Loading...

ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಭೈರೆಗೌಡ ಹೊಸ ನಡೆ !ನಿಯಂತ್ರಣಕ್ಕೆ ಹೊಸ ಸೂತ್ರ

Suddi Mitra Editor

September 02, 2026 • 09:33 AM

ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಭೈರೆಗೌಡ ಹೊಸ ನಡೆ !ನಿಯಂತ್ರಣಕ್ಕೆ ಹೊಸ ಸೂತ್ರ

ಬೆಂಗಳೂರು : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳಲು ಸಂಕಲ್ಪ ಮಾಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೆಗೌಡ ಹೊಸ ಹೊಸ ನಡೆಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುತ್ತಿದ್ದು, ಈ ಟ್ರಾಫಿಕ್ ಟ್ರಬಲ್‌ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಕೃಷ್ಣ ಭೈರೆಗೌಡ ಹೊಸ ನಡೆಯನ್ನು ಅನುಸರಿಸಿದ್ದು, ವಿಕಾಸಸೌಧದಲ್ಲಿ ಬೆಂಗಳೂರು ಮಾಜಿ ಮಹಾಪೌರರ ಸಲಹೆ ಪಡೆಯಲು ವಿಶೇಷ ಸಭೆ ಆಯೋಜಿಸಿದರು.

ಈ ಸಭೆಯಲ್ಲಿ ಮಾಜಿ ಮಹಾಪೌರರಿಂದ ಅನೇಕ ಮಹತ್ವದ ಸಲಹೆಗಳು ಕೇಳಿ ಬಂದವು. ಸಭೆಯಲ್ಲಿ ಮಾಜಿ ಮಹಾಪೌರರು ನಗರದ ವಿವಿಧ ಸಮಸ್ಯೆಗಳ ಕುರಿತು ಹಲವು ಸಲಹೆಗಳನ್ನು ನೀಡಿದರು. ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವುದು, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ, ೨,೦೦೦ ಕೋಟಿ ವೆಚ್ಚದ ಬೃಹತ್ ನೀರುಗಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಫರ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.  

ಸಚಿವ ಕೃಷ್ಣ ಭೈರೆಗೌಡ ಮಾತನಾಡಿ, ನಗರದ ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್ ಸಮಸ್ಯೆ ಅಗ್ರಸ್ಥಾನದಲ್ಲಿದೆ. ಈಗಲೇ ಇದನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗದಷ್ಟು ಗಂಭೀರವಾಗಲಿದೆ ಎಂದು ಸಚಿವ ಕೃಷ್ಣಭೈರೆಗೌಡ ಆತಂಕ ವ್ಯಕ್ತಪಡಿಸಿದರು.

ಟ್ರಾಫಿಕ್ ಸಮಸ್ಯೆ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಜಿ ಮಹಾಪೌರರ ಸಲಹೆ ಪಡೆಯಲು ವಿಕಾಸೌಧದದಲ್ಲಿ ವಿಶೇಷ ಸಭೆಯಲ್ಲಿ ಭಾಗವಹಿಸಿ ಈ ಆತಂಕವನ್ನು ವ್ಯಕ್ತಪಡಿಸಿದ ಅವರು, ಎಲ್ಲಾ ಸರ್ಕಾರಗಳು ನಿರಂತರವಾಗಿ ರಸ್ತೆ ನಿರ್ಮಾಣ ಮಾಡುತ್ತಿವೆ. ಆದರೆ ನಿರ್ಮಾಣವಾಗುವ ರಸ್ತೆಗಳಲ್ಲಿ ಸುಮಾರು ಶೇ.೬೦ರಷ್ಟು ಭಾಗ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದೆ. ಸಣ್ಣ ರಸ್ತೆಗಳಲ್ಲೂ ಎರಡೂ ಬದಿಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ ರಸ್ತೆ ನಿರ್ಮಿಸಿದರೂ ಜನರಿಂದ ಬೈಗುಳ ತಪ್ಪುತ್ತಿಲ್ಲ ಎಂದು ಸಚಿವರು ವಿಷಾದಿಸಿದರು.

ರಸ್ತೆಗಳಲ್ಲಿ ಶಿಸ್ತುಬದ್ಧ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದರೆ ಟ್ರಾಫಿಕ್ ಕಿರಿಕಿರಿ ಬಹಳಷ್ಟು ಕಡಿಮೆಯಾಗಲಿದೆ. ಎರಡು ಕಿ.ಮೀ. ಒಳಗಿನ ಪ್ರಯಾಣಕ್ಕೆ ಮೈಕ್ರೋ ಮೊಬಿಲಿಟಿಗೆ ಉತ್ತೇಜನ ನೀಡಬೇಕಿದೆ. ಆದರೆ ಪಾದಚಾರಿ ಮಾರ್ಗ ತೆರವುಗೊಳಿಸುವ ಜೊತೆಗೆ ಸೂಕ್ತ ಪಾರ್ಕಿಂಗ್ ನಿಯಮಗಳನ್ನು ಜಾರಿಗೊಳಿಸುವುದು ಅಗತ್ಯ ಎಂದು ಹೇಳಿದರು.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಎಂ. ಸೇರಿದಂತೆ ಮಾಜಿ ಮಹಾಪೌರರು, ಆಡಳಿತ ಪಕ್ಷದ ನಾಯಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಟ್ಟಡ ತ್ಯಾಜ್ಯಕ್ಕೆ ಜಿಪಿಎಸ್ ಕಡ್ಡಾಯ

ಕಸದ ಸಮಸ್ಯೆ ನಿಯಂತ್ರಣಕ್ಕೂ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಿಡಿ ತ್ಯಾಜ್ಯ ಸಾಗಿಸುವ ಎಲ್ಲಾ ವಾಹನಗಳ ನೋಂದಣಿ ಕಡ್ಡಾಯಗೊಳಿಸಲಾಗಿದ್ದು, ಜಿಪಿಎಸ್ ಅಳವಡಿಸುವುದನ್ನೂ ಕಡ್ಡಾಯ ಮಾಡಲಾಗಿದೆ. ತ್ಯಾಜ್ಯವನ್ನು ನಿಗದಿತ ಘಟಕಗಳಲ್ಲೇ ವಿಲೇವಾರಿ ಮಾಡುವಂತೆ ಐದು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೆಗೌಡ ಹೇಳಿದರು.  

ಪಾರ್ಕಿಂಗ್ ನಿಯಮಗಳ ಅನುಷ್ಠಾನಕ್ಕೆ ಪಾಲಿಕೆ ಮತ್ತು ಪೊಲೀಸರ ಬಳಿ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದರಿಂದ, ಪ್ರತ್ಯೇಕ ಏಜೆನ್ಸಿಯನ್ನು ನಿಯೋಜಿಸಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಟ್ಟಡ ನಿರ್ಮಾಣದಲ್ಲೂ ನಿಯಮ ಉಲ್ಲಂಘನೆನಗರದಲ್ಲಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲೂ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ. ಸೀವೇಜ್ ಸಂಪರ್ಕ ಬದಲಿಸದೆ, ಮನೆಗಳಲ್ಲಿ ಪಾರ್ಕಿಂಗ್‌ಗೆ ಜಾಗ ಮೀಸಲಿಡದೆ ಕಟ್ಟಡ ನಿರ್ಮಿಸುವ ಪ್ರವೃತ್ತಿ ಹೆಚ್ಚಿದೆ. ಇಂತಹ ವರ್ತನೆಯನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವುದು ಅನಿವಾರ್ಯ ಎಂದು ಭೈರೆಗೌಡ ಹೇಳಿದ್ದಾರೆ.

- Advertisement -