ಸಚಿವ ಸಂಪುಟ ಕಸರತ್ತು `ಅಗ್ನಿ'ಪರೀಕ್ಷೆಗೆ ಸಜ್ಜಾಗುತ್ತಿರುವ `ಬಂಡೆ' ಟ್ರಬಲ್ ಷೂಟರ್‌ಗೆ ಮತ್ತೊಂದು ಟಾಸ್ಕ್...!!
ಅಪ್ಪು ಪೋತರಾಜ
ಬೆಂಗಳೂರು : ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡನೇಯ ದಿನಕ್ಕೆ ಖಾತೆ ಕ್ಯಾತೆಯಿಂದಾಗಿ ರಾಜಿ-ಸಂಧಾನ ಮಾಡುವಲ್ಲಿ ಹೈರಾಣಾಗಿದ್ದ ಸಿ.ಎಂ. ಡಿ.ಕೆ. ಶಿವಕುಮಾರ ಈಗ ಎರಡನೇಯ ಅಗ್ನಿ ಪರೀಕ್ಷೆ ಎರಡನೇಯ ಹಂತಕ್ಕೆ ಸಜ್ಜಾಗುತ್ತಿದ್ದಾರೆ.
ಸಚಿವ ಸಂಪುಟ ಮುಹೂರ್ತ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿಗಳ ಎದೆ ಢವಢವವಾಗುವಂತೆ ಕನಕಪುರ ಬಂಡೆ ಡಿ.ಕೆ. ಶಿವಕುಮಾರ ಅವರ ಹೃದಯ ಬಡಿತ ಹೆಚ್ಚಿಸಿದ್ದೂ ಸುಳ್ಳಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಅಂತರಾಜ್ಯ ಮಟ್ಟದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಅಪಾಯ ಬಂದಾಗ ಅದಕ್ಕೆ ಎದೆಕೊಟ್ಟು ನಿಲ್ಲುವ ಟ್ರಬಲ್ ಷೂಟರ್ ಡಿ.ಕೆ. ಶಿವಕುಮಾರ್ ಅವರ ಸಂಪುಟದ ಹಿರಿಯ ಸಚಿವರಾಗಿರುವ ರಾಮಲಿಂಗಾರೆಡ್ಡಿ ತಮಗೆ ಈ ಖಾತೆ ಬೇಡ ಎಂದು ಮುನಿಸಿಕೊಂಡರು, ನಂತರ ಕೊಡುವುದಾದರೆ ಪೂರ್ಣ ಪ್ರಮಾಣದ ಜವಾಬ್ದಾರಿ ಕೊಡಿ ಎಂದು ಸಚಿವ ಕೃಷ್ಣ ಭೈರೆಗೌಡ ಸಾತ್ವಿಕ ಅಸಮಾಧಾನ ಹೊರಹಾಕಿದರು. ಇದು ಡಿ.ಕೆ. ಶಿವಕುಮಾರ್ ಅವರಿಗೆ ನುಂಗಲಾರದ ತುತ್ತಾಗಿತ್ತು. ಕೊನೆಗೂ ಸಹ ಟ್ರಬಲ್ ಷೂಟ್ ಮಾಡುವಲ್ಲಿ ಡಿ.ಕೆ. ಶಿವಕುಮಾರ ಯಶಸ್ವಿಯಾದರು.
ಈಗ ಎರಡನೇಯ ಹಂತದ ಸಚಿವ ಸಂಪುಟ ಕಸರತ್ತು. ಆಕಾಂಕ್ಷಿಗಳ ದೊಡ್ಡ ದಂಡು, `ಯಾವ ಷರತ್ತು' ಹಾಗೂ `ಯಾವ ಅಸಮಾಧಾನವೂ ಇಲ್ಲದೇ ಮುಖ್ಯಮಂತ್ರಿ ಗಾದಿಗೆ ರಾಜಿನಾಮೆ ನೀಡಿದ ಸಿದ್ಧರಾಮಯ್ಯ ಅವರ ಬೆಂಬಲಿತ ಶಾಸಕರಿಗೆ ಸಚಿವ ಸ್ಥಾನ ನೀಡುವ, ಪ್ರಾದೇಶಿಕವಾರು, ಸಿನಿಯಾರಿಟಿ, ಪಕ್ಷ ಸಂಘಟನೆ ಹಾಗೂ ಹೊಸ ಮುಖ, ಮಹಿಳಾ ಶಾಸಕರಿಗೆ ಅವಕಾಶ ಹೀಗೆ ಡಿ.ಕೆ. ಶಿವಕುಮಾರ್ ಅವರಿಗೆ ಟಾಸ್ಕ್ಗಳು ದೊಡ್ಡಮಟ್ಟದಿವೆ. ತನ್ನ ಪರವಾಗಿ ಬ್ಯಾಟಿಂಗ್ ಮಾಡಿ ತನ್ನ ಜೊತೆ ಕಟ್ಟಾ ಬೆಂಬಲಿಗರಾಗಿ ನಿಂತ ಶಾಸಕರನ್ನು ಕಡೆಗಣಿಸುವಂತಿಲ್ಲ.
ಎಲ್ಲವನ್ನೂ ಹೈಕಮಾಂಡ್ ಮೇಲೆ ಹಾಕಿ ಕುಳಿತುಕೊಳ್ಳುವುದು ಅಸಾಧ್ಯದ ಮಾತು. ಎಲ್ಲರನ್ನೂ ತೃಪ್ತಿ ಪಡಿಸುವುದು ಅಸಾಧ್ಯದ ಮಾತು. ಈಗಾಗಲೇ ಎಲ್ಲರೂ ಸಚಿವರಾಗುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಲಾಬಿ ಮಾಡುತ್ತಲೇ ಇದ್ದಾರೆ.
*ಕಾದು ನೋಡುವ ಸಮಯವಲ್ಲ...!!*
ಆಯಾ ಶಾಸಕರ ಅಭಿಮಾನಿಗಳ ದಂಡು ಬೆಂಗಳೂರಿಗೆ ಭೇಟಿ ನೀಡುತ್ತಲೇ ಇದೆ, ಎಲ್ಲರೂ ಬೇಕಾದವರೇ ಒಬ್ಬರಿಗೆ ಮಣೆ, ಇನ್ನೊಬ್ಬರಿಗೆ ಕಡೆಗಣನೆಯಾದರೆ ಯಾವ ರಾಜಕೀಯ ಕ್ಷೀಪ್ರ ಕ್ರಾಂತಿಯೂ ಘಟಿಸಬಹುದು. ಮೊದಲನೇ ಸಚಿವ ಸಂಪುಟದ ವೇಳೆಯಲ್ಲಿ `ಎರಡನೇಯ ಸಚಿವ ಸಂಪುಟ ವಿಸ್ತರಣೆ' ಛಾನ್ಸ್ ಸಿಗಬಹುದು ಎಂದು ಅನೇಕರು ಕಾದು ನೋಡುವ ತಂತ್ರ ಎದುರಿಸುತ್ತಿದ್ದಾರೆ, ಇದರಲ್ಲಿಯೂ ಛಾನ್ಸ್ ದೊರಕದೇ ಹೋದರೆ `ಬಂಡಾಯ' ಮೊಳಗುವುದನ್ನು ತಳ್ಳಿ ಹಾಕುವಂತಿಲ್ಲ.
ಇನ್ನೂ ಎಚ್.ಕೆ. ಪಾಟೀಲ, ದಿನೇಶ ಗುಂಡೂರಾವ್, ಡಾ.ಎಚ್.ಸಿ. ಮಹಾದೇವಪ್ಪ ಆರ್ ಬಿ ತಿಮ್ಮಾಪುರ ಸೇರಿದಂತೆ ಘಟಾನುಘಟಿ ನಾಯಕರು ಕ್ಯಾಬಿನೆಟ್ ಪಾರ್ಟ್ ಆಗಿಲ್ಲ, ಮಹಿಳಾ ಶಾಸಕರನ್ನು ಸಹ ಪರಿಗಣಿಸಬೇಕಿದೆ, ಅಹಿಂದ ವರ್ಗಕ್ಕೂ ಅಷ್ಟೇ ಪ್ರಾತಿನಿಧ್ಯ ನೀಡಬೇಕಿದೆ. ಈ ಎಲ್ಲ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಸಜ್ಜಾಗುತ್ತಿದ್ದಾರೆ.
ಒಂದರ್ಥದಲ್ಲಿ ಇದು ಅವರ ಅಗ್ನಿಪರೀಕ್ಷೆಯೂ ಹೌದು.