Loading...

ಅಳಲು ತೋಡಿಕೊಂಡ ನಿರ್ದೇಶಕರು ಭಯದ ನೆರಳಿನಲ್ಲಿ ಕಾರ್ಖಾನೆ ನಡೆಸಲು ಸಾಧ್ಯವೇ?

Suddi Mitra Editor

October 25, 2026 • 08:57 AM

ಅಳಲು ತೋಡಿಕೊಂಡ  ನಿರ್ದೇಶಕರು ಭಯದ ನೆರಳಿನಲ್ಲಿ  ಕಾರ್ಖಾನೆ ನಡೆಸಲು ಸಾಧ್ಯವೇ?

ಜಮಖಂಡಿ: ನಿತ್ಯ ಒಂದಿಲ್ಲೊಂದು ಸಮಸ್ಯೆ, ರೈತರ ಹೆಸರಿನಲ್ಲಿ ಮಾಜಿ ಶಾಸಕರ ಬೆಂಬಲಿಗರ ದಂಡು, ಜೀವ ಬೆದರಿಕೆ ಈ ರೀತಿಯಾದರೆ ಕಾರ್ಖಾನೆ ನಡೆಸಲು ಹೇಗೆ ಸಾಧ್ಯ? 

ಈ ಪ್ರಶ್ನೆಯನ್ನು ಜಮಖಂಡಿ ಶುಗರ್ಸ್ ನಿರ್ದೇಶಕರು ಪ್ರಶ್ನೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರೈತರ ಕಬ್ಬಿನ ಬಾಕಿ ಪಾವತಿ ಸಮಸ್ಯೆ ಕುರಿತು ಅವರೊಂದಿಗೆ ಶಾಂತಿಯುತವಾಗಿ ಚರ್ಚಿಸಲು ಕಾರ್ಖಾನೆಗೆ ಆಗಮಿಸುತ್ತಿದ್ದ ಇಬ್ಬರು ನಿರ್ದೇಶಕರ ಮೇಲೆ ಮಾರ್ಗಮಧ್ಯೆ ಹಲ್ಲೆ ನಡೆಸಲಾಗಿದೆ ಎಂದು ನಿರ್ದೇಶಕ ರಾಜೀವ್ ಕಡಪಟ್ಟಿ ಆರೋಪಿಸಿದ್ದಾರೆ.

ನಿರ್ದೇಶಕರು ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಕಾರ್ಖಾನೆಗೆ ತೆರಳುತ್ತಿದ್ದರು. ಅಲ್ಲದೆ, ಸೋಮವಾರದಿಂದ ಕಾರ್ಖಾನೆಯಲ್ಲಿ ಉತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸಲು ಹೊಸ ಭದ್ರತಾ ಸಿಬ್ಬಂದಿಯನ್ನು ನೇಮಿಸುವ ಉದ್ದೇಶವಿತ್ತು. ಈ ಸಿಬ್ಬಂದಿಗೆ ಅಗತ್ಯವಾದ ಸಮವಸ್ತ್ರಗಳೂ ಬರಬೇಕಿದ್ದವು. ಆದರೆ, ಈ ವಿಚಾರಗಳ ಕುರಿತು ಚರ್ಚಿಸಲು ಅವಕಾಶ ನೀಡದೆ, ನಿರ್ದೇಶಕರ ಮೇಲೆ ವ್ಯವಸ್ಥಿತವಾಗಿ ಹಲ್ಲೆ ನಡೆಸಲಾಗಿದೆ. ನಿರ್ದೇಶಕರಿಗೆ ಕೆಟ್ಟ ಹೆಸರು ತರಲು ಈ ಘಟನೆ ನಡೆದಿದೆ. ಇದೇ ರೀತಿಯಾದರೆ ಕಾರ್ಖಾನೆ ನಡೆಸಲು ಹೇಗೆ ಸಾಧ್ಯ ಎಂದು ಅಳಲು ತೋಡಿಕೊಂಡಿದ್ದಾರೆ...

ಜೂನ್‌ನಲ್ಲೇ ರೈತರ ಬಾಕಿ ಪಾವತಿಸಬೇಕಿತ್ತು

ಆನಂದ ನ್ಯಾಮಗೌಡ ಅವರು ರೈತರಿಗೆ ಜೂನ್ ತಿಂಗಳಲ್ಲಿಯೇ ಬಾಕಿ ಹಣ ಪಾವತಿಸಬೇಕಿತ್ತು. ಆದರೆ, ಪಾವತಿ ಮಾಡದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಲೆಕ್ಕಪತ್ರಗಳನ್ನು ಪರಿಶೀಲಿಸಿ, ಅಗತ್ಯ ಹಣಕಾಸಿನ ವ್ಯವಸ್ಥೆ ಮಾಡುವ ನಿರ್ಧಾರ ಕೈಗೊಂಡಿದ್ದರು. ಈ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದ್ದು, ರೈತರಿಗೆ ಭಾಗಶಃ ಬಾಕಿ ಹಣವನ್ನು ಪಾವತಿಸಲಾಗಿದೆ ಎಂದು ರಾಜೀವ್ ಕಡಪಟ್ಟಿ ತಿಳಿಸಿದ್ದಾರೆ.

ಆದರೆ, ನಿರ್ದೇಶಕರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದಂತೆ ತಡೆಯಲು ಕೆಲವರನ್ನು ಪ್ರಚೋದಿಸಿ, ಅವರ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕಂಪ್ಯೂಟರ್‌, ಲೆಕ್ಕಪತ್ರಗಳಿಲ್ಲದೆ ಕಾರ್ಖಾನೆ ನಡೆಸುವುದು ಹೇಗೆ?

ಕಾರ್ಖಾನೆಯ ಕಂಪ್ಯೂಟರ್‌ಗಳು ಮತ್ತು ಲೆಕ್ಕಪತ್ರ ಪುಸ್ತಕಗಳ ಲಭ್ಯತೆ ಇಲ್ಲದೆ ಸಿಬ್ಬಂದಿ ತಮ್ಮ ಕೆಲಸವನ್ನು ಹೇಗೆ ನಿರ್ವಹಿಸಲು ಸಾಧ್ಯ? ಎಂದು ರಾಜೀವ್ ಕಡಪಟ್ಟಿ ಪ್ರಶ್ನಿಸಿದ್ದಾರೆ.

ನಿರ್ದೇಶಕರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಮುಂದಾಗಿದ್ದರೂ, ಅದಕ್ಕೂ ಅಡ್ಡಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ನಿರ್ದೇಶಕರ ತಂಡ ಯಶಸ್ವಿಯಾಗುವುದನ್ನು ಬಯಸದ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿದ್ದಾರೆ ಎಂಬುದು ಅವರ ಆರೋಪವಾಗಿದೆ.

30 ವರ್ಷಗಳಿಂದ ಸಂಸ್ಥೆಯೊಂದಿಗೆ ಇರುವ ಹಿರಿಯ ನಿರ್ದೇಶಕರು

ಸುಮಾರು 30 ವರ್ಷಗಳ ಹಿಂದೆ ಸಿದ್ದು ನ್ಯಾಮಗೌಡ ಅವರೊಂದಿಗೆ ಸೇರಿ ಕಾರ್ಖಾನೆಯನ್ನು ಆರಂಭಿಸಿದ ಅದೇ ನಿರ್ದೇಶಕರು ಇಂದಿಗೂ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲ್ಲೆಗೊಳಗಾದ ನಿರ್ದೇಶಕ ನೀರಜ್ ಚಂದ್ರ ಅವರನ್ನು ಸಿದ್ದು ನ್ಯಾಮಗೌಡ ಅವರು 27 ವರ್ಷಗಳ ಹಿಂದೆಯೇ ನಿರ್ದೇಶಕರಾಗಿ ನೇಮಕ ಮಾಡಿದ್ದರು. ಸಂಸ್ಥೆಯ ಹಿರಿಯ ನಿರ್ದೇಶಕರೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಜೀವ್ ಕಡಪಟ್ಟಿ ಹೇಳಿದ್ದಾರೆ.

ತಮ್ಮ ಎಲ್ಲಾ ಚಟುವಟಿಕೆಗಳನ್ನು ಕಾನೂನುಬದ್ಧವಾಗಿಯೇ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿರುವ ಅವರು, ನಿರ್ದೇಶಕರ ಮೇಲೆ ಹಲ್ಲೆ ನಡೆಸುತ್ತಾ ಹೋದರೆ ಕಾರ್ಖಾನೆಯ ಕಾರ್ಯನಿರ್ವಹಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ರೈತರ ಬಾಕಿ ಪಾವತಿ ಸಮಸ್ಯೆಯನ್ನು ಬಗೆಹರಿಸುವುದು, ಕಾರ್ಖಾನೆಯ ಆಡಳಿತವನ್ನು ಸುಗಮಗೊಳಿಸುವುದು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿರಾಜ್ ಚಂದ್ರ ಅವರು ಕಂಪನಿಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. 1998ರಲ್ಲಿ ಸಿದ್ದು ನ್ಯಾಮಗೌಡ ಅವರ ಕೋರಿಕೆಯ ಮೇರೆಗೆ ಹೂಡಿಕೆ ಮಾಡಿದ ಇವರು, ಕಂಪನಿಯಲ್ಲಿ ಅತಿ ದೊಡ್ಡ ವೈಯಕ್ತಿಕ ಹೂಡಿಕೆದಾರರಾಗಿದ್ದಾರೆ.

ಯಾವುದೇ ಪ್ರಕರಣ ದಾಖಲಾಗಿಲ್ಲ. ಮಾರಕಾಸ್ತ್ರಗಳು ಕೂಡ ಪತ್ತೆಯಾಗಿಲ್ಲ. ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಈ ಕುರಿತು ನಮಗೆ ಸಮರ್ಪಕ ಮಾಹಿತಿ ಲಭ್ಯವಿಲ್ಲ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

- Advertisement -