ಕಪ್ಪು ಟೀಶರ್ಟ್‌ಗೆ ಬ್ರೇಕ್; ಏಳು ದಿನಗಳ ಕಲಾಪ ನುಂಗಿದ ನಾಗೇಂದ್ರ!
ಬೆಂಗಳೂರು : ಕಳೆದ ಐದು ದಿನಗಳಿಂದಲೂ ಉಭಯ ಸದನಗಳಲ್ಲಿ ಸಚಿವ ನಾಗೇಂದ್ರ ರಾಜಿನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆ ವಿವಿಧ ಸ್ವರೂಪ ಪಡೆದುಕೊಂಡರೂ, ಘೋಷಣೆಗಳ ಅಬ್ಬರದಲ್ಲಿಯೇ ಅನೇಕ ವಿಧೇಯಕಗಳ ಮಂಡನೆ, ಬರಗಾಲದ ಮೇಲೆ ಚರ್ಚೆ ನಡೆಯಿತು. ಆದರೆ ಯಾವ ವಿಷಯ ಪ್ರಸ್ತಾಪವಾಗುತ್ತಿದ್ದೇಯೋ, ಯಾವ ಸ್ಪಷ್ಟೀಕರಣ, ಯಾವ ನಿರ್ಧಾರ ಪ್ರಕಟ ಎಂಬುದು ಸಹ ಗೊತ್ತಾಗದೇ ನಾಲ್ಕು ದಿನ ಕಲಾಪ ಸಂಪನ್ನಗೊಂಡಿದೆ.
ಪ್ರಥಮ ದಿನವೇ ಉಭಯ ಸದನದಲ್ಲಿ ಆರಂಭವಾದ ಈ ಪ್ರಹಸನ ನಾಲ್ಕು ದಿನವೂ ಬಿಟ್ಟು ಬಿಡದೇ ನಡೆಯಿತು. ಒಂದು ಕ್ಷಣವೂ ಸಹ ಪ್ರತಿಪಕ್ಷ ನಾಯಕರು ಬಿಡದೇ ಸಚಿವ ನಾಗೇಂದ್ರ ರಾಜಿನಾಮೆಗೆ ಪಟ್ಟು ಹಿಡಿದರು.
ವಿಧಾನಸಭೆಗೆ ಬೆಳಿಗ್ಗೆಯಿಂದಲೇ ಬಿಜೆಪಿ ಸದಸ್ಯರು ಕಪ್ಪು ಬಟ್ಟೆಯ ಟೀಶರ್ಟ್ ಮೇಲೆ ಎಸ್.ಟಿ. ಜನರಿಗೆ ಅನ್ಯಾಯ, ಎಸ್.ಟಿ. ಜನರ ದುಡ್ಡು ಎಲ್ಲಿ ಹೋಯ್ತು, ನಾಗೇಂದ್ರನ ಬಳಿ ಹೋಯ್ತು ಎಂಬ ಸಂದೇಶ ಸಾರುವ ಕಪ್ಪು ವರ್ಣದ ಟೀ ಶರ್ಟ್ ಧರಿಸಿ ಕಲಾಪದಲ್ಲಿ ಭಾಗಿಯಾಗಲು ಅಣಿಯಾದರು. ಆದರೆ ನಿಯಮಾವಳಿಗಳ ಪ್ರಕಾರ ಕಪ್ಪು ಬಟ್ಟೆ ಧರಿಸುವುದಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಟೀ ಶರ್ಟ್ಗಳನ್ನು ವಾಪಾಸ್ಸು ಪಡೆದುಕೊಳ್ಳಲಾಯಿತು. ಆದರೆ ಪ್ರತಿಭಟನೆಯ ಕಾವು ಮಾತ್ರ ಕಡಿಮೆಯಾಗಲಿಲ್ಲ.
ಒಂದು ದಿನ ಕಪ್ಪು ಶಲ್ಯ ಧರಿಸಿ, ಇನ್ನೊಂದು ಬಾರಿ ಕಪ್ಪು ಬಟ್ಟೆ ಧರಿಸಿ, ಇನ್ನೂ ಕೆಲವರು ಸದಸ್ಯರು ತಲೆಗೆ ಕಪ್ಪು ರುಮಾಲು ಹಾಕಿ ಪ್ರತಿಭಟಿಸಿದ್ದುಂಟು, ಜೊತೆಗೆ ರಾಜಿನಾಮೆ ಹಾಗೂ ಹಗರಣವನ್ನು ಬಿಂಬಿಸುವ ಪ್ಲೇ ಕಾರ್ಡ್‌ಗಳ ಪ್ರದರ್ಶನ ಸಹ ನಡೆಯಿತು. ಕೆಲವೊಮ್ಮೆ ಮೇಜು ಕುಟ್ಟಿ, ಕೆಲವೊಮ್ಮೆ ಚಪ್ಪಾಳೆ ಹೊಡೆದು, ಕೆಲವೊಮ್ಮೆ ಕಾಗದ ಪತ್ರಗಳಿಂದಲೇ ಮೇಜುಗಳಿಗೆ ಕುಟ್ಟಿ ಆಡಳಿತ ಪಕ್ಷದ ಚರ್ಚೆಗೆ ತಡೆಯೊಡ್ಡುವ ಪ್ರಯತ್ನ ಮಾಡಿದರು. ಮೇಲ್ಮನೆ ಸದಸ್ಯ ಸಿ.ಟಿ. ರವಿ ಹಗರಣ ಮಾಡಿದ್ದೀರಾ ನೀವು ಜೈಲು ಸೇರಿದ್ದಾರೆ ಎಂಬ ಹಾಡಿನ ದಾಟಿಯಲ್ಲಿ ಸಾಲುಗಳನ್ನು ಉಲ್ಲೇಖಿಸಿದರು. ಅದಕ್ಕೆ ಚಪ್ಪಾಳೆಯನ್ನೇ ತಾಳವಾಗಿಸಿ ಸಾಥ್ ನೀಡಿದರು. ಕೆಳಮನೆಯಲ್ಲಿ ಹುಂಡಿ ಹಣ ಕಳ್ಳತನ ಏನಾಯಿಯ್ತು ಎಂಬ ಪ್ಲೇ ಕಾರ್ಡ್ಗಳನ್ನು ಆಡಳಿತ ಪಕ್ಷದ ಸದಸ್ಯರು ಪ್ರದರ್ಶಿಸಿದ ಪ್ರಸಂಗವೂ ನಡೆಯಿತು.
ಡಿ.ದೇವರಾಜ್ ಅರಸು ಅವರ ಜಯಂತೋತ್ಸವವಾಗಿ ಮೇಲ್ಮನೆಯಲ್ಲಿ ಚರ್ಚೆ ನಡೆದಾಗ ಶಾಸ್ತçಕ್ಕೆ ಎಂಬಂತ ಪ್ರತಿಪಕ್ಷ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ `ಡಿ.ದೇವರಾಜ್ ಅರಸು ಅವರ ಬಗ್ಗೆ ನನಗೆ ಅಪಾರ ಗೌರವವವಿದೆ' ಎಂದು ಎರಡು ಸಾಲುಗಳನ್ನು ಉಲ್ಲೇಖಿಸಿ ಪ್ರತಿಭಟನೆಗೆ ಅಣಿಯಾದರು. ಈ ವಿಷಯ ಆಡಳಿತ ಪಕ್ಷದವರನ್ನು ಕೆರಳಿಸಿತು. ಮುತ್ಸದ್ಧಿ ನಾಯಕನ ಬಗ್ಗೆ ಮಾತನಾಡುವುದಕ್ಕಿಂತ ರಾಜಕೀಯವೇ ಮೇಲಾಯಿತೇ ಎಂದು ಅಸಮಾಧಾನ ಹೊರಹಾಕಿದರು. ಈ ವೇಳೆ ವಾಕ್ಸಮರ ತಾರಕಕ್ಕೇರಿದಾಗ ಸದನವನ್ನು ಕೆಲಕಾಲ ಮುಂದೂಡಲಾಯಿತು. ಸಭಾಪತಿ ಸಲೀಂ ಅಹ್ಮದ್ ಸಂಧಾನ ಸಭೆ ನಡೆಸಿ ಮುತ್ಸದ್ಧಿ ನಾಯಕನ ಬಗ್ಗೆ ಮಾತನಾಡಬೇಕು ಎಂದು ಸಲಹೆ ನೀಡಿದರು. ಅದರಂತೆ ಮೇಲ್ಮನೆಯಲ್ಲಿ ಡಿ.ದೇವರಾಜ್ ಅರಸು ಅವರ ಜೀವನ, ಚಿಂತನೆ, ಕೊಡುಗೆಗಳ ಮೇಲೆ ಪರಿಷತ್ ಸದಸ್ಯರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.
ಆದರೆ ನಾಲ್ಕುದಿನಗಳ ಈ ಪ್ರಹಸನದ ನಡುವೆಯೇ ಆಡಳಿತ ಪಕ್ಷ ಅನೇಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ವಿಧೇಯಕ ಸೇರಿದಂತೆ ಅನೇಕ ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಸಹ ಪಡೆಯಿತು.