Loading...

ಅಪರಾಧದ ಕಬಂಧಬಾಹುವಿನಲ್ಲಿ ವಿಜಯಪುರ: ಜನರ ಭದ್ರತೆಗೆ ಯಾರು ಹೊಣೆ?

Suddi Mitra Editor

July 18, 2026 • 02:36 PM

ಅಪರಾಧದ ಕಬಂಧಬಾಹುವಿನಲ್ಲಿ ವಿಜಯಪುರ: ಜನರ ಭದ್ರತೆಗೆ ಯಾರು ಹೊಣೆ?

ಅಪ್ಪು ಪೋತರಾಜ

ಬೆಂಗಳೂರು /ವಿಜಯಪುರ:ಒಂದೆಡೆ ಸರಣಿ ಕೊಲೆಗಳು, ಫೈಯರಿಂಗ್, ಬ್ಯಾಂಕ್ ದರೋಡೆ ಹೀಗೆ ಗುಮ್ಮಟ ನಗರಿಯಲ್ಲಿ ಕ್ರೈಂ ರೇಟ್ ಏರುತ್ತಲೇ ಇದೆ... ಕೊಲೆ, ದರೋಡೆ ಸಾಮಾನ್ಯ ಎಂಬಂತಾಗಿದೆ. ಚಡಚಣದಲ್ಲಿ ಒಂದೇ ಕಾಲಕ್ಕೆ ಆರು ಜನರ ಕಗ್ಗೊಲೆ, ಬ್ಯಾಂಕ್ ದರೋಡೆ, ಹಾಡು ಹಗಲೇ ಅನೇಕ ಫೈರಿಂಗ್ ಹೀಗೆ ಅಪರಾಧಗಳ ಸರಣಿ ನಡೆಯುತ್ತಲೇ ಇದೆ. ಒಂದು ಜಿಲ್ಲೆಯ ಶಕ್ತಿ ಅದರ ಕಟ್ಟಡಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಇರುವುದಿಲ್ಲ; ಅಲ್ಲಿನ ಜನರು ಎಷ್ಟು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬುದರಲ್ಲಿ ಅಡಗಿದೆ. ರಾತ್ರಿ ಮಾತ್ರವಲ್ಲ, ಹಗಲಲ್ಲಿಯೂ ಭಯವಿಲ್ಲದೆ ಓಡಾಡುವ ವಾತಾವರಣವಿದ್ದಾಗ ಮಾತ್ರ ಒಂದು ಪ್ರದೇಶವನ್ನು ಸುರಕ್ಷಿತ ಎಂದು ಕರೆಯಬಹುದು. ಆದರೆ ಬಿಜಾಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊಲೆ, ಹಗಲು ದರೋಡೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ಪದೇಪದೇ ವರದಿಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ಮೇಲಿನ ನಂಬಿಕೆ ಕುಸಿಯುತ್ತಿದೆಯೇ?ಪ್ರಶ್ನೆ ಮೂಡಿದೆ. ಕೊಲೆ, ದರೋಡೆ, ರಾಬರಿ, ಕಳ್ಳತನ, ಬೆದರಿಕೆ ಮತ್ತು ಇತರ ಗಂಭೀರ ಅಪರಾಧ ಪ್ರಕರಣಗಳು ಪದೇಪದೇ ವರದಿಯಾಗುತ್ತಿರುವುದು ಜನರಲ್ಲಿ ಅಭದ್ರತೆಯ ಭಾವನೆ ಹೆಚ್ಚಿಸಿದೆ.ಮನೆಯಿಂದ ಹೊರಗೆ ಹೋದವರು ಸುರಕ್ಷಿತವಾಗಿ ಮನೆಗೆ ಮರಳುವರೇ? ಎಂಬ ಪ್ರಶ್ನೆ ಸಾಮಾನ್ಯ ಜನರನ್ನು ಕಾಡುವಂತಾಗಿದೆ. ಇದರ ನಡುವೆ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇಂತಹ ಆರೋಪಗಳು ಸತ್ಯಾಸತ್ಯತೆ ತಿಳಿಯಲು ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆಯ ಮೂಲಕವೇ ಸ್ಪಷ್ಟಪಡಿಸಬೇಕು. ಆದರೆ ಇಂತಹ ಅನುಮಾನಗಳು ಮೂಡುವುದೇ ಕಾನೂನು-ಸುವ್ಯವಸ್ಥೆಯ ಬಗ್ಗೆ ಜನರಲ್ಲಿ ಇರುವ ಆತಂಕವನ್ನು ತೋರಿಸುತ್ತದೆ.

ಅಪರಾಧ ನಡೆದ ನಂತರ ಆರೋಪಿಗಳನ್ನು ಬಂಧಿಸುವುದು ಮಾತ್ರ ಸಾಕಾಗುವುದಿಲ್ಲ. ಅಪರಾಧ ನಡೆಯದಂತೆ ತಡೆಯುವ ವ್ಯವಸ್ಥೆ ಇನ್ನಷ್ಟು ಬಲವಾಗಬೇಕು. ಗುಪ್ತಚರ ಮಾಹಿತಿ ಸಂಗ್ರಹ, ಅಪರಾಧ ಪ್ರವೃತ್ತಿಯ ವ್ಯಕ್ತಿಗಳ ಮೇಲೆ ಕಾನೂನುಬದ್ಧ ನಿಗಾ, ರಾತ್ರಿ ಗಸ್ತು, ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಮನ್ವಯ ಅಗತ್ಯ.

ಇದರ ಜೊತೆಗೆ ಪುಡಿ ರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಗಲು ಹೊತ್ತಿನಲ್ಲೇ ಕೊಲೆ, ದರೋಡೆ ಹಾಗೂ ರಾಬರಿ ಪ್ರಕರಣಗಳು ನಡೆಯುತ್ತಿರುವುದರಿಂದ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ ಜಿಲ್ಲೆಯ ಕೊಲೆ, ದರೋಡೆ, ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಪ್ರಶ್ನೆಗಳನ್ನು ಕೇಳಿದಾಗ, ಸಮರ್ಪಕ ಮಾಹಿತಿ ನೀಡುವ ಬದಲು "ಓಕೆ... ಥ್ಯಾಂಕ್ಯೂ" ಎಂಬ ಒಂದೇ ಉತ್ತರ ನೀಡಿ ಸಂಭಾಷಣೆಯನ್ನು ಮುಗಿಸುವುದು ಪತ್ರಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ನಡೆಯುತ್ತಿರುವ ಅಪರಾಧ ಪ್ರಕರಣಗಳ ತನಿಖೆಯ ಪ್ರಗತಿ, ಆರೋಪಿಗಳ ಬಂಧನ, ಕಾನೂನು ಸುವ್ಯವಸ್ಥೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಮಹತ್ವದ್ದಾಗಿದೆ. ಆದರೆ ಮಾಧ್ಯಮದ ಪ್ರಶ್ನೆಗಳಿಗೆ ವಿವರವಾದ ಉತ್ತರ ನೀಡದೆ ತಪ್ಪಿಸಿಕೊಳ್ಳುವ ಧೋರಣೆ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

ಪೊಲೀಸ್ ಇಲಾಖೆ ಜನರ ವಿಶ್ವಾಸವನ್ನು ಗಳಿಸಬೇಕಾದರೆಪಾರದರ್ಶಕತೆ, ತ್ವರಿತ ತನಿಖೆ ಕಾನೂನು ಜಾರಿಯೇ ಪ್ರಮುಖ ಅಸ್ತ್ರ. ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನಿಗಿಂತ ದೊಡ್ಡದಿಲ್ಲ ಎಂಬ ಸಂದೇಶ ಸಮಾಜಕ್ಕೆ ಸ್ಪಷ್ಟವಾಗಿ ತಲುಪಬೇಕು.

ಇದೇ ವೇಳೆ, ಸಮಾಜದ ಜವಾಬ್ದಾರಿಯೂ ಕಡಿಮೆ ಇಲ್ಲ. ಯುವಕರು ಅಪರಾಧ ಚಟುವಟಿಕೆಗಳಿಂದ ದೂರವಿರಬೇಕು. ಪೋಷಕರು, ಶಿಕ್ಷಕರು, ಸಮಾಜದ ಮುಖಂಡರು ಮತ್ತು ನಾಗರಿಕರು ಯುವಜನರನ್ನು ಸಕಾರಾತ್ಮಕ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರಬೇಕು. ಅಪರಾಧದ ಬಗ್ಗೆ ಮಾಹಿತಿ ಇದ್ದರೆ ಕಾನೂನುಬದ್ಧವಾಗಿ ಪೊಲೀಸರಿಗೆ ನೀಡುವ ಸಹಕಾರವೂ ಮುಖ್ಯ.

ವಿಜಾಪುರದ ಜನರು ಬಯಸುವುದು ಒಂದೇ-ಭಯವಲ್ಲ, ಭದ್ರತೆ. ಅಪರಾಧವಲ್ಲ, ಶಾಂತಿ. ಅನುಮಾನವಲ್ಲ, ನ್ಯಾಯದ ಮೇಲೆ ವಿಶ್ವಾಸ. ಈ ವಿಶ್ವಾಸವನ್ನು ಉಳಿಸಿಕೊಳ್ಳುವುದು ಪೊಲೀಸ್ ಇಲಾಖೆ, ಆಡಳಿತ ಮತ್ತು ಸಮಾಜದ ಎಲ್ಲ ವರ್ಗಗಳ ಜಂಟಿ ಹೊಣೆಗಾರಿಕೆಯಾಗಿದೆ. ಸುರಕ್ಷಿತ ಬಿಜಾಪುರ ನಿರ್ಮಾಣಕ್ಕಾಗಿ ದೃಢ ಕ್ರಮಗಳು, ಕಾನೂನಿನ ಕಟ್ಟುನಿಟ್ಟಿನ ಜಾರಿ ಮತ್ತು ಜನರ ಸಹಭಾಗಿತ್ವ ಇಂದಿನ ಅಗತ್ಯವಾಗಿದೆ.

- Advertisement -