ತೆರವು ಕಾರ್ಯಾಚರಣೆಗೆ ವೇಗ ನೀಡಿದ್ದೆ ವರ್ಗಾವಣೆಗೆ ಕಾರಣವೇ?ಪ್ರಗತಿಗೆ ವೇಗ ನೀಡಿದ ಪೌರಾಯುಕ್ತರಿಗೆ ಶಾಕ್.
//ರಾಜಕೀಯ ಒತ್ತಡದಿಂದ ಆಗದಿರಲಿ ಅಭಿವೃದ್ಧಿಗೆ ಹಿನ್ನೆಡೆ//
ಪ್ರಗತಿಗೆ ವೇಗ ನೀಡಿದ ಪೌರಾಯುಕ್ತರಿಗೆ ವರ್ಗಾವಣೆ ಬಿಸಿ
ಜಮಖಂಡಿ : ಜಮಖಂಡಿ ನಗರಾಭಿವೃದ್ಧಿ ಬಗ್ಗೆ ಅನೇಕ ಹೊಸ ಕನಸುಗಳ ಸಾಕಾರಕ್ಕಾಗಿ ಪುರಸಭೆ ಆಡಳಿತಕ್ಕೆ ವೇಗದ ಸ್ಪರ್ಶ ನೀಡಿದ ಪೌರಾಯುಕ್ತ ಜ್ಯೋತಿ ಗಿರೀಶ ಅವರಿಗೆ ವರ್ಗಾವಣೆ ಬಿಸಿ ತಟ್ಟಿದೆ.
ನಗರವನ್ನು ಸುಂದರ, ಸುಸಜ್ಜಿತ ಹಾಗೂ ಮಾದರಿ ನಗರವನ್ನಾಗಿ ರೂಪಿಸಲು ಸಂಕಲ್ಪ ಮಾಡಿರುವ ಶಾಸಕ ನಾಡೋಜ ಜಗದೀಶ್ ಗುಡಗುಂಟಿ ಅವರ ಅಭಿವೃದ್ಧಿ ಯೋಜನೆಗಳಿಗೆ ಆಡಳಿತಾತ್ಮಕವಾಗಿ ಸಾಥ್ ನೀಡುತ್ತಿದ್ದ ಪೌರಾಯುಕ್ತ ಜ್ಯೋತಿಗಿರೀಶ್ ಅವರ ವರ್ಗಾವಣೆ ನಗರದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಧೀಡಿರ್ ವರ್ಗಾವಣೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿಸಿದೆ.
ಇಕ್ಕಟ್ಟಾದ ರಸ್ತೆಗಳ ಅಗಲೀಕರಣ, ಅತಿಕ್ರಮಣ ತೆರವು, ಸುಗಮ ಸಂಚಾರ ವ್ಯವಸ್ಥೆ, ಕುಡಿಯುವ ನೀರಿನ ಸರಬರಾಜು, ಸಾರ್ವಜನಿಕ ಶೌಚಾಲಯಗಳ ಅಭಿವೃದ್ಧಿ, ಆಧುನಿಕ ಒಳಚರಂಡಿ ವ್ಯವಸ್ಥೆ, ಉದ್ಯಾನವನಗಳ ನಿರ್ಮಾಣ ಹೀಗೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ
ಶಾಸಕ ಜಗದೀಶ್ ಗುಡಗುಂಟಿ ವಿಶೇಷ ಆದ್ಯತೆ ನೀಡಿದ್ದರು. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪೌರಾಯುಕ್ತ ಜ್ಯೋತಿಗಿರೀಶ್ ಚುರುಕು ನೀಡಿದ್ದರು.
ಹಳೆಯ ಒಳಚರಂಡಿ ವ್ಯವಸ್ಥೆಯಿಂದ ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ರಸ್ತೆ ಅಭಿವೃದ್ಧಿ, ಸುಗಮ ಸಂಚಾರ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು.
ಪ್ರಮುಖ ವೃತ್ತಗಳ ಅಭಿವೃದ್ಧಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಗ್ನಲ್ ವ್ಯವಸ್ಥೆ ಮತ್ತು ನಗರ ಸೌಂದರ್ಯೀಕರಣದ ಯೋಜನೆಗಳು ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದ್ದವು.
ಆಡಳಿತಾತ್ಮಕ ಸಹಕಾರ
ನಗರಸಭೆಗೆ ಅನುದಾನದ ಕೊರತೆ ಎದುರಾದ ಸಂದರ್ಭಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಶಾಸಕ ತಮ್ಮ ನಿಧಿಯಿಂದ ನೆರವು ನೀಡುವ ಮೂಲಕ ಕಾಮಗಾರಿಗಳಿಗೆ ಉತ್ತೇಜನ ನೀಡಿದ್ದರು ಎನ್ನಲಾಗಿದೆ. ಇದರಿಂದ ನಗರಾಭಿವೃದ್ಧಿ ಯೋಜನೆಗಳಿಗೆ ಆಡಳಿತಾತ್ಮಕ ಸಹಕಾರ ದೊರೆತಿತ್ತು.
ಇದರ ನಡುವೆ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಪೌರಾಯುಕ್ತರನ್ನು ಸಂಪರ್ಕಿಸಿ ತಮ್ಮ ಸೂಚನೆಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸುತ್ತಿದ್ದರು ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.
ರಾಜಕೀಯ ಒತ್ತಡ : ಅಭಿವೃದ್ಧಿಯ ಹಿನ್ನೆಡೆ
ಅಭಿವೃದ್ಧಿಗೆ ವೇಗ ನೀಡುತ್ತಿದ್ದ ಅಧಿಕಾರಿಯ ವರ್ಗಾವಣೆ ರಾಜಕೀಯ ಒತ್ತಡದ ಪರಿಣಾಮವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ವರ್ಗಾವಣೆಯ ಹಿಂದೆ ಆಡಳಿತಾತ್ಮಕ ಕಾರಣಗಳಿವೆಯೇ ಅಥವಾ ರಾಜಕೀಯ ಬೆಳವಣಿಗೆಗಳ ಪ್ರಭಾವವಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.
ಜಮಖಂಡಿಯನ್ನು ಜಿಲ್ಲೆ ಮಾಡುವ ಕನಸಿನೊಂದಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ಪೌರಾಯುಕ್ತರ ವರ್ಗಾವಣೆ ಕಾಮಗಾರಿಗಳ ನಿರಂತರತೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ವ್ಯಕ್ತವಾಗಿದೆ.
ನಗರದ ಅಭಿವೃದ್ಧಿಗೆ ವೇಗ ನೀಡಿದ್ದ ಅಧಿಕಾರಿಯ ವರ್ಗಾವಣೆ ಇದೀಗ ಜಮಖಂಡಿಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಕಾರ್ಯಾಚರಣೆಗೆ ವೇಗ ನೀಡಿದ್ದೆ ವರ್ಗಾವಣೆಗೆ ಕಾರಣವೇ?
ನಗರದಲ್ಲಿ ಅತಿಕ್ರಮಣ ತೆರವುಗೊಳಿಸುವ ಕಾರ್ಯಕ್ಕೆ ಪೌರಾಯುಕ್ತ ಜ್ಯೋತಿ ಗಿರೀಶ ವೇಗ ನೀಡಿದ್ದರು. ಪ್ರಭಾವಿಗಳಿಗೂ ಸೊಪ್ಪು ಹಾಕದೇ ಕಾರ್ಯ ನಿರ್ವಹಿಸಿದ್ದರು.
ಶಾಸಕರು ನಗರದ ರಸ್ತೆಯಲ್ಲಿ ಅತಿಕ್ರಮಣ ವಾಗಿ ನಿರ್ಮಿಸಿದ ಕಟ್ಟಡ ತೆರವು ಕಾರ್ಯಕ್ಕೆ 4.5 ಕೋಟಿ ರೂ. ಅನುದಾನ ಟೆಂಡರ್ ಪ್ರಕ್ರೀಯೆ ಮುಗಿದಿರುವ ಹಂತದಲ್ಲಿ ವರ್ಗಾವಣೆ ಮಾಡಲಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅತಿಕ್ರಮಣಕಾರು ಬಹಳಷ್ಟು ಪ್ರಭಾವಿಗಳು ಆಗಿದ್ದರು ಅದಕ್ಕೆ ಜಗ್ಗದ ಪೌರಾಯುಕ್ತ ಗಿರೀಶ್ ತೆರವು ಕಾರ್ಯಕ್ಕೆ ವೇಗ ನೀಡಿದರು. ಈಗ ಇದೇ ಶಕ್ತಿಗಳು ಪೌರಾಯುಕ್ತರ ವರ್ಗಾವಣೆಗೆ ಪ್ರಭಾವ ಬೀರಿದ್ದನ್ನೂ ಸಹ ಅಲ್ಲಗಳೆಯುವಂತಿಲ್ಲ.