Loading...

ಬಿಡದಿ ಹೋರಾಟಕ್ಕೆ ಬ್ರೇಕ್ ಹಾಕಲು ‘ನಾಗೇಂದ್ರ' ವಿಷಯ ಮುನ್ನೆಲೆಗೆ? ಮೈತ್ರಿಯ ಮೇಲೆ ಬಿಡದಿ ಛಾಯೆ

Suddi Mitra Editor

August 25, 2026 • 08:42 AM

ಬಿಡದಿ ಹೋರಾಟಕ್ಕೆ ಬ್ರೇಕ್ ಹಾಕಲು  ‘ನಾಗೇಂದ್ರ' ವಿಷಯ ಮುನ್ನೆಲೆಗೆ?   ಮೈತ್ರಿಯ ಮೇಲೆ ಬಿಡದಿ ಛಾಯೆ

ಅಪ್ಪು ಪೋತರಾಜ

ಬೆಂಗಳೂರು : ಬಿಡದಿಗಿಂತಲೂ ಸಚಿವ ರಾಜಿನಾಮೆ ವಿಷಯವೇ ಇಡೀ ಕಲಾಪದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿರುವುದು ಮೈತ್ರಿ ಪಕ್ಷಗಳಲ್ಲಿಯೇ ಹೊಸ ಚರ್ಚೆ, ತೆರೆಮರೆಯ ಚಟುವಟಿಕೆಗಳಿಗೆ ವೇದಿಕೆಯಾಗಿದೆ.

ಇದರಲ್ಲಿಯೂ ಟ್ರಬಲ್ ಷೂಟರ್ ಡಿ.ಕೆ. ಶಿವಕುಮಾರ್ ಚಾಣಾಕ್ಷ ತಂತ್ರ ಅನುಸರಿಸರಿಸಿದ್ದಾರೆಯೇ ಎಂಬ ಕೂತೂಹಲವೂ ಕೆರಳಿದೆ.

ನಾಗೇಂದ್ರ ಪ್ರತಿಭಟನೆಗೆ ಜೆಡಿಎಸ್ ಸಾಥ್ ನೀಡಿ ಬಾವಿಗೂ ಇಳಿದಿತ್ತು, ಆದರೆ ಬಿಡದಿ ವಿಷಯದಲ್ಲಿ ಮಾತ್ರ ಬಿಜೆಪಿ ಬಿಡದಿ ವಿಷಯದಲ್ಲಿ ಗಟ್ಟಿ ಧ್ವನಿ ತಾಳದಿರುವುದು ಮೈತ್ರಿ ಪಕ್ಷಗಳಲ್ಲಿ ಇರಿಸು ಮುರುಸಿಗೆ ಕಾರಣವಾಗಲಿದೆಯೇ ಎಂದು ಅಂದಾಜಿಸಲಾಗಿದೆ.

ಕರ್ನಾಟಕದ ಪ್ರತಿಪಕ್ಷ ರಾಜಕಾರಣದಲ್ಲಿ ಕಳೆದ ಕೆಲವು ವಾರಗಳಿಂದ ನಿಧಾನವಾಗಿ ರೂಪುಗೊಳ್ಳುತ್ತಿದ್ದ ಒಂದು ದೊಡ್ಡ ಹೋರಾಟಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಅದು ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧದ ಹೋರಾಟ. ಮತ್ತೊಂದೆಡೆ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ–ಜೆಡಿಎಸ್‌ ಒತ್ತಾಯಿಸಿ ನಡೆಸುತ್ತಿರುವ ಹೋರಾಟ ವಿಧಾನಮಂಡಲದ ಕಲಾಪವನ್ನೇ ಬಲಿ ತೆಗೆದುಕೊಂಡಿದೆ.

ಇವೆರಡೂ ಪ್ರತ್ಯೇಕ ರಾಜಕೀಯ ವಿಷಯಗಳೇ? ಅಥವಾ ಒಂದರ ನೆರಳಿನಲ್ಲಿ ಮತ್ತೊಂದು ಹೋರಾಟ ಮಸುಕಾಗುತ್ತಿದೆಯೇ? ಇದೇ ಈಗ ರಾಜ್ಯ ರಾಜಕೀಯದಲ್ಲಿ ಕೇಳಿಬರುತ್ತಿರುವ ಕುತೂಹಲಕಾರಿ ಪ್ರಶ್ನೆ ಕಾಡುತ್ತಿದೆ.

ಬಿಡದಿ ಟೌನ್‌ಶಿಪ್‌ ಯೋಜನೆಗೆ ವಿರೋಧವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ–ಜೆಡಿಎಸ್‌ ಒಟ್ಟಾಗಿ ಧ್ವನಿ ಎತ್ತಿವೆ. ಸುಮಾರು 7,481 ಎಕರೆ ಪ್ರದೇಶದಲ್ಲಿ ಯೋಜನೆ ರೂಪಿಸುವ ಪ್ರಸ್ತಾವನೆಗೆ ರೈತರ ಭೂಸ್ವಾಧೀನದ ವಿಚಾರವೇ ಪ್ರಮುಖ ವಿರೋಧದ ಅಂಶವಾಗಿದೆ. ಸರ್ಕಾರವು ಬಲವಂತದ ಭೂಸ್ವಾಧೀನ ಮಾಡುವುದಿಲ್ಲ ಎಂದು ಹೇಳುತ್ತಿದ್ದರೂ, ಪ್ರತಿಪಕ್ಷಗಳು ಯೋಜನೆಯನ್ನೇ ಪ್ರಶ್ನಿಸುತ್ತಿವೆ.

ಆಗಸ್ಟ್‌ನಲ್ಲಿ ಬಿಜೆಪಿ–ಜೆಡಿಎಸ್‌ ನಾಯಕರು ವಿಧಾನಮಂಡಲದ ಒಳಗೂ ಹೊರಗೂ ಬಿಡದಿ ವಿಚಾರವನ್ನು ಜಂಟಿಯಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದರು. ಆರ್. ಅಶೋಕ್ ಅವರು ಸದನ ನಡೆಯಲು ಬಿಡುವುದಿಲ್ಲ ಎಂಬಷ್ಟು ಕಠಿಣ ನಿಲುವು ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಕೂಡ ರೈತರ ಭೂಮಿ ರಕ್ಷಣೆಗಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದರು.

ಹೀಗಾಗಿ ಬಿಡದಿ ಹೋರಾಟ ಕೇವಲ ಒಂದು ಯೋಜನೆ ವಿರೋಧದ ಹೋರಾಟವಾಗಿರದೆ, ಬಿಜೆಪಿ–ಜೆಡಿಎಸ್‌ ಮೈತ್ರಿಯ ರಾಜಕೀಯ ಶಕ್ತಿಪ್ರದರ್ಶನದ ಮೊದಲ ದೊಡ್ಡ ವೇದಿಕೆಯಾಗಿ ರೂಪುಗೊಳ್ಳುತ್ತಿತ್ತು.

ನಿಗೂಢದಂತೆ ತೋರಿದ ವಿಜಯೇಂದ್ರರ ನಡೆ...

ಬಿಡದಿ ಪಾದಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪಾತ್ರದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದದ್ದು ನಿಜ. ಪಾದಯಾತ್ರೆಗೆ ಅವರು ಸಂಪೂರ್ಣವಾಗಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಯಿತು. ಆದರೆ ನಂತರ ವಿಜಯೇಂದ್ರ ಅವರು ಬಿಡದಿ ರೈತರ ಹೋರಾಟಕ್ಕೆ ಬಿಜೆಪಿಯ ಬೆಂಬಲದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಅದರರ್ಥ, ವಿಜಯೇಂದ್ರರು ಹೋರಾಟವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂದು ಖಚಿತವಾಗಿ ಹೇಳಲು ಸಾಕಷ್ಟು ಪುರಾವೆ ಇಲ್ಲ. ಆದರೆ ಅವರ ಆರಂಭಿಕ ಗೈರುಹಾಜರಿ ಮತ್ತು ನಂತರದ ನಿಲುವು ಮೈತ್ರಿಯೊಳಗಿನ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು ಮಾತ್ರ ಸತ್ಯ.

ತಪ್ಪಿತೇ ಅಶೋಕ್–ಎಚ್.ಡಿ.ಕೆ ಲೆಕ್ಕಾಚಾರ?

ಪ್ರತಿಪಕ್ಷಗಳ ಲೆಕ್ಕಾಚಾರ ಸರಳವಾಗಿತ್ತು. ಬಿಡದಿ ಟೌನ್‌ಶಿಪ್‌ ವಿಚಾರವನ್ನು ವಿಧಾನಸಭೆಯ ಕೇಂದ್ರಬಿಂದುವಾಗಿಸಿ, ರೈತರ ಭೂಮಿ, ಭೂಸ್ವಾಧೀನ, ಯೋಜನೆಯ ಆರ್ಥಿಕ ಹೊರೆ ಹಾಗೂ ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸುವುದು.

ಅದರ ಜೊತೆಗೆ ಬಿಜೆಪಿ–ಜೆಡಿಎಸ್‌ ಒಟ್ಟಾಗಿ ಹೋರಾಟ ನಡೆಸಿದರೆ, ಅದು ಮುಂದಿನ ಚುನಾವಣಾ ರಾಜಕೀಯಕ್ಕೂ ಮೈತ್ರಿಗೆ ನೆಲೆ ಸಿದ್ಧಪಡಿಸಬಹುದು ಎಂಬ ಲೆಕ್ಕಾಚಾರವೂ ರಾಜಕೀಯವಾಗಿ ಅರ್ಥವಾಗುತ್ತದೆ. ಬಿಜೆಪಿ–ಜೆಡಿಎಸ್‌ ನಾಯಕರೇ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಟ್ಟಾಗಿ ಹೋರಾಡಲು ನಿರ್ಧರಿಸಿರುವುದಾಗಿ ಹೇಳಿರುವ ವರದಿಗಳೂ ಇವೆ.

ಆದರೆ ಇದೇ ಸಂದರ್ಭದಲ್ಲಿ ನಾಗೇಂದ್ರ ರಾಜೀನಾಮೆ ವಿಚಾರ ತೀವ್ರಗೊಂಡಿತು.

ನಾಗೇಂದ್ರ ಅಸ್ತ್ರ’ :ಬದಲಾದ ಹೋರಾಟದ ದಿಕ್ಕು?

ಆಗಸ್ಟ್‌ 24 ರಂದು ಬಿಜೆಪಿ ನಾಯಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಹೋರಾಟ ನಡೆಸಿದರು; ಪೊಲೀಸರು ಹಲವು ನಾಯಕರನ್ನು ವಶಕ್ಕೆ ಪಡೆದರು.

ಇದರಿಂದ ವಿಧಾನಮಂಡಲದ ಸಂಪೂರ್ಣ ರಾಜಕೀಯ ಚರ್ಚೆಯ ಕೇಂದ್ರವೇ ನಾಗೇಂದ್ರ ರಾಜೀನಾಮೆ ವಿಚಾರದತ್ತ ತಿರುಗಿತು. ಅಂತಿಮವಾಗಿ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ವಿಧಾನಮಂಡಲದ ಕಲಾಪವೂ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಯಿತು.

ಇಲ್ಲಿಯೇ ರಾಜಕೀಯ ಕುತೂಹಲ ಆರಂಭವಾಗುತ್ತದೆ.

ಬಿಡದಿ ಹೋರಾಟವನ್ನು ವಿಧಾನಮಂಡಲದ ಒಳಗೆ ದೊಡ್ಡ ರಾಜಕೀಯ ಅಸ್ತ್ರವನ್ನಾಗಿ ಬಳಸಬೇಕೆಂದು ನಿರೀಕ್ಷಿಸಿದ್ದ ಪ್ರತಿಪಕ್ಷಗಳಿಗೆ, ನಾಗೇಂದ್ರ ರಾಜೀನಾಮೆ ಹೋರಾಟವೇ ಮುಖ್ಯ ಅಜೆಂಡಾವಾಗಿ ಬದಲಾದರೆ ಏನಾಗುತ್ತದೆ? ಎಂಬುದು ಕುತೂಹಲ ಕೆರಳಿಸಿದೆ.

ಒಂದು ವಿಷಯದ ಮೇಲೆ ಸರ್ಕಾರವನ್ನು ಸತತವಾಗಿ ಸುತ್ತುವರಿಯಬೇಕಿದ್ದ ಪ್ರತಿಪಕ್ಷಗಳು ಮತ್ತೊಂದು ವಿಷಯದ ಮೇಲೆ ಸಂಪೂರ್ಣ ಶಕ್ತಿ ಕೇಂದ್ರೀಕರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದು ರಾಜಕೀಯ ಷಡ್ಯಂತ್ರವೇ?

ಇದನ್ನು ಈಗಲೇ ‘ರಾಜಕೀಯ ಷಡ್ಯಂತ್ರ’ ಎಂದು ತೀರ್ಮಾನಿಸುವುದು ಅತಿಶಯೋಕ್ತಿಯಾಗಬಹುದು. ಆದರೆ ರಾಜಕೀಯ ಪರಿಣಾಮ ಮಾತ್ರ ನಿರಾಕರಿಸಲಾಗದು.

ಬಿಡದಿ ವಿಚಾರದಲ್ಲಿ ಬಿಜೆಪಿ–ಜೆಡಿಎಸ್‌ ಒಗ್ಗಟ್ಟಿನ ಹೋರಾಟ ಗಟ್ಟಿಯಾಗುತ್ತಿದ್ದ ಸಮಯದಲ್ಲೇ ನಾಗೇಂದ್ರ ರಾಜೀನಾಮೆ ವಿಚಾರ ತೀವ್ರಗೊಂಡಿದೆ. ಎರಡೂ ಹೋರಾಟಗಳು ಒಂದೇ ವಿಧಾನಮಂಡಲ ಅಧಿವೇಶನದ ಅವಧಿಯಲ್ಲಿ ನಡೆದಿರುವುದರಿಂದ ಪ್ರತಿಪಕ್ಷಗಳ ಸಮಯ, ಶಕ್ತಿ ಮತ್ತು ಮಾಧ್ಯಮದ ಗಮನ ಯಾವ ವಿಷಯದತ್ತ ಹೆಚ್ಚು ಹೋಗುತ್ತಿದೆ ಎಂಬುದು ಮಹತ್ವದ ಪ್ರಶ್ನೆಯಾಗಿದೆ.

ಕುಮಾರಸ್ವಾಮಿಗೆ ಮುಜುಗರವೇ?

ಇಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಸ್ಥಿತಿಯೂ ಕುತೂಹಲಕಾರಿ.

ಬಿಡದಿ ಟೌನ್‌ಶಿಪ್‌ ಹೋರಾಟವನ್ನು ಅವರು ವೈಯಕ್ತಿಕವಾಗಿ ಮುನ್ನಡೆಸಿದ ಪ್ರಮುಖ ರಾಜಕೀಯ ವಿಷಯವನ್ನಾಗಿ ರೂಪಿಸಿಕೊಂಡಿದ್ದಾರೆ. ಜೆಡಿಎಸ್‌ ಪಾದಯಾತ್ರೆ, ರೈತರ ಸಭೆ, ವಿಧಾನಮಂಡಲದಲ್ಲಿ ಪ್ರಶ್ನೆ—ಎಲ್ಲೆಡೆ ಬಿಡದಿ ವಿಚಾರವನ್ನು ಕೇಂದ್ರದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಆಗಸ್ಟ್‌ 18ರಂದು ಕೂಡ ಕುಮಾರಸ್ವಾಮಿ ಅವರು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಆದರೆ ಇದೀಗ ವಿಧಾನಮಂಡಲದ ರಾಜಕೀಯ ವೇದಿಕೆಯಲ್ಲಿ ‘ಬಿಡದಿ’ಗಿಂತ ‘ನಾಗೇಂದ್ರ ರಾಜೀನಾಮೆ’ ಎಂಬ ಘೋಷಣೆ ಹೆಚ್ಚು ಕೇಳಿಬರುತ್ತಿದೆ

ಇದು ಕುಮಾರಸ್ವಾಮಿ ಅವರ ಹೋರಾಟದ ರಾಜಕೀಯ ವೇಗವನ್ನು ಕುಗ್ಗಿಸುತ್ತದೆಯೇ?

ಬಿಜೆಪಿ–ಜೆಡಿಎಸ್‌ ಮೈತ್ರಿಯೊಳಗೆ ಅಜೆಂಡಾ ನಿಗದಿ ಮಾಡುವ ಪ್ರಶ್ನೆ ಮತ್ತೆ ಉದ್ಭವಿಸುತ್ತದೆಯೇ?

ಎಂಬ ಪ್ರಶ್ನೆಗೆ ಕಾರಣವಾಗಿದೆ.

- Advertisement -