ನಂದಿ ಸಕ್ಕರೆ ಕಾರ್ಖಾನೆಯಲ್ಲಿ ₹12.33 ಕೋಟಿ ವಂಚನೆ ಬಯಲು: 8 ಆರೋಪಿಗಳ ಬಂಧನ, ₹11.32 ಕೋಟಿ ವಶ
ಕ್ರೈಂ ಸುದ್ದಿ
ವಿಜಯಪುರ: ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದ ದಾಖಲೆಗಳಲ್ಲಿ ಅಕ್ರಮ ನಡೆಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, ಈ ಸಂಬಂಧ 8 ಆರೋಪಿಗಳನ್ನು ಬಂಧಿಸಿ ₹11.32 ಕೋಟಿ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದರು.
ಜೂನ್ 12ರಂದು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ, 2020-21ರಿಂದ 2025-26ರವರೆಗಿನ ಆರು ಹಂಗಾಮುಗಳಲ್ಲಿ ಕಬ್ಬಿನ ತೂಕದಲ್ಲಿ ಅಕ್ರಮ ಎಸಗಿ ಸುಮಾರು 34,490.699 ಮೆಟ್ರಿಕ್ ಟನ್ ಕಬ್ಬಿಗೆ ಸಂಬಂಧಿಸಿದಂತೆ ₹12.33 ಕೋಟಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.
ಪೊಲೀಸರ ತನಿಖೆಯ ಪ್ರಕಾರ, ಕಾರ್ಖಾನೆಯ ತೂಕ ಮಾಪನ ವ್ಯವಸ್ಥೆಯಲ್ಲಿದ್ದ ಕೆಲ ಸಿಬ್ಬಂದಿಯ ಸಹಕಾರದಿಂದ ಬೋಗಸ್ ಟೋಕನ್‌ಗಳು ಹಾಗೂ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ, 91 ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಬಳಿಕ ಆರೋಪಿಗಳು ಆ ಹಣವನ್ನು ಪರಸ್ಪರ ಹಂಚಿಕೊಂಡು ಕಾರ್ಖಾನೆಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದ್ದರು.
ಪ್ರಕರಣದ ಪ್ರಮುಖ ಆರೋಪಿ ಧರೆಪ್ಪ ದುಂಡಪ್ಪ ನಾವಿ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ತನಿಖೆ ವೇಳೆ ಆರೋಪಿಗಳಿಂದ ₹21 ಲಕ್ಷ ನಗದು, ಬ್ಯಾಂಕ್ ಖಾತೆಗಳಲ್ಲಿ ಇದ್ದ ₹4.80 ಕೋಟಿ ಹಾಗೂ ಇತರ ಖಾತೆಗಳಿಂದ ₹5.48 ಕೋಟಿ ಸೇರಿದಂತೆ ಒಟ್ಟು ₹10.50 ಕೋಟಿ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ₹82.07 ಲಕ್ಷ ಮೊತ್ತವನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಲಾಗಿದೆ. ಒಟ್ಟಾರೆ ₹11.32 ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಗ್ರಾಮೀಣ ಡಿಎಸ್‌ಪಿ ಟಿ.ಎಸ್. ಸುಲ್ಪಿ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಸಿಪಿಐ ರಮೇಶ ಅವಜಿ ನೇತೃತ್ವದ ವಿಶೇಷ ತಂಡ ಪ್ರಕರಣದ ತನಿಖೆ ನಡೆಸಿ, ಕಡಿಮೆ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣವನ್ನು ಸಮರ್ಥವಾಗಿ ಭೇದಿಸಿದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ. ಉಳಿದ ಆರೋಪಿಗಳ ಪತ್ತೆ ಮತ್ತು ಹೆಚ್ಚಿನ ತನಿಖೆ ಮುಂದುವರಿದಿದೆ.