Loading...

ನನ್ನನ್ನು ಜೈಲಿಗೆ ಕಳುಹಿಸುವ ಸಂಚು; ಬಿಡದಿ ಟೌನಶಿಪ್‌ಗೆ ಕುಮಾರಣ್ಣನೇ ಮುನ್ನುಡಿ ಬರೆದವರು, ನಾವು ಮುಂದುವರಿಸುತ್ತಿದ್ದೇವೆ" – ಡಿಕೆಶಿ ಗುಡುಗು

Suddi Mitra Editor

July 15, 2026 • 09:47 AM

ನನ್ನನ್ನು ಜೈಲಿಗೆ ಕಳುಹಿಸುವ ಸಂಚು; ಬಿಡದಿ ಟೌನಶಿಪ್‌ಗೆ ಕುಮಾರಣ್ಣನೇ ಮುನ್ನುಡಿ ಬರೆದವರು, ನಾವು ಮುಂದುವರಿಸುತ್ತಿದ್ದೇವೆ" – ಡಿಕೆಶಿ ಗುಡುಗು

ಬೆಂಗಳೂರು, ಜು.15: ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆ ನನ್ನ ಕನಸಿನ ಯೋಜನೆಯೂ ಅಲ್ಲ, ಅದರ ಪಿತಾಮಹನಾಗುವ ಉದ್ದೇಶವೂ ನನಗಿಲ್ಲ. ಇದು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆರಂಭವಾಗಿ ವಿವಿಧ ಹಂತಗಳಲ್ಲಿ ಮುಂದುವರಿದಿರುವ ಯೋಜನೆಯಾಗಿದ್ದು, ರೈತರು ಸ್ವಯಂ ಇಚ್ಛೆಯಿಂದ ಭೂಮಿ ನೀಡಿದರೆ ಮಾತ್ರ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬರೆದ ಪತ್ರಕ್ಕೆ ಈಗಾಗಲೇ ಉತ್ತರ ನೀಡಿರುವುದಾಗಿ ತಿಳಿಸಿದರು.

"ನಿನ್ನೆ ನಡೆದ ಘಟನೆ ನೋವುಂಟು ಮಾಡಿದೆ. ರಾಜಕೀಯ ಪ್ರೇರಿತವಾಗಿ ರೈತರನ್ನು ತಪ್ಪು ದಾರಿಗೆಳೆದು ಹೋರಾಟ ನಡೆಸುವುದು ಸರಿಯಲ್ಲ. ನಾನು ರೈತನ ಮಗ. ಭೂಮಿ ಹಾಗೂ ರೈತರ ಬದುಕಿನ ಮೌಲ್ಯ ನನಗೆ ಚೆನ್ನಾಗಿ ಗೊತ್ತಿದೆ. ರೈತರ ಹಿತಕ್ಕೆ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.

ನಾನು ಮುಖ್ಯಮಂತ್ರಿ ಆಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಹಲವು ರೀತಿಯ ಸಂಚುಗಳು ನಡೆದಿವೆ. ಅದರಲ್ಲಿ ಕುಮಾರಸ್ವಾಮಿ ಅವರ ಪ್ರಯತ್ನವೂ ಇದೆ ಎನ್ನುವುದು ನನಗೆ ಗೊತ್ತಿದೆ. ನಾನು ಜೈಲಿನಲ್ಲಿದ್ದಾಗ ಅವರು ನನ್ನನ್ನು ನೋಡಲು ಬಂದಿದ್ದರು. ಈಗ ಜೈಲಿಗೆ ಕಳುಹಿಸಲು ಶ್ರಮಿಸುತ್ತಿದ್ದಾರೆ. ಗೌರವಾನ್ವಿತ ಮಾಜಿ. ಪ್ರಧಾನಿ ದೇವೆಗೌಡರಿಗೆ ಅವರ ಸುಪತ್ರ ಕುಮಾರಣ್ಣನಿಗೆ ಅವರ ಆಶೆಗಳು ಈಡೇರಲಿ ಎಂದು ಹಾರೈಸುತ್ತೇನೆ" ಎಂದು ವ್ಯಂಗ್ಯವಾಡಿದರು.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ಅವರು, "ಈ ಯೋಜನೆಯ ಅಡಿಪಾಯವನ್ನು ನಾನು ಹಾಕಿಲ್ಲ. 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭವಾಗಿದ್ದವು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಗ್ಲೋಬಲ್ ಟೆಂಡರ್ ಕರೆಯಲಾಯಿತು. ಆಗ ಆರ್. ಅಶೋಕ್ ಕಂದಾಯ ಸಚಿವರಾಗಿದ್ದರು. ನಂತರ ರೆಡ್‌ ಝೋನ್ ಘೋಷಣೆ, ಪರಿಹಾರ ಆದೇಶ ಸೇರಿದಂತೆ ಹಲವು ಕ್ರಮಗಳು ಹಿಂದಿನ ಸರ್ಕಾರಗಳಲ್ಲೇ ನಡೆದಿವೆ" ಎಂದು ವಿವರಿಸಿದರು.

"ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಎಕರೆಗೆ ₹25 ಲಕ್ಷ ಪರಿಹಾರ ನೀಡುವ ಆದೇಶ ಹೊರಡಿಸಿದ್ದರು. ಖಾಸಗಿ ಡೆವಲಪರ್‌ಗಳಿಂದ ₹300 ಕೋಟಿ ಠೇವಣಿ ಪಡೆಯುವ ಕ್ರಮವನ್ನೂ ಕೈಗೊಂಡಿದ್ದರು. ಈಗ ಆ ಹಿಂದಿನ ಆದೇಶಗಳ ಪ್ರಕಾರವೇ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ನಾನು ಹೊಸದಾಗಿ ಯಾವುದೇ ಆದೇಶ ಮಾಡಿಲ್ಲ, ಮಾಡುವ ಅಧಿಕಾರವೂ ಇಲ್ಲ" ಎಂದು ಹೇಳಿದರು.

"ಇದು ಯಾವುದೇ ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ ನೀಡಿರುವ ಯೋಜನೆಯಲ್ಲ. ರೈತರ ಮೇಲೆ ಯಾವುದೇ ಒತ್ತಡವಿಲ್ಲ. ಭೂಮಿ ನೀಡಲು ಇಚ್ಛಿಸುವವರು ನೀಡಬಹುದು, ಇಚ್ಛಿಸದವರು ನೀಡಬೇಕಾದ ಅಗತ್ಯವೇ ಇಲ್ಲ. ಅಂತಿಮ ತೀರ್ಮಾನ ರೈತರದ್ದೇ ಆಗಿರುತ್ತದೆ" ಎಂದು ಸ್ಪಷ್ಟಪಡಿಸಿದರು.

ರೈತರ ಸಮಸ್ಯೆಗಳ ಕುರಿತು ವರದಿ ಬಂದ ಬಳಿಕ ಸಣ್ಣ ಸಮಿತಿ ರಚಿಸಿ, ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, "ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರು ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ರಾಜಕೀಯ ಪ್ರಚೋದನೆಗೆ ಒಳಗಾಗದೆ ತಮ್ಮ ಬದುಕಿನ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ಮನವಿ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, "ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಹೆಸರನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ. ಆದರೆ ಅವರು ಪತ್ರ ಬರೆದಿದ್ದರಿಂದ ಉತ್ತರಿಸುವುದು ನನ್ನ ಕರ್ತವ್ಯವಾಗಿತ್ತು" ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ರಾಜಕೀಯ ಸಲಹೆಗಾರ ಬಿ.ಸಿ. ಚಂದ್ರಶೇಖರ್ ಉಪಸ್ಥಿತರಿದ್ದರು.

- Advertisement -