ರಾಮಲಿಂಗಾರೆಡ್ಡಿಗೆ 2 ಸಚಿವ ಸ್ಥಾನದ ಆಫರ್ ! ಸರ್ಕಾರದ ಸ್ಥಿರತೆ ಮತ್ತು ಸಮತೋಲದ ದೃಷ್ಟಿಯಿಂದ ಮನವೊಲಿಸುವ ಕಸರತ್ತು! ಡೌಂಟ್ ಕೇರ- ರಾಮಲಿಂಗಾರೆಡ್ಡಿ
ಬೆಂಗಳೂರು: ರಾಮಲಿಂಗಾರೆಡ್ಡಿ ಮನವೊಲಿಸಲು ಡಿಕೆಶಿ ಸರ್ಕಸ್ ನಡೆಸುತ್ತಿದ್ದು ರಾಮಲಿಂಗಾರೆಡ್ಡಿ ಅವರ ಮನವೊಲಿಕೆ, ಅವರ ಅಹವಾಲುಗಳು ಇದ್ದರೆ ಅವನ್ನು ಕೇಳಿಕೊಳ್ಳುವುದು, ಪಕ್ಷದೊಳಗಿನ ಸಮತೋಲನ ಕಾಪಾಡುವುದು ಮತ್ತು ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬಿರುಕು ಬಾರದಂತೆ ನೋಡಿಕೊಳ್ಳುವುದಾಗಿದೆ. ರಾಮಲಿಂಗಾರೆಡ್ಡಿ ಅವರಂತಹ ಹಿರಿಯ ನಾಯಕರ ಅಸಮಾಧಾನ ಬಹಿರಂಗವಾದರೆ, ಅದು ಪಕ್ಷಕ್ಕೆ ರಾಜಕೀಯವಾಗಿ ಹಾನಿಕಾರಕವಾಗಬಹುದು ಎಂಬ ಆತಂಕವೂ ಪಕ್ಷದೊಳಗೆ ಇದೆ.
ರಾಮಲಿಂಗಾರೆಡ್ಡಿ ಜೊತೆ ಮಾತುಕತೆ ನಡೆಸಿದ ಸುರ್ಜೇವಾಲ
ಮಾಹಿತಿ ಪ್ರಕಾರ, ಸುರ್ಜೆವಾಲ ಅವರು ರಾಮಲಿಂಗಾರೆಡ್ಡಿ ಅವರಿಗೆ ರಾಜೀನಾಮೆ ವಾಪಾಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಸಹಕಾರ ಮತ್ತು ಮುಜರಾಯಿ ಎಂಬ ಎರಡೂ ಇಲಾಖೆಗಳ ಸಚಿವ ಸ್ಥಾನವನ್ನು ಒಟ್ಟಿಗೇ ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ. ‘ನಿಮ್ಮ ಹಿರಿತನ, ಪ್ರಾಮಾಣಿಕತೆ, ಪಕ್ಷನಿಷ್ಠೆ ನಮಗೆ ಗೊತ್ತಿದೆ. ನಿಮ್ಮನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷಕ್ಕೆ ನಿಮ್ಮ ಅಗತ್ಯ ಇದೆ. ಎರಡು ಖಾತೆ ಪಡೆದು ಸಹಕರಿಸಿ’ ಎಂದು ಸುರ್ಜೆವಾಲ ಅವರು ಮನವೊಲಿಸುವ ರೀತಿಯಲ್ಲಿ ಹೇಳಿದ್ದಾರೆ ಎಂಬ ಮಾಹಿತಿ ಬಂದಿದೆ.
ರಾಮಲಿಂಗಾರೆಡ್ಡಿ ಅವರು ದೀರ್ಘಕಾಲದಿಂದ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದು, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಹಿನ್ನಲೆಯಲ್ಲಿ, ಅವರನ್ನು ಸಂಪೂರ್ಣವಾಗಿ ಪಕ್ಷದ ನಾಯಕತ್ವ ಗೌರವಿಸುತ್ತಿದೆ ಎಂಬ ಸಂದೇಶವನ್ನೂ ಈ ಆಫರ್ ಒಳಗೊಂಡಿದೆ. ಪಕ್ಷದ ಹಿತ, ಸರ್ಕಾರದ ಸ್ಥಿರತೆ ಮತ್ತು ಸಮತೋಲದ ದೃಷ್ಟಿಯಿಂದ ಅವರ ಅನುಭವ ಅಗತ್ಯವಿದೆ ಎನ್ನುವ ಭಾವನೆ ಪಕ್ಷದ ನಾಯಕರಲ್ಲಿದೆ.
ಆಫರ್ ತಿರಸ್ಕರಿಸಿದ್ರಾ ರಾಮಲಿಂಗಾರೆಡ್ಡಿ?
ಆದರೆ ಈ ಎಲ್ಲದರ ನಡುವೆಯೇ, ರಾಮಲಿಂಗಾರೆಡ್ಡಿ ಅವರು ಸುರ್ಜೆವಾಲ ನೀಡಿದ ಈ ಆಫರ್ ಅನ್ನು ತಿರಸ್ಕರಿಸಿರುವುದಾಗಿ ತಿಳಿದುಬಂದಿದೆ. ಎರಡು ಖಾತೆಗಳನ್ನು ಒಟ್ಟಿಗೆ ತೆಗೆದುಕೊಳ್ಳುವ ವಿಷಯದಲ್ಲೋ, ಅಥವಾ ತಮ್ಮ ಆತ್ಮಸಂತೃಪ್ತಿ, ಸ್ವಾಭಿಮಾನ, ರಾಜಕೀಯ ತತ್ವಗಳ ಕಾರಣಕ್ಕೋ, ಅವರು ಈ ಪ್ರಸ್ತಾವಿಗೆ ಒಪ್ಪದೇ ಇದ್ದಾರೆ. ಅವರ ಈ ನಿರ್ಧಾರದಿಂದ ಪಕ್ಷದ ಒಳರಾಜಕೀಯದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಉಂಟಾಗಿದೆ.
ಒಟ್ಟಾರೆ ನೋಡಿದರೆ, ಈ ಘಟನೆ ಕಾಂಗ್ರೆಸ್ ಪಕ್ಷದ ಒಳಗಿನ ನಾಯಕತ್ವ ಸಮೀಕರಣ, ಹುದ್ದೆ ಹಂಚಿಕೆ, ಹಿರಿಯ ನಾಯಕರ ಗೌರವ ಹಾಗೂ ಪಕ್ಷದ ಏಕತೆಯ ಪ್ರಶ್ನೆಗಳನ್ನು ಹೊರತರುತ್ತಿದೆ. ಮುಂದಿನ ದಿನಗಳಲ್ಲಿ ರಾಮಲಿಂಗಾರೆಡ್ಡಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುತ್ತಾರೆಯೇ? ಡಿಕೆಶಿ–ಸುರ್ಜೆವಾಲ ಮಾತುಕತೆ ಫಲಕಾರಿಯಾಗುತ್ತದೆಯೇ? ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ