Loading...

ನಗರ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ: ಸಿಎಸ್‌ಆರ್ ಅನುದಾನ ಬಳಕೆಗೆ ಸಚಿವ ಎಂ ಬಿ ಪಾಟೀಲ ಚಿಂತನೆ

Suddi Mitra Editor

June 26, 2026 • 02:06 PM

ನಗರ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ: ಸಿಎಸ್‌ಆರ್ ಅನುದಾನ ಬಳಕೆಗೆ ಸಚಿವ ಎಂ ಬಿ ಪಾಟೀಲ ಚಿಂತನೆ

ವಿಜಯಪುರ : ಕಳೆದ ವರ್ಷದ ಭಾರಿ ಮಳೆಯಿಂದ ನಗರದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅಗತ್ಯವಿದ್ದರೆ ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನವನ್ನು ಕೂಡ ಬಳಸಲಾಗುವುದು ಎಂದು ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ತಿಳಿಸಿದರು.

ನಗರದಲ್ಲಿ ಪ್ರವಾಹ ನಿಯಂತ್ರಣ ನಿಧಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಕಳೆದ ವರ್ಷ ವಾಡಿಕೆಗಿಂತ ಅಧಿಕ ಮಳೆಯಾದ ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಇಂತಹ ಪರಿಸ್ಥಿತಿ ಮತ್ತೆ ಉಂಟಾಗದಂತೆ ಕೋಟೆ ಗೋಡೆ ಕಂದಕ ಹಾಗೂ ಪ್ರಮುಖ ಕಾಲುವೆಗಳ ಹೂಳು ತೆಗೆಯುವ ಮತ್ತು ಪಿಚ್ಚಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಕಂದಕಗಳಲ್ಲಿ ಮಣ್ಣು ಕುಸಿಯದಂತೆ ಪಿಚ್ಚಿಂಗ್ ಕಾಮಗಾರಿ ನಡೆಸಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ 6 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಿಡಿಎ ಮತ್ತು ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಅನುದಾನವನ್ನು ಮರುಹೊಂದಾಣಿಕೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ತಮ್ಮ ಮತಕ್ಷೇತ್ರದ ಇತರೆ ಕಾಮಗಾರಿಗಳ ಅನುದಾನವನ್ನು ಕೂಡ ವರ್ಗಾವಣೆ ಮಾಡಲಾಗುವುದು. ಹೆಚ್ಚುವರಿ ಹಣದ ಅವಶ್ಯಕತೆ ಎದುರಾದರೆ ಕಂಪನಿಗಳ ಸಿಎಸ್‌ಆರ್ ಅನುದಾನ ಪಡೆಯುವ ಚಿಂತನೆಯೂ ಇದೆ ಎಂದು ಸಚಿವರು ತಿಳಿಸಿದರು.

ನಗರದಲ್ಲಿ ಎಷ್ಟೇ ಮಳೆಯಾದರೂ ಪ್ರವಾಹ ಉಂಟಾಗದಂತೆ ಶಾಶ್ವತ ವ್ಯವಸ್ಥೆ ರೂಪಿಸಲಾಗುತ್ತಿದೆ. ಶಿವಾಜಿ ವೃತ್ತದಿಂದ ಬಿದರಿ ಆಸ್ಪತ್ರೆಯವರೆಗೆ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ಹೊರಭಾಗದಿಂದ ನಗರಕ್ಕೆ ನೀರು ಹರಿದು ಬರುವುದನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾಮಗಾರಿಗಳ ನಿರಂತರ ಉಸ್ತುವಾರಿ ವಹಿಸಿದ್ದು, ನಗರದಲ್ಲಿ ಒಟ್ಟು 168 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಇವು ಪೂರ್ಣಗೊಂಡ ಬಳಿಕ ಪ್ರವಾಹ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಸ್ತೆ ಅಭಿವೃದ್ಧಿಗೆ 150 ಕೋಟಿ ರೂ.

ನಗರದ ರಸ್ತೆ ಅಭಿವೃದ್ಧಿಗಾಗಿ 150 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಪ್ರವಾಹ ತಡೆ ಕಾಮಗಾರಿಗಳಿಗೆ ಸಾರ್ವಜನಿಕರು ಹಾಗೂ ಪಾಲಿಕೆ ಸದಸ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಮೀಪದ ಕೋಟೆ ಗೋಡೆ ಬಳಿ ಬಾಕ್ಸ್ ಕಲ್ವರ್ಟ್ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ವಾರ್ಡ್ 31ರ ನವಭಾಗ ಮುಖ್ಯರಸ್ತೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಿಸಲಾಗುವುದು ಎಂದರು.

ಕೆ.ಸಿ.ನಗರ, ಯಲ್ಲಾಲಿಂಗನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆ ನೀರು ಚರಂಡಿ ನಿರ್ಮಾಣಕ್ಕೆ ಒಂದು ಕೋಟಿ ರೂ., ಬಿದನೂರು ಪೆಟ್ರೋಲ್ ಬಂಕ್‌ನಿಂದ ಕೋಟೆ ಗೋಡೆವರೆಗೆ 1.20 ಕೋಟಿ ರೂ., ಸಕಾಫ್ ರೋಜಾ ರಸ್ತೆಯಲ್ಲಿ 64 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮನ್ನತ್ ಹಾಲ್, ನವಭಾಗ ರಸ್ತೆ ಹಾಗೂ ಕಸ್ತೂರಿ ಕಾಲೋನಿಯಲ್ಲಿನ ಕಾಮಗಾರಿಗಳನ್ನು ಸಚಿವರು ಪರಿಶೀಲಿಸಿದರು.

ಪರಿಶೀಲನೆ ಸಂದರ್ಭದಲ್ಲಿ ಮೇಯರ್ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -