ಕೋಟಿ ವೆಚ್ಚದಲ್ಲಿ ಪರಿಸರ ರಕ್ಷಣೆ - ಇಂಧನ ಮಿತವ್ಯಯಕ್ಕೆ ಮುಂದಾದ ಗುಡಗುಂಟಿ:ಜನಪ್ರತಿನಿಧಿಯ ಪರಿಸರ ಕಾಳಜಿಯ ಹೆಜ್ಜೆ. ಶಾಸಕ ಗುಡಗುಂಟಿ, ದಿವ್ಯ ಸಂಕಲ್ಪ
ಅಪ್ಪು ಪೋತರಾಜ
ಜಮಖಂಡಿ : ಉದ್ಯಮ, ಸಮಾಜ ಸೇವೆಯನ್ನು ತನ್ನ ನಯನಗಳಾಗಿಸಿಕೊಂಡು ಜನರ ಸೇವೆಯನ್ನು ಸದಾ ಮನದಲ್ಲಿರಿಸಿಕೊಂಡು ಮುನ್ನಡೆಯುತ್ತಿರುವ ಉದ್ಯಮಿ, ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು ಈಗ ಪರಿಸರ ರಕ್ಷಣೆ ಹಾಗು ಇಂಧನ ಮಿತವ್ಯಯಕ್ಕಾಗಿ ಮಹತ್ವದ ಸಂಕಲ್ಪವನ್ನು ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೆ ಹಸಿರುಉಡುಗೊರೆ
ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಸಕ ಜಗದೀಶ ಗುಡಗುಂಟಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ 50 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲು ಒಂದು ಕೋಟಿ ರೂ.ಗೂ ಅಧಿಕ ಹಣ ಮೀಸಲಿಟ್ಟಿದ್ದಾರೆ. ಜೊತೆಗೆ ಇಂಧನ ಮಿತವ್ಯಯಕ್ಕೆ ಉತ್ತೇಜನ ನೀಡಲು 100 ಸೈಕಲ್‌ಗಳನ್ನು ಉಚಿತವಾಗಿ ವಿತರಿಸಲಿದ್ದಾರೆ. ಈ ಎರಡೂ ಯೋಜನೆಗಳು ಸಂಪೂರ್ಣವಾಗಿ ಅವರ ಸ್ವಂತ ಹಣದಿಂದ ಜಾರಿಯಾಗಲಿವೆ.
ಉದ್ಯಮಿಯಾಗುವವರು ಜನಪ್ರತಿನಿಧಿಯಾಗಿರುವ ಉದಾರಹಣೆ ಅನೇಕ, ಉದ್ಯಮಿಯಾಗಿ ಸಮಾಜ ಸೇವೆಯನ್ನು ಮುಂದುವರೆಸುವವರು ಇದ್ದಾರೆ, ಆದರೆ ಉದ್ಯಮಿ, ಸಮಾಜ ಸೇವೆ, ಜನಪ್ರತಿನಿಧಿ ಹೀಗೆ ಮೂರು ದೋಣಿಗಳಲ್ಲಿ ಪಯಣಿಸುತ್ತಾ ಆಯಾ ಕ್ಷೇತ್ರಕ್ಕೆ ಅಷ್ಟೇ ಶ್ರದ್ಧೆಯ ನ್ಯಾಯ ಒದಗಿಸುವ ನಾಡೋಜ ಜಗದೀಶ ಗುಡಗುಂಟಿ ಅವರ ಮನದಲ್ಲಿ ಸಮಾಜ ಸೇವಕ ಸದಾ ಜಾಗೃತ. ಪರಿಣಾಮವಾಗಿಯೇ ಆ.15 ರಂದು ಜಾರಿಯಾಗುತ್ತಿರುವ ನವ ಯೋಜನೆಗಳು.
ಕ್ಷೇತ್ರವನ್ನು ಪರಿಸರ ಸ್ನೇಹಿ ಹಾಗೂ ಹಸಿರು ವಾತಾವರಣ ಹೊಂದಿದ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಸಂಕಲ್ಪದೊಂದಿಗೆ ಶಾಸಕ ಜಗದೀಶ್ ಗುಡಗುಂಟಿ ಅವರು ಯುರೋಪಿನ ದೇಶಗಳಲ್ಲಿರುವ ಪರಿಸರ ಕಾಳಜಿ, ಸ್ವಚ್ಛತೆ ಮತ್ತು ಸುಸಜ್ಜಿತ ನಗರ ವ್ಯವಸ್ಥೆಯನ್ನು ಜಮಖಂಡಿ ಕ್ಷೇತ್ರದಲ್ಲೂ ಅಳವಡಿಸಲು ಮಹೋನ್ನತ ಹೆಜ್ಜೆ ಇರಿಸಲು ಮುಂದಾಗಿದ್ದಾರೆ.
ಪಂಚ ಸಹಸ್ರ ಸಸಿ ಬೆಳೆಸುವ ಸಂಕಲ್ಪ
ನಗರದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು 50 ಸಾವಿರ ಗಿಡಗಳನ್ನು ವಿವಿಧ ಪ್ರದೇಶಗಳಲ್ಲಿ ನೆಡಲಾಗುವುದು. ಗಿಡಗಳನ್ನು ನೆಡುವುದಷ್ಟೇ ಅಲ್ಲದೆ, ಪ್ರಾಣಿಗಳಿಂದ ರಕ್ಷಿಸಿಸಲು ಸುತ್ತಲೂ ತಂತಿ ಕವಚ ಹಾಕಿ ಅವುಗಳನ್ನು ಎರಡು ವರ್ಷಗಳ ಕಾಲ ನೀರು, ಗೊಬ್ಬರ ಹಾಕಿ ರಕ್ಷಣೆ ಮಾಡುವುದು ತಮ್ಮ ಸ್ವಂತ ವೆಚ್ಚದಲ್ಲಿ ಮಾಡಿಸುವುದಾಗಿ ಅವರು ಘೋಷಿಸಿದ್ದಾರೆ.
ನಗರದ ಬಹುತೇಕ ಗಟಾರಗಳು ತೆರೆದಿರುವ ಕಾರಣ ಅವುಗಳಲ್ಲಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಬಿದ್ದು ಆಗಾಗ ಬ್ಲಾಕ್ ಆಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಮಳೆನೀರು ಸರಾಗವಾಗಿ ಹರಿಯದೆ ರಸ್ತೆಗಳ ಮೇಲೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಟಾರಗಳ ಸುಧಾರಣೆ ಹಾಗೂ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಗುಡಗುಂಟಿ ಮುಂದಾಗಿದ್ದಾರೆ.
ಇಂಧನ ಮಿತವ್ಯಯಕ್ಕೆ ಅನುಪಮ ಹೆಜ್ಜೆ
ಇಂಧನ ಉಳಿತಾಯ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಸೈಕಲ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ. ಹತ್ತಿರದ ಕೆಲಸಗಳಿಗೆ ಸಾಧ್ಯವಾದಷ್ಟು ಸೈಕಲ್ ಬಳಸುವಂತೆ ಕ್ಷೇತ್ರದ ಜನತೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಅವರು ಕರೆ ನೀಡಿದ್ದಾರೆ. ವಿಶೇಷವಾಗಿ ಕಚೇರಿಯಿಂದ ಮನೆಗೆ ಮತ್ತು ಮನೆಯಿಂದ ಕಚೇರಿಗೆ ಸೈಕಲ್‌ನಲ್ಲಿ ಸಂಚರಿಸುವ ಅಭ್ಯಾಸ ಬೆಳೆಸುವಂತೆ ಮನವಿ ಮಾಡಿದ್ದಾರೆ.
ಜನರೇ ನನ್ನ ಆರಾಧ್ಯ ದೈವ....
ನಾನು ಜನರನ್ನೇ ನನ್ನ ಆರಾಧ್ಯ ದೈವವಾಗಿಸಿಕೊಂಡಿರುವೆ, ಉದ್ಯಮಿ, ಸಮಾಜ ಸೇವಕ, ರಾಜಕಾರಣಿ, ಶಾಸಕ ಹಾಗೂ ನಾಡೋಜದಂತಹ ಕೀರ್ತಿಗೆ ಪಾತ್ರರಾಗಲು ಜನರ ಆಶೀರ್ವಾದವೇ, ಅವರ ಶ್ರೀರಕ್ಷೆಯೇ ಮೂಲ ಕಾರಣ, ಅವರ ಸೇವೆ ಮಾಡುವ ಸೌಭಾಗ್ಯವೇ ನನಗೆ ಆನಂದದ ಅನುಭೂತಿ, ಪ್ರತಿ ಕ್ಷಣ ಜನರ ಸೇವೆ ನಾನು ಮೀಸಲಿರಿಸಬೇಕು, ಅಷ್ಟು ಶಕ್ತಿ ಭಗವಂತ ನನಗೆ ಕರುಣಿಸಲಿ, ನಾವು ಬದಕುಲು ಪರಿಸರವೇ ಆಧಾರ, ಹೀಗಾಗಿ ಪರಿಸರ ರಕ್ಷಣೆ ನಮಗೆ ಆದ್ಯವಾಗಬೇಕು, ಈ ನಿಟ್ಟಿನಲ್ಲಿ ಈ ಅಳಿಲು ಸೇವೆಗೆ ಮುಂದಾಗಿರುವೆ.
- ಜಗದೀಶ ಗುಡಗುಂಟಿ ಶಾಸಕರು ಜಮಖಂಡಿ