Loading...

ಬಾಗಲಕೋಟೆ ಡಿ.ಎಚ್.ಓ ಡಾ.ರಾಜಕುಮಾರ ಯರಗಲ್ ಅಮಾನತ್ತು

Suddi Mitra Editor

September 18, 2026 • 10:31 AM

ಬಾಗಲಕೋಟೆ ಡಿ.ಎಚ್.ಓ ಡಾ.ರಾಜಕುಮಾರ ಯರಗಲ್ ಅಮಾನತ್ತು

ಬೆಂಗಳೂರು : ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ್ ಯರಗಲ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ (ಶಿಸ್ತು ಪ್ರಾಧಿಕಾರ)ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ಮಾಧ್ಯಮಗಳಲ್ಲಿ ಬಂದಿರುವ ದೂರು, ಸಾರ್ವಜನಿಕ ಉದ್ದೇಶಗಳಿಗಾಗಿ ನೀಡಲಾದ ಆದೇಶ ಪಾಲನೆಯಲ್ಲಿ ಉದಾಸೀನ ನೀತಿ ಮೊದಲಾದ ವಿಷಯಗಳನ್ನು ಆಧಾರವಾಗಿರಿಸಿಕೊಂಡು ಅಮಾನತ್ತು ಮಾಡಲಾಗಿದೆ.

ಅವರ ಅಮಾನತ್ತು ಆದೇಶದಲ್ಲಿ ಉಲ್ಲೇಖಿತವಾದಂತೆ

ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಇವರ ಸಂಬಂಧಿ ಡಾ.ಅಂಕಿತಾ ಯರಗಲ್ ಅವರು ಪೂರ್ಣಾವಧಿಯ ಎಂ.ಡಿ. (ಪ್ಯಾಥೋಲಜಿ) ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲಿ ಬಾಗಲಕೋಟೆ ಜಿಲ್ಲೆಯ ವಾಂಬೆ ಕಾಲೋನಿಯ 'ನಮ್ಮ ಕ್ಲಿನಿಕ್'ನಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದಾಗಿ, ಅವರಿಗೆ 75 ಸಾವಿರ ರೂ. ವೇತನ ಪಾವತಿಸಿರುವುದಾಗಿ ಹಾಗೂ ಅವರು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿದ್ದರೂ ನಿಯಮಬಾಹೀರವಾಗಿ ವೇತನ ಪಾವತಿಸಿರುವುದಾಗಿ ಮತ್ತು ಎರಡ ಕಡೆಗಳಲ್ಲಿ ಹಾಜರಾತಿ ದಾಖಲಿಸಿರುವ ಕುರಿತು ದಾಖಲಾಗಿರುವ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ. ಅದೇ ತೆರನಾಗಿ ಕಚೇರಿ ವೇಳೆಯಲ್ಲಿ ನಿಯಮಿತವಾಗಿ ಲಭ್ಯವಿರುವುದಿಲ್ಲ, ಸಾರ್ವಜನಿಕರ ಹಾಗೂ ಇಲಾಖೆಯ ಅತ್ಯಗತ್ಯ ಕೆಲಸ-ಕಾರ್ಯಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದೇ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ದಾಖಲಾಗಿರುವ ವರದಿಯನ್ನು ಸಹ ಅಮಾನತ್ತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾ ಪಂಚಾಯತ್ ವತಿಯಿಂದ ನೀಡಲಾಗುವ ಆಡಳಿತಾತ್ಮಕ ಸೂಚನೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸದ ಕಾರಣ, ಇವರಿಂದ ಇಲಾಖೆಯ ಕಾರ್ಯಗಳನ್ನು ನಿಯಮಾನುಸಾರ ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಯೋಜನೆಗಳ ಅನುಷ್ಠಾನಕ್ಕೆಹಿನ್ನಡೆಯಾಗಿರುವುದಾಗಿ ತಿಳಿಸಲಾಗಿದ್ದು, ಜಿಲ್ಲೆಯ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಹಾಗೂ ಆಡಳಿತ ಯಂತ್ರದ ಸುಗಮ ನಿರ್ವಹಣೆಗಾಗಿ ಸದರಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ದಾಖಲಾದ ಶಿಫಾರಸ್ಸುಗಳನ್ವಯ ಅಮಾನತ್ತು ಮಾಡಲಾಗಿದೆ.

- Advertisement -