ಹೊಸ ಅಂಗಿ ಹೊಲಿಸಿ, ಗಡ್ಡ ಬಿಟ್ಟು ಟಿಕೇಟ್ ಕನಸು ಕಂಡವರಿಗೆ ಶಾಕ್!; ಯಾರು ತಿಪ್ಪರಲಾಗ ಹಾಕಿದರೂ 2028ಕ್ಕೂ ನಾನೇ ಬಿಜೆಪಿ ಅಭ್ಯರ್ಥಿ – ಯತ್ನಾಳ್
ವಿಜಯಪುರ : `ಬಿಜೆಪಿ ಟಿಕೇಟ್ ತಮಗೆ ಸಿಗುತ್ತದೆ ಎಂದು ಯಾರೇ ತಿಪ್ಪರಲಾಗ ಹಾಕಿದರೂ, ಲಗಾ ಹೊಡೆದರೂ ಏನೂ ಆಗುವುದಿಲ್ಲ, 2028 ಕ್ಕೆ ನಾನೇ ಎಂಎಲ್‌ಎ. ಬಿಜೆಪಿ ಟಿಕೇಟ್ ತಮಗೆ ಸಿಗುತ್ತದೆ ಎಂದು ಕೆಲವರು ಹೊಸ ಅಂಗಿ ಖರೀದಿಸಿದ್ದರೂ, ನಾನು ಮೊನ್ನೆಯೂ ಪಕ್ಷ ನಿಷ್ಠೆ ಪ್ರದರ್ಶಿಸಿದಾಗ ಈಗ ಅವರು ಅಂಗಿ ಕಳಚಿ ಮತ್ತೆ ಹಳೆ ಅಂಗಿ, ಜೀನ್ಸ್ ಹಾಕಿಕೊಂಡು, ಗಡ್ಡ ಬಿಟ್ಟು, ಮುಖ ಸೊಟ್ಟಗೆ ಮಾಡಿಕೊಂಡು ಅಡ್ಡಾಡುತ್ತಿದ್ದಾರೆ....' ಪಕ್ಷದ ಮುಖಂಡರ `ಘರ್ ವಾಪಸಿ' ವಿಷಯ ಪ್ರತಿಧ್ವನಿಸುತ್ತಿರುವ ವೇಳೆಯಲ್ಲಿ ಮುಂದಿನ ಸಾರಿಯೂ ನಾನೇ ಅಭ್ಯರ್ಥಿ ಎನ್ನುವ ಮೂಲಕ ಶಾಸಕ ಯತ್ನಾಳ ಮತ್ತೊಮ್ಮೆ ತಮಗೆ ಟಿಕೇಟ್ ಖಾತ್ರಿ ಎಂದು ಹೇಳಿದ್ದಾರೆ. ಬಿಜೆಪಿ ಟಿಕೇಟ್ ಆಕಾಂಕ್ಷಿಗಳಿಗೆ ನೇರವಾಗಿ ಟಾಂಗ್ ನೀಡುವ ಮೂಲಕ ಮತ್ತೊಮ್ಮೆ ತಾವೇ ಗೆಲ್ಲುವುದು ಎಂಬ ಸಂದೇಶ ರವಾನಿಸಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡಿದ್ದರೂ ಸಹ ತಮಗೆ ಟಿಕೇಟ್ ದೊರಕಲಿದೆ, ಯಾರೂ ಏನೇ ಪ್ರಯತ್ನಿಸಿದರೂ ಯಾರ ಆಟ ನಡೆಯಲ್ಲ ಎಂದು ಶಾಸಕ ಯತ್ನಾಳ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆ ವೇಳೆ ನಾನು ಪಕ್ಷ ವಿರೋಧಿಯಾಗಿ ಕಾಂಗ್ರೆಸ್‌ಗೆ ಮತ ಹಾಕುತ್ತೇನೆ ಎಂದು ಕೆಲವರು ಅಂದುಕೊAಡಿದ್ದರು, ನಾನು ಯಾವ ಪಕ್ಷದಿಂದ ಆಯ್ಕೆಯಾಗಿರುವ ಅದೇ ಪಕ್ಷಕ್ಕೆ ಮತ ಹಾಕಿರುವೆ, ಇದು ನನ್ನ ಬದ್ಧತೆ, ಆದರೆ ಕೆಲವರು ನಾನು ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕುತ್ತೇನೆ ಎಂದು ತಿಳಿದುಕೊಂಡು ಮುಂದಿನ ಸಾರಿ ತಮಗೆ ಟಿಕೇಟ್ ಸಿಗುತ್ತದೆ ಎಂದು ತಿಳಿದು ಹೊಸ ಅಂಗಿ ಹೊಲೆಸಿಕೊಂಡಿದ್ದರು, ಆದರೆ ಅವರ ವಿಚಾರ ತಲೆಕೆಳಗಾಗಿದ್ದು ಮತ್ತೆ ತಮ್ಮ ಹಳೆ ಸ್ಟೈಲ್‌ನಲ್ಲಿಯೇ ಅದೇ ಜೀನ್ಸ್ ಹಾಕಿಕೊಂಡು ಮುಖ ಸೊಟ್ಟಗೆ ಮಾಡಿಕೊಂಡು ಓಡಾಡುತ್ತಿದ್ದಾರೆ, ಅವರು ಏನೇ ತಿಪ್ಪರಲಾಗ ಹಾಕಿದರೂ 2028 ರಲ್ಲಿ ಗೆಲ್ಲುವುದ ನಾನೇ ಎಂದಿದ್ದಾರೆ. ವಿಜಯಪುರ ನಗರ ಹಿಂದೂಗಳ ಕೈಯಲ್ಲಿಯೇ ಇರಬೇಕು, ಕಳೆದ ಬಾರಿ ಪರಾಜಿತನಾಗಿರುವ ಕಾಂಗ್ರೆಸ್ ಅಭ್ಯರ್ಥಿಯ ನಾಲಿಗೆಯ ಸಂಸ್ಕಾರ ನೋಡಿದರೆ ಜನರಿಗೂ ಅರ್ಥವಾಗಿದೆ, ವಿಜಯಪುರ ಸೇಫ್ ಆಗಿದೆ ಕಾರಣ ಹಿಂದೂಗಳ ಕೈಯಲ್ಲಿ ಅಧಿಕಾರ ಇರುವುದರಿಂದ, ಹೀಗಾಗಿ ಮುಂದೆಯೂ ಹಿಂದೂಗಳ ಕೈಗೆ ಅಧಿಕಾರ ಇರಬೇಕು ಎಂದರು.