ಬಾಗಲಕೋಟೆಗೆ ಯಾರಿಗೆ ಒಲಿಯಲಿದೆ ಮಂತ್ರಿಗಿರಿಯ ಲಕೋಟೆ? ಜೆ.ಟಿ. ಪಾಟೀಲ, ಕಾಶಪ್ಪನವರ, ತಿಮ್ಮಾಪೂರ, ಉಮಾಶ್ರೀ ನಡುವೆ ತೀವ್ರ ಪೈಪೋಟಿ
ಅಪ್ಪು ಪೋತರಾಜ
ಬಾಗಲಕೋಟೆ :ಒಂದರ್ಥದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಬಾಗಲಕೋಟೆಗೆ ಈ ಬಾರಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬ ಕುತೂಹಲ ಕೆರಳಿದೆ. ಕಾಂಗ್ರೆಸ್‌ಗೆ ಹೋಲಿಕೆ ಮಾಡಿದಾಗ ಬಿಜೆಪಿಯ ಶಾಸಕರಿಗೆ ದೊಡ್ಡ ದೊಡ್ಡ ಮಂತ್ರಿ ಸ್ಥಾನ ದೊರಕಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಈ ಹಿಂದೆ ದಿ.ಎಚ್.ವೈ. ಮೇಟಿ ಅವರಿಗೆ ಅಬಕಾರಿ ಖಾತೆ ದೊರಕಿತ್ತು, ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರ್.ಬಿ. ತಿಮ್ಮಾಪೂರ ಅವರಿಗೂ ಅಬಕಾರಿ ಖಾತೆಯೇ ಒಲಿದಿತ್ತು. ಆದರೆ ಬಿಜೆಪಿ ಅವಧಿಯಲ್ಲಿ ಮುಧೋಳ ಶಾಸಕರಾಗಿದ್ದ ಗೋವಿಂದ ಕಾರಜೋಳರಿಗೆ ಆಹಾರ-ನಾಗರಿಕ ಪೂರೈಕೆ, ಲೋಕೋಪಯೋಗಿ, ಜಲಸಂಪನ್ಮೂಲದಂತಹ ಖಾತೆ ಹಾಗೂ ಮುರುಗೇಶ ನಿರಾಣಿ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಯಂತಹ ದೊಡ್ಡ ದೊಡ್ಡ ಖಾತೆಗಳು ಒಲಿದಿದ್ದವು. ತೇರದಾಳ ಹಾಗೂ ಜಮಖಂಡಿ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಬಾಗಲಕೋಟೆ ನಗರದ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಆ ಮೂಲಕ ಬಾಗಲಕೋಟೆ ನಗರ, ಬೀಳಗಿ, ಬಾದಾಮಿ, ಹುನಗುಂದ, ಮುಧೋಳ ಕಾಂಗ್ರೆಸ್ ಕೈ ವಶದಲ್ಲಿವೆ. ಹೀಗಾಗಿ ಸಚಿವರಾಗುವ ಪಟ್ಟಿಯೂ ದೊಡ್ಡದಿದೆ. ಈ ಬಾರಿ ಶತಾಯ ಗತಾಯ ಸಚಿವರಾಗಲೇಬೇಕು ಎಂದು ಜೆ.ಟಿ. ಪಾಟೀಲ ಪಟ್ಟು ಹಿಡಿದಿದ್ದಾರೆ. ಹಿಡಿದ ಕೆಲಸವನ್ನು ಅಷ್ಟೇ ಅಚ್ಚುಕಟ್ಟುತನದಿಂದ ಮಾಡುವ ಸ್ವಭಾವ, ಕೆಲಸದಲ್ಲಿ ಅಷ್ಟೇ ನಿಷ್ಠುರ-ನೇರ ನುಡಿಯ ನೇತಾರನಾಗಿ ಈಗ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತಿದ್ದು, ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನೀಡಿದ್ದ ಮುರುಗೇಶ ನಿರಾಣಿ ಅವರನ್ನು ಸೋಲಿಸಿದ ಹೆಗ್ಗಳಿಕೆಯೂ ಜೆ.ಟಿ. ಪಾಟೀಲರಿಗೆ ಇದೆ, ಪಕ್ಷ ನಿಷ್ಠೆ, ಹಿರಿತನ ಎಲ್ಲದರಲ್ಲಿಯೂ ಜೆ.ಟಿ. ಪಾಟೀಲರು ಪ್ಲಸ್. ಇನ್ನೊಂದೆಡೆ ಡೈನಾಮಿಕ್ ಲೀಡರ್ ಆಗಿರುವ ವಿಜಯಾನಂದ ಕಾಶಪ್ಪನವರ ಅವರ ಹೆಸರು ಸಹ ಸಚಿವ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿದೆ. ಮಾಜಿ ಸಚಿವ ದಿ.ಎಸ್.ಆರ್. ಕಾಶಪ್ಪನವರ ಪುತ್ರರಾಗಿರುವ ವಿಜಯಾನಂದ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿಯೇ ಯುವ ವರ್ಚಸ್ಸು ಹೊಂದಿದ್ದು ಪಂಚಮಸಾಲಿ ಸಮಾಜಕ್ಕೆ ಪ್ರಾತಿನಿಧ್ಯ ದೊರಕುವುದಾದರೆ ಕಾಶಪ್ಪನವರ ಹೆಸರೇ ಮುಂಚೂಣಿಯಲ್ಲಿದೆ. ಇನ್ನೊಂದೆಡೆ ಈ ಹಿಂದೆ ಅಬಕಾರಿ ಸಚಿವರಾಗಿದ್ದ ಆರ್.ಬಿ. ತಿಮ್ಮಾಪೂರ ಈಗ ಮತ್ತೊಮ್ಮೆ ಸಚಿವರಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ವಿಧಾನ ಪರಿಷತ್ ಸದಸ್ಯೆಯಾಗಿ ನಾಮನಿರ್ದೇಶನಗೊಂಡಿರುವ ಉಮಾಶ್ರೀ ಸಹ ಸಚಿವ ಸ್ಥಾನದ ಪೈಪೋಟಿಯಲ್ಲಿದ್ದಾರೆ. ಈ ಹಿಂದೆ ಸಚಿವೆಯಾಗಿರುವ ಅನುಭವವೂ ಅವರಿಗೆ ಇದೆ, ಮಹಿಳಾ ಕೋಟಾ ಅಡಿಯಲ್ಲಿ ಉಮಾಶ್ರೀ ಅವರಿಗೆ ಸಚಿವ ಸ್ಥಾನ ಒಲಿದು ಬಂದರೂ ಅದು ಬಾಗಲಕೋಟೆಗೆ ಸಚಿವ ಸ್ಥಾನ ದಕ್ಕಿದಂತೆ. ಬಾಗಲಕೋಟೆಗೆ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯರಿಗೂ ಅನೇಕ ಬಾರಿ ಮನ್ನಣೆ ದೊರಕಿದೆ, ಮೇಲ್ಮನೆಯ ಸದಸ್ಯರಾಗಿದ್ದ ಎಸ್.ಆರ್. ಪಾಟೀಲರು ಮಂತ್ರಿಯಾಗಿದ್ದರಲ್ಲದೇ ಮೇಲ್ಮನೆಯ ಸಭಾನಾಯಕ ಹುದ್ದೆ ಸಹ ಅಲಂಕರಿಸಿದರು. ಹೀಗಾಗಿ ಮೇಲ್ಮನೆ ಸದಸ್ಯರಿಗೆ ಪ್ರಾತಿನಿಧ್ಯ ವಿಷಯ ಬಂದಾಗ ಉಮಾಶ್ರೀ ಅವರ ಹೆಸರು ಫೈನಲ್ ಆದರೂ ಅಚ್ಚರಿಯಿಲ್ಲ. ಹಾಲುಮತ ಸಮುದಾಯದ ಭೈರತಿ ಸುರೇಶ, ಡಾ.ಯತೀಂದ್ರ ಸಿದ್ಧರಾಮಯ್ಯ ಅವರು ಈಗಾಗಲೇ ಸಚಿವರಾಗಿದ್ದಾರೆ, ಹೀಗಾಗಿ ಇನ್ನೋರ್ವರು ಹಾಲುಮತ ಸಮುದಾಯದವರು ಸಚಿವರಾಗುವುದು ಕಷ್ಟ. ಹೀಗಾಗಿ ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಬಾಗಲಕೋಟೆ ಶಾಸಕ ಉಮೇಶ ಮೇಟಿ ಸಚಿವರಾಗುವುದು ಕಷ್ಟಸಾಧ್ಯ ಎಂದೇ ಅವಲೋಕಿಸಬಹುದಾಗಿದೆ.