ಮೀನುಗಾರರ ಸಂಕಷ್ಟ ಆಲಿಸಿದ ಸಿಎಂ; ಬಂದರು ಅಭಿವೃದ್ಧಿಗೆ ಹೊಸ ಭರವಸೆ
ಮೀನುಗಾರರ ಮನದ ಮಾತಿಗೆ ಕಿವಿಗೊಟ್ಟ ಸಿಎಂ
ಮಂಗಳೂರು ಬಂದರಿಗೆ ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ: ಅಕ್ರಮ, ವ್ಯಾಪಾರ ಸ್ಥಗಿತಕ್ಕೆ ಖಡಕ್ ಎಚ್ಚರಿಕೆ
ಮಂಗಳೂರು, ಸೆ.19: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕೆ ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರು, ವ್ಯಾಪಾರಿಗಳು ಹಾಗೂ ಅಧಿಕಾರಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿ ಬಂದರಿನ ಸಮಸ್ಯೆಗಳನ್ನು ಆಲಿಸಿದರು. ಬೋಟ್ ಏರಿ ಅಳಿವೆಬಾಗಿಲು ಹಾಗೂ ಬಂದರು ಪ್ರದೇಶವನ್ನು ಪರಿಶೀಲಿಸಿದ ಅವರು, ಮೀನುಗಾರರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಂದರಿನಲ್ಲಿ ಸದ್ಯ ಸುಮಾರು 200 ಬೋಟ್‌ಗಳಿಗೆ ಡಾಕ್ ವ್ಯವಸ್ಥೆಯಿದ್ದು, ಹೆಚ್ಚಿನ ಬೋಟ್‌ಗಳಿಗೆ ಅವಕಾಶ ಕಲ್ಪಿಸಲು ಪಾಲ್ಗುಣಿ, ನೇತ್ರಾವತಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ಪ್ರದೇಶದಲ್ಲಿ ಹೊಸ ಡಾಕ್‌ಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಮೀನುಗಾರರ ಮುಖಂಡರು ಸಿಎಂಗೆ ವಿವರಿಸಿದರು. ಕಳೆದ ಹಲವು ವರ್ಷಗಳಿಂದ ಡ್ರೆಜ್ಜಿಂಗ್ ಆಗದಿರುವುದರಿಂದ ಅಳಿವೆಬಾಗಿಲು ಹಾಗೂ ನದಿ ಪ್ರದೇಶಗಳಲ್ಲಿ ಹೂಳು ತುಂಬಿಕೊಂಡಿದ್ದು, ಡ್ರೆಜ್ಜಿಂಗ್ ಮಾಡಿ ಚಾನಲ್ ಮಾರ್ಕಿಂಗ್ ಬಾಯ್‌ಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಬಂದರಿಗೆ ಸಿಎಂ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮೀನು ವ್ಯಾಪಾರ ಸ್ಥಗಿತಗೊಂಡಿರುವುದನ್ನು ಗಮನಿಸಿದ ಶಿವಕುಮಾರ್, “ಯಾವುದೇ ಕಾರಣಕ್ಕೂ ವ್ಯಾಪಾರ ನಿಲ್ಲಬಾರದು. ಇದರಿಂದ ಮೀನುಗಾರರು ಹಾಗೂ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗಬಾರದು” ಎಂದು ಸೂಚಿಸಿದರು. ವ್ಯಾಪಾರ ಸ್ಥಗಿತಕ್ಕೆ ಕಾರಣವೇನು ಎಂಬುದರ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ ಅವರು, ಅಧಿಕಾರಿಗಳ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಬಂದರು ಪ್ರದೇಶದಲ್ಲಿ ರಸ್ತೆ ನಿರ್ಬಂಧ, ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವುದು ಸೇರಿದಂತೆ ಕಾನೂನು ಉಲ್ಲಂಘನೆಗಳ ಬಗ್ಗೆ ಗಮನ ಹರಿಸಿದ ಸಿಎಂ, “ಕಾನೂನು ಉಲ್ಲಂಘಿಸುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಖಾಸಗಿ ಆಸ್ತಿ ಎಂದು ಹೇಳಿದರೆ ದಾಖಲೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರ್ಕಾರದ ವಶಕ್ಕೆ ಪಡೆದು ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಮೀನುಗಾರಿಕೆ ಸಮುದಾಯ ಕರಾವಳಿಯ ಪ್ರಮುಖ ಆರ್ಥಿಕ ಶಕ್ತಿಕೇಂದ್ರವಾಗಿದ್ದು, ಅದರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದ ಅವರು, ಮೀನುಗಾರಿಕೆ ಶಿಕ್ಷಣ, ತಾಂತ್ರಿಕ ತರಬೇತಿ, ನೀಲಿ ಆರ್ಥಿಕತೆ ಹಾಗೂ ಸಮುದ್ರ ಮೆಟ್ರೋ ಸೇರಿದಂತೆ ಹಲವು ಕ್ಷೇತ್ರಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು.
ಕರಾವಳಿ ಅಭಿವೃದ್ಧಿಗಾಗಿ ಈಗಾಗಲೇ ದೊಡ್ಡ ಪ್ರಮಾಣದ ಯೋಜನೆಗಳನ್ನು ಘೋಷಿಸಲಾಗಿದ್ದು, ಗ್ರಾಮೀಣ ರಸ್ತೆಗಳು, ಕುಡಿಯುವ ನೀರು ಹಾಗೂ ಇತರೆ ಮೂಲಸೌಕರ್ಯಗಳಿಗೂ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಹೇಳಿದರು. ಮೀನುಗಾರರ ಸಮಸ್ಯೆಗಳ ಕುರಿತು ಗುಪ್ತ ವರದಿಗಳನ್ನೂ ಪಡೆದು, ಯಾವುದೇ ಮಾಫಿಯಾ ಅಥವಾ ಒತ್ತಡವಿದ್ದರೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಅಳಿವೆಬಾಗಿಲಿನಲ್ಲಿ ಹಲವು ವರ್ಷಗಳಿಂದ ಹೂಳು ತೆಗೆಯದಿರುವ ವಿಚಾರಕ್ಕೂ ಸ್ಪಂದಿಸಿದ ಸಿಎಂ, ತಾಂತ್ರಿಕ ಸಲಹೆ ಪಡೆದು ಡ್ರೆಜ್ಜಿಂಗ್ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಮೀನು ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಅಶೋಕ್ ಅವರಿಗೆ ಮೀನು ತಿನ್ನುವ ಆಸೆಯಾಗಿದೆ. ಮಂಗಳೂರಿನಿಂದಲೇ ಮೀನು ಕಳುಹಿಸಿ ಅವರ ಆಸೆ ತೀರಿಸೋಣ” ಎಂದು ಹಾಸ್ಯಮಿಶ್ರಿತ ತಿರುಗೇಟು ನೀಡಿದರು.
ಕರಾವಳಿ ಕರ್ನಾಟಕ ರಾಜ್ಯದಷ್ಟೇ ಅಲ್ಲ, ದೇಶದ ಸಂಪತ್ತು. ಹೀಗಾಗಿ ಹೂಡಿಕೆ, ಪ್ರವಾಸೋದ್ಯಮ, ಮೂಲಸೌಕರ್ಯ ಹಾಗೂ ನೀಲಿ ಆರ್ಥಿಕತೆಗೆ ಒತ್ತು ನೀಡಿ ಸಮಗ್ರ ಕರಾವಳಿ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು. ಮಂಗಳೂರಿನಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಿರ್ಧಾರವೂ ಕೈಗೊಳ್ಳಲಾಗಿದೆ.
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು. “ನಾವು ನುಡಿದಂತೆ ನಡೆಯುತ್ತೇವೆ. ಅದೇ ನಮ್ಮ ಶಕ್ತಿ” ಎಂದು ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.