಯಕ್ತಪಡಿಸಿದ್ದ ರೂಪಕಲಾ ಶಶಿಧರ ಸಹ ರೇಸ್‌ನಲ್ಲಿದ್ದಾರೆ, ಆದರೆ ಈಗಾಗಲೇ ಅವರ ತಂದೆ ಕೆ.ಎಚ್. ಮುನಿಯಪ್ಪ ಅವರಿಗೆ ಸಚಿವ ಸ್ಥಾನ ದೊರಕಿದೆ. ಅತ್ತ ಅಲ್ಪಸಂಖ್ಯಾತ ಸಮುದಾಯದ ಕಲಬುರ್ಗಿ ಶಾಸಕ ಕನೀಜ್ ಫಾತಿಮಾ ಹಾಗೂ ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು ಸಹ ಸಚಿವೆಯಾಗುವ ನಿಟ್ಟಿನಲ್ಲಿ ಪ್ರಯತ್ನದಲ್ಲಿ ಸಾಕಷ್ಟು ಮುಂದಿದ್ದಾರೆ. 

ಕರ್ನಾಟಕ ಸರ್ಕಾರವು ಅನಿವಾಸಿ ಕನ್ನಡಿಗರ ಸಮಸ್ಯೆಗಳ ಪರಿಹಾರ ಮತ್ತು ಕಲ್ಯಾಣಕ್ಕಾಗಿ ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯವನ್ನು ಸ್ಥಾಪಿಸಲು ನಿರ್ಧರಿಸಿದೆ. ಹೀಗಾಗಿ ಈ ವಲಯದಲ್ಲಿ ಕೆಲಸ ಮಾಡಿರುವ ಅನುಭವವುಳ್ಳ ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದರೂ ಅಚ್ಚರಿ ಏನಿಲ್ಲ. 

ಬಳ್ಳಾರಿ ಲೋಕಸಭೆಗೆ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಎದುರಾಗಿದ್ದ ಸಂಡೂರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಇ.ಅನ್ನಪೂರ್ಣ ಅವರ ಹೆಸರು ಮುಂಚೂಣಿಯಲ್ಲಿದೆ. 

ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಲ್ಲಿ ಕೈ ಬಿಡಲಾಗಿತ್ತು. ಈಗ ಪರಿಶಿಷ್ಟ ಪಂಗಡ ಕೋಟಾ ಹಾಗೂ ಬಳ್ಳಾರಿ ಜಿಲ್ಲಾ ಕೋಟಾ ಅಡಿಯಲ್ಲಿ ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ಒಲಿದು ಬಂದರೂ ಅಚ್ಚರಿಯಿಲ್ಲ.

ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿಯಾಗಿರುವ ನಯನಾ ಮೋಟಮ್ಮ ಕ್ರೀಯಾಶೀಲ ಶಾಸಕಿ ಎಂಬ ಹೆಸರು ಗಳಿಸಿದ್ದು, ಅವರ ಹೆಸರು ಸಹ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದೆ.

ಗುರು ಎಸ್.ಎಂ. ಕೃಷ್ಣ ಅವರ ದಾರಿ ದಾರಿ

 ಅನುಸರಿಸುವರೇ?

ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಅಲ್ಪಸಂಖ್ಯಾತ ಮಹಿಳಾ ಸಚಿವ ಸ್ಥಾನವನ್ನು ನೀಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದ ಅಂದಿನ ಮುಖ್ಯಮಂತ್ರಿ ದಿ.ಎಸ್.ಎಂ. ಕೃಷ್ಣ ಅವರ ಗರಡಿಯಲ್ಲಿಯೇ ಬೆಳೆದಿರುವ ಹಾಲಿ ಸಿ.ಎಂ. ಡಿ.ಕೆ. ಶಿವಕುಮಾರ್ ಈಗ ತಮ್ಮ ಗುರುವಿನ ಹೆಜ್ಜೆಯನ್ನೇ ತಮ್ಮ ಸಂಪುಟದಲ್ಲಿಯೂ ಇರಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. 

ಮಹಿಳೆಯರಿಗೆ ಮಹಿಳಾ ಮತ್ತು ಕುಟುಂಬ ಕಲ್ಯಾಣ ಖಾತೆಯೇ ಖಾಯಂ ಎನ್ನುವ ಕಾಲಘಟ್ಟದಲ್ಲಿ ಅದರಲ್ಲೂ ಅಲ್ಪಸಂಖ್ಯಾತ ಮಹಿಳಾ ಶಾಸಕಿ ನಫೀಜಾ ಫಜಲ್ ಅವರಿಗೆ ವೈದ್ಯಕೀಯ ಶಿಕ್ಷಣದಂತಹ ಖಾತೆ ನೀಡುವ ಮೂಲಕ ಅಲ್ಪಸಂಖ್ಯಾತ ಮಹಿಳಾ ಸಬಲೀಕರಣ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಶ್ರೀಕಾರ ಬರೆದರು. 1991ರ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಖಾತೆ, ನಂತರ ಸಚಿವ ಸಂಪುಟ ವಿಸ್ತರಣೆ ಬಳಿಕ 2001-2004 ರವರೆಗೆ ಐಟಿ ಬಿಟಿ ಖಾತೆ ನೀಡಿದರು.

ಆದರೆ 2004 ರಿಂದ ಇಲ್ಲಿಯವರೆಗೂ ಅಲ್ಪಸಂಖ್ಯಾತ ಮಹಿಳಾ ಶಾಸಕಿ ಸಚಿವೆಯಾಗಿಲ್ಲ. ಹೀಗಾಗಿ ತಮ್ಮ ರಾಜಕೀಯ ಗುರು ಇರಿಸಿದ್ದ ಮಹತ್ವದ ಹೆಜ್ಜೆಯನ್ನು ಡಿ.ಕೆ. ಶಿವಕುಮಾರ್ ಇರಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಯಾವೊಂದು ರಾಜ್ಯದಲ್ಲಿಯೂ ಮಹಿಳಾ ಮುಸ್ಲಿಂ ಸಚಿವೆ ಇಲ್ಲವೇ ಇಲ್ಲ. ಎಸ್.ಎಂ. ಕೃಷ್ಣಾ ಸೃಜಿಸಿದ ಇತಿಹಾಸದ ನಂತರವೂ ಎಲ್ಲಿಯೂ ನಂತರ ಮುಸ್ಲಿಂ ಮಹಿಳೆ ಶಾಸಕಿಯಾಗಿ ಆಯ್ಕೆಯಾಗಿಲ್ಲ.

ಈ ಬಾರಿ ಕಾಂಗ್ರೆಸ್‌ನಲ್ಲಿ ಇಬ್ಬರು ಅಲ್ಪಸಂಖ್ಯಾತ ಶಾಸಕಿಯರಿದ್ದಾರೆ. ಓರ್ವರು ಮೇಲ್ಮನೆಯಲ್ಲಿದ್ದರೆ, ಇನ್ನೋರ್ವರು ಕೆಳಮನೆಯಲ್ಲಿ. ಕಲಬುರ್ಗಿ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು.

ಕನೀಸ್ ಫಾತಿಮಾ ಅವರು ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಅವರ ಧರ್ಮಪತ್ನಿ. ರಾಜಕಾರಣವನ್ನು ಹತ್ತಿರದಿಂದ ನೋಡಿದವರು. ಸಾತ್ವಿಕತೆ, ಸರಳತೆಯ ಸ್ವಭಾವದಿಂದಲೇ ಆಡಳಿತ ಯಂತ್ರವನ್ನು ಅಷ್ಟೇ ಸಮರ್ಥವಾಗಿ ಮುನ್ನೆಡಿಸುತ್ತಿದ್ದಾರೆ, ಎರಡು ಬಾರಿ ಶಾಸಕಿಯಾದ ಅನುಭವವಿದೆ. ಹೀಗಾಗಿ ಸಚಿವೆಯಾಗುವ ನಿಟ್ಟಿನಲ್ಲಿ ಅವರು ದಾಪುಗಾಲು ಇರಿಸಿದ್ದೂ ಇದೆ. ಇನ್ನೂ ವಿಧಾನ ಪರಿಷತ್ ಸದಸ್ಯೆಯಾಗಿರುವ ಬಲ್ಕೀಷ್ ಬಾನು ಶಿವಮೊಗ್ಗೆ ನೆಲದ ನಾಯಕಿ. ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿ ಜಿಲ್ಲೆಯಲ್ಲಿ ಹೊಸ ಛಾಪು ಮೂಡಿಸಿ, ಖಡಕ್ ಆಗಿ ಕೆಡಿಪಿ ಸಭೆ ನಡೆಸಿ ಮನೆ ಮಾತಾಗಿದ್ದು, ಇಂದಿಗೂ ಜನರು ಅವರನ್ನು ಪ್ರೆಸಿಡೆಂಟ್ ಬಲ್ಕೀಷ್ ಎಂಬ ಉಪನಾಮದಿಂದಲೇ ಕರೆಯುತ್ತಾರೆ ಎಂದರೆ ಆ ಸ್ಥಾನಕ್ಕೆ ನ್ಯಾಯ ಒದಗಿಸಿದ್ದರು ಎಂಬುದೇ ಅರ್ಥ. ಈಗ ಚಿಂತಕರ ಚಾವಡಿಯಲ್ಲಿ ಅರ್ಥಗರ್ಭಿತ ಚರ್ಚೆ ನಡೆದಾಗ ಬಲ್ಕೀಷ್ ಬಾನು ಸದಾ ಜನಪರ, ಮಹಿಳಾ ಪರ ಧ್ವನಿಯಾಗುವುದುಂಟು. ಜನರ ಪರವಾಗಿ ವಕಾಲತ್ತು ವಹಿಸುವುದುಂಟು. ಹೀಗಾಗಿ ಅವರು ಸಚಿವ ಸ್ಥಾನದ ರೇಸದ ನಲ್ಲಿದ್ದಾರೆ.

ಒಟ್ಟಾರೆ ಈ ಬಾರಿ ಡಿ.ಕೆ. ಶಿವಕುಮಾರ್ ತಮ್ಮ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ದೊರಕಿಸಿದರೆ ತಮ್ಮ ಗುರುವಿನ ಸೂತ್ರ ಪಾಲಿಸಿದಂತಾಗುವುದರಲ್ಲಿ ಎರಡು ಮಾತಿಲ್ಲ.

- Advertisement -