Loading...

ಸಿದ್ಧರಾಮಯ್ಯ ವಿರುದ್ಧ ಗುಡುಗಿದ ಎಂ.ಡಿ. ಲಕ್ಷ್ಮೀ ನಾರಾಯಣ ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ಕಗ್ಗೊಲೆ

Suddi Mitra Editor

July 09, 2026 • 07:29 AM

ಸಿದ್ಧರಾಮಯ್ಯ ವಿರುದ್ಧ ಗುಡುಗಿದ ಎಂ.ಡಿ. ಲಕ್ಷ್ಮೀ ನಾರಾಯಣ ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ಕಗ್ಗೊಲೆ

ವಿಜಯಪುರ : ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಿಂಚಿತ್ತೂ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸದೇ ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯ ಅವರು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಯ ಕಗ್ಗೊಲೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ ಅಸಮಾಧಾನ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಸೂಧನ ನಾಯಕ ಅವರು ನೀಡಿರುವ ವರದಿಯನ್ನು ಗೌಪ್ಯವಾಗಿ ಇರಿಸಿದೇ ಅದನ್ನು ಸದನದಲ್ಲಿ ಮಂಡನೆ ಮಾಡಲೇಬೇಕು, ಅದರ ಸಮಗ್ರ ಚರ್ಚೆಗೊಳಪಡಿಸಬೇಕು, ಇಲ್ಲವಾದರೆ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ವಿಧಾನಸಭೆಗೆ ಮುತ್ತಿಗೆ ಹಾಕಲು ನಾವು ಹಿಂದೇಟು ಹಾಕುವುದಿಲ್ಲ, ಕೂಡಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗಗಳು ಕಾಂಗ್ರೆಸ್ ಅವಧಿಯಲ್ಲಿ ತತ್ತರಿಸಿ ಹೋಗಿವೆ, ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸ್ವೀಕರಿಸಲೇ ಇಲ್ಲ, ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವುದಾಗಿ ಹೇಳಿ ಅಧಿಕಾರ ನಡೆಸಿದ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳ ಬಗ್ಗೆ ಚಕಾರ ಎತ್ತದೇ ದೊಡ್ಡ ಅನ್ಯಾಯ ಮಾಡಿದ್ದಾರೆ, ಬಜೆಟ್‌ನಲ್ಲಿ ಕೇವಲ 100 ಕೋಟಿ ರೂ. ಮೀಸಲಿರಿಸುವ ಮೂಲಕ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡಿದ ಅವರಿಗೆ ಹಿಂದುಳಿದ ವರ್ಗ ಹಾಗೂ ದೇವರು ಮೆಚ್ಚುವುದಿಲ್ಲ ಎಂದರು. ಬಿಹಾರ, ತೆಲಂಗಾಣ ಸೇರಿದಂತೆ ಎಲ್ಲ ರಾಜ್ಯಗಳು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿವೆ, ಅಹಿಂಧ ವರ್ಗದ ಐಕಾನ್ ಆಗಿದ್ದ ಸಿದ್ಧರಾಮಯ್ಯ ಅವರು ಮಾತ್ರ ಎರಡು ಅವಧಿಯಲ್ಲಿಯೂ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಲೇ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ಶಾಸಕ ಯತ್ನಾಳ ಅವರ ಪಕ್ಷಕ್ಕೆ ಕರೆ ತರುವ ವಿಷಯವಾಗಿ ನಾನು ಪ್ರತಿಕ್ರಿಯೆ ನೀಡಲು ಅಸಾಧ್ಯ, ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ, ಇದು ಪಕ್ಷದ ಆಂತರಿಕ ವಿಷಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ತಡೆಯುವಂತಿಲ್ಲ,
ಈಗಿರುವ ಸಿಎಂ ಮೇಲೆ ಭರವಸೆ ಇಲ್ಲ
ಬಿಜೆಪಿ ಮುಖಂಡರಾದ ಶರಣು ತಳಕೇರಿ ಮಾತನಾಡಿ, ಈಗಿರುವ ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ನಮಗಿಲ್ಲ, ಈ ಹಿಂದೆ ಬಹಿರಂಗವಾಗಿಯೇ ಕಾಂತರಾಜ್ ಆಯೋಗದ ವರದಿಯ ಬಗ್ಗೆ ಅಪಸ್ವರ ಹಾಕಿದ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ನಮಗಿಲ್ಲ, ಈ ವಿಷಯದಲ್ಲಿ ಸಿದ್ಧರಾಮಯ್ಯ ಮೌನ ವಹಿಸಬಾರದು, ತಾವೇ ರೂಪಿಸಿದ ವರದಿಯನ್ನು ಸಿದ್ಧರಾಮಯ್ಯ ಒಪ್ಪಬೇಕು, ಅವರ ಮೌನ ಅನೇಕ ಸಂಶಯಗಳಿಗೆ ಕಾರಣವಾಗಿದೆ ಎಂದರು.
ಹಿಂದುಳಿದ ವರ್ಗಗಳ ನೇತಾರ ಡಿ.ದೇವರಾಜ್ ಅರಸು ಅವರ ದಾಖಲೆ ಮುರಿದಿರುವೆ ಎಂದು ಅಹಂಕಾರದಿAದ ಬೀಗುತ್ತಿರುವ ಸಿದ್ಧರಾಮಯ್ಯ ಅವರು ರಾಜಿನಾಮೆ ನೀಡುವ ಮುನ್ನ ತರಾತುರಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸಿ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದರು. ತೆಲಂಗಾಣದಲ್ಲಿ ೭೫ ದಿನದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ, ಆದರೆ ಇಲ್ಲಿರುವ ಕಾಂಗ್ರೆಸ್ ಸರ್ಕಾರ ದುರುದ್ದೇಶಪೂರ್ವಕವಾಗಿ ಹಿಂದುಳಿದ ವರ್ಗಗಳ ವರದಿಯನ್ನು ಸ್ವೀಕರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ಮುಖಂಡರಾದ ಸಾಬು ಮಾಶ್ಯಾಳ, ರಾಜಕುಮಾರ ಸಗಾಯಿ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

- Advertisement -