Loading...

ಜನರ ಸಮಸ್ಯೆಗೆ ತ್ವರಿತ ಸ್ಪಂದನೆ: ಡಿಕೆಶಿ ಸರ್ಕಾರದಿಂದ ‘ಪ್ರಜಾ ಸೇವೆ ಇಲಾಖೆ’ ಘೋಷಣೆ! ರೈತರಿಗೆ ಸೌಲಭ್ಯಗಳ ಮಳೆ ! 224 ಕ್ಷೇತ್ರಗಳಲ್ಲಿ ಜನಸ್ಪಂದನಾ ಸಭೆ ಕಡ್ಡಾಯ: CM D K Shivakumar

Suddi Mitra Editor

June 20, 2026 • 09:22 AM

ಜನರ ಸಮಸ್ಯೆಗೆ ತ್ವರಿತ ಸ್ಪಂದನೆ: ಡಿಕೆಶಿ ಸರ್ಕಾರದಿಂದ ‘ಪ್ರಜಾ ಸೇವೆ ಇಲಾಖೆ’ ಘೋಷಣೆ! ರೈತರಿಗೆ ಸೌಲಭ್ಯಗಳ ಮಳೆ ! 224 ಕ್ಷೇತ್ರಗಳಲ್ಲಿ ಜನಸ್ಪಂದನಾ ಸಭೆ ಕಡ್ಡಾಯ: CM D K Shivakumar

 ಬೆಂಗಳೂರು: ಜೂನ್ 20: ಮುಖ್ಯಮಂತ್ರಿ ಡಿ ಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಹಲವು ಮಹತ್ವದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಾರ್ವಜನಿಕ ಅಹವಾಲುಗಳ ನಿರ್ವಹಣೆ, ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆ ನಡೆಯಿತು. 

ಎರಡನೇ ಕ್ಯಾಬಿನೆಟ್ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಂತರ ಸುದ್ದಿಗೋಷ್ಠಿ ನಡೆಸಿ ಮಹತ್ವದ ನಿರ್ಧಾರಗಳನ್ನು ಘೋಷಿಸಿದ್ದಾರೆ. ಈ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಈಶ್ವರ್ ಖಂಡ್ರೆ, ಯು ಟಿ ಖಾದರ್ ಉಪಸ್ಥಿತರಿದ್ದರು.

ಪ್ರಜಾ ಸೇವೆ ಇಲಾಖೆ ಸ್ಥಾಪನೆಗೆ ನಿರ್ಧಾರ:

ಸರ್ಕಾರ ಇದೀಗ ಹೊಸದಾಗಿ ಪ್ರಜಾ ಸೇವೆ ಇಲಾಖೆಯನ್ನು ಸೃಷ್ಟಿಸಲು ನಿರ್ಧರಿಸಿದೆ. ಈ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಲಾಗುತ್ತದೆ. ಒಬ್ಬ ಐಎಎಸ್‌ ಅಧಿಕಾರಿಯ ನೇತೃತ್ವದಲ್ಲಿ ಈ ಇಲಾಖೆ ಕಾರ್ಯಾರಂಭ ಮಾಡಲಿದೆ. ಯಾವುದೇ ಸಚಿವರಿಗೆ ಅರ್ಜಿ ಸಲ್ಲಿಸಿದರೂ ಅದನ್ನು ಈ ಇಲಾಖೆಗೆ ತರಲಾಗುತ್ತದೆ. ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಜಿಲ್ಲಾ ಮಂತ್ರಿಗಳು ಮತ್ತು ಶಾಸಕರು ವಾರಕ್ಕೊಮ್ಮೆ ಜನಸ್ಪಂದನಾ ಸಭೆಗಳನ್ನು ನಡೆಸಬೇಕು. ಅಲ್ಲಿ ತಿಳಿದುಬಂದ ಸಮಸ್ಯೆಗಳನ್ನು ಸಂಪುಟ ಸಭೆಯಲ್ಲಿ ಪರಿಶೀಲಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

15 ದಿನಗಳ ಕಾರ್ಯಯೋಜನೆ:

ಸಭೆಯಲ್ಲಿ ಎಲ್ಲಾ ಇಲಾಖೆಗಳು 15 ದಿನಗಳೊಳಗೆ ತಮ್ಮ ಕಾರ್ಯ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಇಲಾಖಾ ಕಾರ್ಯದರ್ಶಿಗಳು ಕ್ಷೇತ್ರಮಟ್ಟದಲ್ಲಿ ಪರಿಶೀಲನೆ ನಡೆಸಿ ಜನರಿಗೆ ತಲುಪುವ ಸೇವೆಗಳ ಗುಣಮಟ್ಟ ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. 

ಪಾರದರ್ಶಕ ಆಡಳಿತಕ್ಕೆ ಒತ್ತು:

"ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಸರ್ಕಾರದ ಆದ್ಯತೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಹೊಸ ಆಡಳಿತಾತ್ಮಕ ವ್ಯವಸ್ಥೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ರೈತರಿಗೆ ಸಹಾಯ:

ರೈತರಿಗೆ ಹಳ್ಳಿಗಳಲ್ಲಿ ರೇಷ್ಮೆ ಮನೆಗಳಿಗೆ ವಿದ್ಯುತ್ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಹೈನುಗಾರಿಕೆ ಮಾಡುವವರಿಗೆ ಹಸುಗಳನ್ನು ಕಟ್ಟುವ ಕೊಟ್ಟಿಗೆಗಳಿಗೂ ವಿದ್ಯುತ್ ವಿನಾಯಿತಿ ಘೋಷಿಸಲಾಗಿದೆ.

ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:

ಯಾದಗಿರಿ ಜಿಲ್ಲೆಯಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

ವಿದ್ಯುತ್ ಮತ್ತು ನೀರು ಸಂಪರ್ಕ: 

ಪೂರ್ಣಗೊಂಡ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರು ಸಂಪರ್ಕವನ್ನು 15 ದಿನಗಳ ಒಳಗೆ ಒದಗಿಸುವಂತೆ ಸೂಚಿಸಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ.

ಸಂಡೂರು ಬಸ್ ನಿಲ್ದಾಣ

ಸಂಡೂರಿನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಮತ್ತು ಮೂಲಭೂತ ಸೌಕರ್ಯಗಳನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ.

- Advertisement -