ಜಮಖಂಡಿ ಶುಗರ್ಸ್‌ನಲ್ಲಿ ಕಿಚ್ಚು: ಹಣಕಾಸು ದಾಖಲೆಗಳಿಗೆ ಧಕ್ಕೆ ಆರೋಪ, ಜೀವಭಯದಲ್ಲಿ ನಿರ್ದೇಶಕರು!
|ಮಾಜಿ ಶಾಸಕ ನ್ಯಾಮಗೌಡ ಕುಟುಂಬದ ಮೇಲೆ ಗಂಭೀರ ಆರೋಪ| `ಜೀವಹಾನಿಯಾದರೆ ಅದಕ್ಕೆ ಮಾಜಿ ಶಾಸಕ ನ್ಯಾಮಗೌಡ ಕುಟುಂಬವೇ ಹೊಣೆ ಎಂದ ಕಡಪಟ್ಟಿ|
ಜಮಖಂಡಿ ಶುಗರ್ಸ್ನಲ್ಲಿ ತಾರಕಕ್ಕೇರಿದ ಗೊಂದಲ*
`ಮತ್ತೆ ಬಿಗುವಿನ ವಾತಾವರಣ : ಹಣಕಾಸು ಅಧಿಕಾರಿಯ ಅಪಹರಣದ ಆರೋಪ'
ಜಮಖಂಡಿ : ಜಮಖಂಡಿ ಶುಗರ್ಸ್ ಗೊಂದಲಗಳು ಅನೇಕ ದಿನಗಳಿಂದ ಸದ್ದು ಮಾಡುತ್ತಿದ್ದು, ಈಗ ಗೊಂದಲ ತಾರಕಕ್ಕೇರಿದೆ. ಹಣಕಾಸು ಅಧಿಕಾರಿಯನ್ನೇ ಅಕ್ರಮ ಬಂಧನದಲ್ಲಿರಿಸಿ ಒಂದರ್ಥದಲ್ಲಿ ಒತ್ತೆಯಾಳಾಗಿಸಿಕೊಂಡು ಮಹತ್ವದ ಸಕ್ಕರೆ ಕಾರ್ಖಾನೆಯ ಮಹತ್ವದ ಹಣಕಾಸಿನ ವ್ಯವಹಾರಗಳಿಗೆ ಸಹಿ, ಮಹತ್ವದ ಹಣಕಾಸು ದಾಖಲೆಗಳಿಗೆ ಧಕ್ಕೆ ಹಾಗೂ ಕಂಪನಿಯನ್ನು ಅನಧಿಕೃತವಾಗಿ `ತೆಕ್ಕೆ'ಗೆ ತೆಗೆದುಕೊಳ್ಳುವಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಹಾಗೂ ಅವರ ಸಹೋದರರು ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲಿರುವ ಮಹತ್ವದ ದಾಖಲೆಗಳನ್ನು ಹೊಂದಿರುವ ಕಂಪ್ಯೂಟರ್‌ಗಳನ್ನು ಸಹ ಹಾನಿಗೀಡು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಯಿಂದ ವಿಚಲಿತವಾಗಿರುವ ರಾಜೇಶ ಕಡಪಪಟ್ಟಿ ಮೊದಲಾದವರು ಈ ಬಗ್ಗೆ ಸುದೀರ್ಘವಾದ ಅಳಲನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕರಿಗೂ ಕರೆ ಮಾಡಿ ತಮಗೆ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿ ತಮಗೆ ಸೂಕ್ತ ರಕ್ಷಣೆ ಒದಗಿಸಿ ಹಾಗೂ ಕಂಪನಿಯ ಆರ್ಥಿಕ ದಾಖಲಾತಿಗಳನ್ನು ಸಂರಕ್ಷಿಸಲು ತಕ್ಷಣಕ್ಕೆ ಧಾವಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೆಲವರು ಶಾಸಕ ವಿರುದ್ಧ ಸಾವಳಗಿ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಜೀವಹಾನಿಯಾದರೆ ಅದಕ್ಕೆಲ್ಲ ನೇರವಾಗಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಬಸವರಾಜ ನ್ಯಾಮಗೌಡ ಅವರೇ ಕಾರಣ ಎಂದು ರಾಜೇಶ ಕಡಪಟ್ಟಿ ಮೊದಲಾದವರು ಗಂಭೀರ ಆಪಾದನೆ ಮಾಡಿದ್ದಾರೆ.
ಜಮಖಂಡಿ ಶುಗರ್ಸ್ನಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದು `ಅಲ್ಲಿ ಏನೋ' ನಡೆಯುತ್ತಿದೆ ಎಂಬುದಕ್ಕೆ ಪುಷ್ಟೀಕರಿಸುತ್ತಿದೆ, ನೊಂದವರ ಹೇಳಿಕೆ ಪ್ರಕಾರ ಅಲ್ಲಿರುವ ಅನೇಕ ಮಹತ್ವದ ದಾಖಲೆಗಳನ್ನು ಹಾನಿ ಮಾಡಲಾಗಿದೆ, ವಿಶೇಷವಾಗಿ ಆರ್ಥಿಕ ಚಟುವಟಿಕೆಗಳ ಮಾಹಿತಿಯುಳ್ಳ ಪ್ರೋಗಾಂಗಳಿಗೂ ಘಾಸಿ ಮಾಡಲಾಗಿದೆ ಎಂದು ದೂರಿದರು.
ಜೀವಹಾನಿಯಾದರೆ ನ್ಯಾಮಗೌಡರೇ ಕಾರಣ
ಪತ್ರಿಕೆಯೊಂದಿಗೆ ಮಾತನಾಡಿ ಅಳಲು ತೋಡಿಕೊಂಡಿರುವ ನಿರ್ದೇಶಕ ರಾಜೇಶ ಕಡಪಟ್ಟಿ, ನಮಗೆ ಜೀವ ಭಯ ಕಾಡುತ್ತಿದೆ, ಹಣಕಾಸು ಅಧಿಕಾರಿಯಾಗಿರುವ ರಜನೀಶ ಶರ್ಮಾ ಅವರನ್ನು ಒತ್ತೆಯಾಳಾಗಿರಿಸಿಕೊಳ್ಳಲಾಗಿದೆ, ಕಂಪನಿಯನ್ನು ಟೇಕ್ ಓವರ್ ಮಾಡಿಕೊಳ್ಳಲು ಬಲವಂತದ ಪ್ರಯತ್ನ ನಡೆಯುತ್ತಿದೆ, ನನಗೂ ಜೀವ ಭಯ ಕಾಡುತ್ತಿದೆ, ನನ್ನ ಜೊತೆ ಪದ್ಮನಾಭ ಜಕನೂರ, ರೋಡಲಬಂಡಾ ಇವರಿಗೂ ಜೀವ ಭಯ ಕಾಡುತ್ತಿದೆ, ನಮ್ಮ ನಾಲ್ಕು ಜನರಿಗೆ ಜೀವಕ್ಕೆ ಹಾನಿಯಾದರೆ ಅದಕ್ಕೆ ಮಾಜಿ ಶಾಸಕ ನ್ಯಾಮಗೌಡ ಕುಟುಂಬವೇ ಕಾರಣ, ರಕ್ಷಣೆಗಾಗಿ ಪೊಲೀಸ್ ಇಲಾಖೆಗೂ ಮನವಿ ಮಾಡಿಕೊಂಡಿರುವೆ ಎಂದು ಕಡಪಟ್ಟಿ ಕಣ್ಣೀರಿಟ್ಟರು.
ಕಣ್ಣೀರಿಟ್ಟ ಹಣಕಾಸು ಅಧಿಕಾರಿ ಪತ್ನಿ
ತಮ್ಮ ಪತಿ ಹಣಕಾಸು ಅಧಿಕಾರಿಯಾಗಿರುವ ರಜನೀಶ ಶರ್ಮಾ ಅವರ ಅಪಹರಣ ಸುದ್ದಿಯಿಂದ ಗೆ ದಿಗ್ಭಮೆಗೊಳಗಾಗಿರುವ ಅವರ ಧರ್ಮಪತ್ನಿ ಕಣ್ಣೀರಿಟ್ಟಿದ್ದಾರೆ, ನನಗೆ ಏನೂ ಮಾಡಲು ದಿಕ್ಕು ತೋರುತ್ತಿಲ್ಲ, ನನ ಪತಿ ಸಾತ್ವಿಕ ಸ್ವಭಾವದ ವ್ಯಕ್ತಿ, ದಯಮಾಡಿ ಜಮಖಂಡಿ ಜನತೆಯ ನೆರವು ನಮಗೆ ಬೇಕಿದೆ, ನನಗೆ ಏನು ಹೇಳಬೇಕು ಗೊತ್ತಿಲ್ಲ, ನನ್ನ ಪತಿಯನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬನ್ನಿ ಎಂದು ಕಣ್ಣೀರಿಟ್ಟರು.
ಮೂರು ತಿಂಗಳ ಹಿಂದೆಯೂ ನಡೆದಿದ್ದ ಗೊಂದಲ
ಜಮಖಂಡಿ ಶುಗರ್ಸ್ ಸಂಸ್ಥೆಯಲ್ಲಿ ಗೊಂದಲ ನಿನ್ನೆ ಮೊನ್ನೆಯದಲ್ಲ, ಮೂರು ತಿಂಗಳ ಹಿಂದೆ ಗೌಪ್ಯ ಸಭೆ ರಾಜಕೀಯ ಹಾಗೂ ಸಹಕಾರ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಂಸ್ಥೆಯ ಕೆಲವು ನಿರ್ದೇಶಕ ಮಂಡಳಿ ಸದಸ್ಯರು ಆಡಳಿತಾತ್ಮಕ ವಿಚಾರಗಳು ಹಾಗೂ ಹಣಕಾಸು ವ್ಯವಹಾರಗಳ ಕುರಿತು ಮಹತ್ವದ ಸಭೆ ನಡೆಸಿ ಆನಂದ ನ್ಯಾಮಗೌಡರನ್ನು ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಜಮಖಂಡಿ ಶುಗರ್ಸ್ನ ಬ್ಯಾಂಕ್ ಖಾತೆ ಬದಲಾವಣೆಯ ಪ್ರಕ್ರಿಯೆ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಇದುವರೆಗೆ ಬಳಕೆಯಲ್ಲಿದ್ದ ಬ್ಯಾಂಕ್ ಖಾತೆಯ ಬದಲಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್)ನಲ್ಲಿ ರಾಜೀವ ಕಡಪಟ್ಟಿ ಹಾಗೂ ರಾಜೇಂದ್ರ ಪಾಟೀಲ ಇವರ ಹೆಸರಿನಲ್ಲಿ ಹೊಸ ಖಾತೆ ತೆರೆಯಲಾಗಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿತ್ತು.
ಖಾತೆ ಬದಲಾವಣೆಯ ಹಿಂದೆ ಆಡಳಿತಾತ್ಮಕ ಹಾಗೂ ಆರ್ಥಿಕ ಕಾರಣಗಳಿವೆಯೇ ಅಥವಾ ಬೇರೆ ಉದ್ದೇಶಗಳಿವೆಯೇ ಎಂಬ ಕುರಿತು ಸಂಸ್ಥೆಯ ಷೇರುದಾರರು ಹಾಗೂ ರೈತ ವಲಯದಲ್ಲಿ ಚರ್ಚೆಗಳು ಭಾರೀ ಕೋಲಾಹಲ ಸೃಷ್ಟಿಸಿದ್ದವು.