Loading...

ಡಿ.ಕೆ. ಸಂಪುಟ ವಿಸ್ತರಣೆ ಕುತೂಹಲ:ವಿಜಯಪುರದ ರಾಜಕೀಯ ಲೆಕ್ಕಾಚಾರ ಬದಲಾಗುತ್ತದೆಯೇ? ಯಶವಂತರಾಯಗೌಡ–ನಾಡಗೌಡ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ

Suddi Mitra Editor

July 12, 2026 • 12:37 PM

ಡಿ.ಕೆ. ಸಂಪುಟ ವಿಸ್ತರಣೆ ಕುತೂಹಲ:ವಿಜಯಪುರದ ರಾಜಕೀಯ ಲೆಕ್ಕಾಚಾರ ಬದಲಾಗುತ್ತದೆಯೇ? ಯಶವಂತರಾಯಗೌಡ–ನಾಡಗೌಡ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ

ಅಪ್ಪು ಪೋತರಾಜ 

ಸಂಪುಟ ವಿಸ್ತರಣೆ ಕಸರತ್ತು-5

ವಿಜಯಪುರ : ಕನಕಪುರ ಬಂಡೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ನೂತನ ಸಚಿವ ಸಂಪುಟದಲ್ಲಿ ಪ್ರಥಮ ಹಂತದಲ್ಲಿಯೇ ವಿಜಯಪುರದ ಡಾ.ಎಂ.ಬಿ. ಪಾಟೀಲ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಅವಧಿಯಂತೆ ಇನ್ನೊಂದು ಸಚಿವ ಸ್ಥಾನ ವಿಜಯಪುರಕ್ಕೆ ಒಲಿಯಲಿದೆಯೇ ಎಂಬುದು ಜಿಲ್ಲೆಯ ಜನತೆಯಲ್ಲಿ ಕುತೂಹಲ‌ ಕೆರಳಿಸಿದೆ. ಸಚಿವರನ್ನಾಗಿ ಮಾಡುವೆ ಎಂಬ ಮಾತು ಹೈಕಮಾಂಡ್‌ನಿಂದಲೇ ದೊರಕಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದೂ ಈಗಲೂ ಅದೇ ಬದ್ಧತೆಯ ಹೇಳಿಕೆಯೊಂದಿಗೆ ಹೈಕಮಾಂಡ್ ಅಂಗಳಕ್ಕೆ ಲಾಬಿ ನಡೆಸದೇ `ನಿಮ್ಮ ಮಾತು ಉಳಿಸಿಕೊಳ್ಳಿ' ಎಂಬ ಏಕೈಕ ಸೂತ್ರದೊಡನೆ ಮನವೊಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ತ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡರು ಸಹ ಇದೇ ಸೂತ್ರದ ಅಡಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಅವಿರತವಾಗಿ ಮುಂದುವರೆಸಿದ್ದಾರೆ. ಕಳೆದ ಬಾರಿ ಎಪಿಎಂಸಿ ಸಚಿವರಾಗಿದ್ದ ಶಿವಾನಂದ ಪಾಟೀಲರು ಸಹ `ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಲಾಬಿ ಮಾಡುವ ಅವಶ್ಯಕತೆಯೂ ಇಲ್ಲ ಎಂದಿದ್ದರೂ ಸಹ ಸಿನಿಯಾರಿಟಿ ಆಧರಿಸಿ ಸಚಿವ ಸ್ಥಾನ ಮತ್ತೊಮ್ಮೆ ಅವರ ಮನೆ ಬಾಗಿಲಿಗೆ ಬಂದರೂ ಅಚ್ಚರಿಪಡಬೇಕಿಲ್ಲ. ಆದರೆ ಮೇಲ್ನೋಟಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ನಡುವೆಯೇ ಮಿನಿಸ್ಟರ್‌ಗಿರಿಯ ಪೈಪೋಟಿ ಪ್ರಬಲವಾಗಿ ನಡೆದಿದೆ. ಆಯಾ ಮತಕ್ಷೇತ್ರದ ಕಾರ್ಯಕರ್ತರು ಬೆಂಗಳೂರಿಗೆ ತಂಡೋಪತಂಡವಾಗಿ ಭೇಟಿ ನೀಡಿ ಮುಖ್ಯಮಂತ್ರಿ, ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಕಸರತ್ತು ಮುಂದುವರೆಸಿದ್ದಾರೆ.

ಒಲಿಯಲಿದೆಯೇ ಸಚಿವಗಿರಿ?

ಈ ಹಿಂದೆ ಚುನಾವಣೆ ನಡೆದ ವೇಳೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡುವ ಭರವಸೆಯೂ ದೊರಕಿತ್ತು. ಇದೇ ಮಾತು ಸಹ ನಾಡಗೌಡರಿಗೂ ಅನ್ವಯವಾಗುತ್ತದೆ. ಇಂಡಿ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಇಲ್ಲಿಯವರೆಗೂ ಆ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರಕಿಲ್ಲ. ಇನ್ನೂ ಸಿನಿಯಾರಿಟಿ ಆಧರಿಸಿಯೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಸಚಿವ ಸ್ಥಾನಕ್ಕೆ ಫಿಟ್, ಭೀಮಾಂಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮರುಜೀವ, ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಹೀಗೆ ದೊಡ್ಡಮಟ್ಟದ ಅಭಿವೃದ್ಧಿ ಪ್ಲಸ್ ಫಾಯಿಂಟ್ ಯಶವಂತರಾಯಗೌಡ ಪಾಟೀಲರ ಸಾಧನೆಯ ಬತ್ತಳಿಕೆಯಲ್ಲಿದೆ. ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸ್ವೀಕರಿಸಿ ನಂತರ ಸಚಿವರನ್ನಾಗಿ ಮಾಡೊಣ ಎಂದು ಆರಂಭದಲ್ಲಿಯೇ ಹೈಕಮಾಂಡ್ ಯಶವಂತರಾಯಗೌಡ ಪಾಟೀಲರಿಗೆ ಹೇಳಿತ್ತು, ಆಗ ಗೌಡರು ನನಗೆ ಸಚಿವ ಸ್ಥಾನದ ಮಾತು ನೀಡಿದ್ದೀರಿ, ಅದನ್ನು ಮುಂದಿನ ದಿನಗಳಲ್ಲಿ ನಡೆಸಿಕೊಡಿ, ಆ ನಿಗಮ ಸ್ಥಾನ ನನ್ನ ಬದಲು ಇನ್ನೊಬ್ಬರಿಗೆ ನೀಡಿ ಎಂದು ಅವಕಾಶವನ್ನು ನಯವಾಗಿ ನಿರಾಕರಿಸಿದ್ದರು. ಆಗಿನ ನಡೆ ಸಹ ಹೈಕಮಾಂಡ್‌ಗೂ ಮೆಚ್ಚುಗೆಗೆ ವ್ಯಕ್ತವಾಗಿತ್ತು, ಇದು ಸಹ ಯಶವಂತರಾಯಗೌಡರಿಗೆ ಸಚಿವಗಿರಿ ದೊರಕಿಸುವಲ್ಲಿ ಪ್ಲಸ್ ಫಾಯಿಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಸಹ ಸಚಿವ ಸ್ಥಾನದ ಪ್ರಬಲ ರೇಸ್‌ನಲ್ಲಿರುವ ಶಾಸಕ. ಹಿರಿಯ ಹಾಗೂ ಅನುಭವಿ ಶಾಸಕರು ಹೌದು, ಈ ಹಿಂದೆ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ. ಸಾತ್ವಿಕತನ, ಎಲ್ಲರಿಗೂ ಗೌರವ ಕೊಟ್ಟು ಮಾತನಾಡುವ ಸ್ವಭಾವ, ಸರಳತೆ ಹಾಗೂ ಕ್ಲೀನ್ ಇಮೇಜ್ ಅವರನ್ನು ಸಚಿವ ಸ್ಥಾನಕ್ಕೆ ಹತ್ತಿರವಾಗಿಸಿವೆ. ವಿಧಾನಸಭೆ ಅಧಿವೇಶನ ವೇಳೆ ಸಭಾಪತಿ, ಉಪಸಭಾಪತಿಗಳು ಇಲ್ಲದ ವೇಳೆ ಅಧ್ಯಕ್ಷ ಸ್ಥಾನದಲ್ಲಿ ಆಸೀನರಾಗುವ ಪ್ಯಾನೆಲ್‌ನಲ್ಲಿದ್ದ ನಾಡಗೌಡರು ಅಧಿವೇಶನವನ್ನು ಅಷ್ಟೇ ಸಮಚಿತ್ತದಿಂದ ನಿಭಾಯಿಸಿದ್ದುಂಟು, ನವದೆಹಲಿ ವಿಶೇಷ ಪ್ರತಿನಿಧಿ, ಆಡಳಿತ ಪಕ್ಷದ ಮುಖ್ಯ ಸಚೇತಕ ಹೀಗೆ ಸಂಸದೀಯ ವ್ಯವಹಾರಗಳಲ್ಲಿ ಪಾರಂಗತರಾಗಿರುವ ನಾಡಗೌಡರು ರಾಜ್ಯದ ಹಿರಿಯ ರಾಜಕಾರಣಿಗಳ ಸಾಲಿಗೆ ಸೇರಿದವರು, ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಜೊತೆ ಉತ್ತಮ ಸ್ನೇಹ, ಅವರೊಂದಿಗೆ ಪ್ರಥಮ ಬಾರಿಗೆ ಸಚಿವರಾಗಿದ್ದ ಅವರ ಈ ಒಡನಾಟ ಸಹ ಸಚಿವ ಸ್ಥಾನ ದೊರಕಿಸುವಲ್ಲಿ ನೆರವಾದರೆ ಅಚ್ಚರಿಪಡಬೇಕಿಲ್ಲ.

- Advertisement -