Loading...

ರಾಜಿನಾಮೆ ನೀಡಿದ ಇಂಡಿ ಶಾಸಕರ ಮನವೊಲಿಸುವಲ್ಲಿ ಹೈಕಮಾಂಡ್ `ಯಶ' ಸ್ವಿ

Suddi Mitra Editor

August 05, 2026 • 12:24 PM

ರಾಜಿನಾಮೆ ನೀಡಿದ ಇಂಡಿ ಶಾಸಕರ ಮನವೊಲಿಸುವಲ್ಲಿ  ಹೈಕಮಾಂಡ್  `ಯಶ' ಸ್ವಿ

ಬೆಂಗಳೂರು : ಸಚಿವರನ್ನಾಗಿ ಮಾಡುವ ಭರವಸೆ ಕೊನೆ ಕ್ಷಣದಲ್ಲಿ ಈಡೇರಿಕೆಯಾಗದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜಿನಾಮೆಯನ್ನು ಪ್ರಕಟಿಸಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಮನವೊಲಿಸುವಲ್ಲಿ ಕೊನೆಗೂ ಹೈಕಮಾಂಡ್ ಯಶಸ್ವಿಯಾಗಿದೆ.

ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸ್ವತ: ಇಂಡಿ ಶಾಸಕರನ್ನು ಭೇಟಿ ಮಾಡಿ ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಶಾಸಕ ಯಶವಂತರಾಯಗೌಡರು ಸಹ ಇಂಡಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಸೂಕ್ತ ಅವಕಾಶ ನೀಡುವ ಭರವಸೆಯನ್ನು ನೀಡಿದ್ದಾರೆ, ಆದರೆ ಅಲ್ಲಿಯೂ ಸಹ ತಮ್ಮ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರವನ್ನು ತಿಳಿಸದ ಯಶವಂತರಾಯಗೌಡರು ಕ್ಷೇತ್ರ ಜನತೆಯ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ ಇರಿಸುವೆ ಎಂದು ಹೇಳಿದ್ದರು. ಈಗ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಶಾಸಕ ಸ್ಥಾನಕ್ಕೆ ನೀಡಿರುವ ರಾಜಿನಾಮೆಯನ್ನು ವಾಪಾಸ್ಸು ಪಡೆದಿದ್ದಾರೆ.

ಆ ಮೂಲಕ ಪ್ರಮಾಣ ವಚನದ ದಿನವೇ ಮೊಳಗಿದ ಅಪಸ್ವರದ ಟ್ರಬಲ್‌ನ್ನು ನಿವಾರಣೆ ಮಾಡುವಲ್ಲಿ ಹೈಕಮಾಂಡ್ ಮೊದಲ ಹಂತದಲ್ಲಿ ಯಶಸ್ವಿಯೂ ಆಗಿದೆ. 

ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನನ್ನ ಜೊತೆ ಸುದೀರ್ಘವಾಗಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಉತ್ತಮ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ, ಆಗಲೂ ಸಹ ನಾನು ಇಂಡಿ ಜನತೆಯ ಸಲಹೆ ಪಡೆದು ಮುಂದಿನ ನಿರ್ಧಾರ ತಿಳಿಸುವೆ ಎಂದು ಹೇಳಿದ್ದೆ, ಈಗ ಇಂಡಿ ಜನತೆಯ ಭಾವನೆಯಂತೆ ನನ್ನ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದು, ರಾಜಿನಾಮೆ ವಾಪಾಸ್ಸು ಪಡೆಯುವೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಘೋಷಿಸಿದ್ದಾರೆ. 

ನಾನು ಯಾವಾಗಲೂ ಕಾಂಗ್ರೆಸ್ ಪಕ್ಷವನ್ನೇ ನನ್ನ ಪಕ್ಷವೆಂದು ಭಾವಿಸಿ ಕೆಲಸ ಮಾಡಿದ್ದೇನೆ. ೨೦೨೩ರಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ, ಪಕ್ಷದ ನಾಯಕರು ನನಗೆ ಜೋತೆಗೆ ಮಾತನಾಡಿ ಎರಡುವರೆ ವರ್ಷಗಳ ನಂತರ ನನ್ನನ್ನು ಸಚಿವನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು, ಸಂಪುಟ ವಿಸ್ತರಣೆಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ ಅಂತಿಮ ಪ್ರಮಾಣ ವಚನಕ್ಕೆ ಕೆಲವೇ ಗಂಟೆಗಳ ಮುನ್ನ ನನ್ನ ಹೆಸರು ಪಟ್ಟಿಯಿಂದ ಮಾಯವಾಯಿತು. ಇದರಿಂದ ನನಗೆ ಅತೀವ ದುಃಖವಾಯಿತು ಎಂದರು. 

ನಮ್ಮ ಪಕ್ಷದ ನನ್ನ ವೈರಿಗಳ ಇವತ್ತು ನನಗೆ ಸಚಿವ ಸ್ಥಾನ ತಪ್ಪಿಸಲು ಸಫಲರಾದರು. ಅವರಿಗೆ ಒಳ್ಳೆಯ ದಾಗಲಿ. ನಾವು ಪ್ರಾಮಾಣಿಕವಾಗಿ ರಾಜಕಾರಣ ಮಾಡೋಣ. ಆದರೆ ತಾವು ಪಕ್ಷದ ಮೇಲೆ ಕೋಪಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಭರವಸೆ ನೀಡಿದವರೇ ಆ ಭರವಸೆಯನ್ನು ಈಡೇರಿಸದಿದ್ದುದು ನನಗೆ ಬೇಸರ ತಂದಿತು. ಈ ಕಾರಣಕ್ಕಾಗಿಯೇ ನಾನು ರಾಜೀನಾಮೆ ನೀಡಿದ್ದೆ ಎಂದರು.  

ನನಗೆ ಮೊದಲ ಆದ್ಯತೆ ಯಾವಾಗಲೂ ನನ್ನ ಕ್ಷೇತ್ರದ ಜನರ ಒಳಿತು. ನಾನೆಂದೂ ಅಧಿಕಾರದ ಆಸೆ ಇಟ್ಟುಕೊಂಡಿರಲಿಲ್ಲ. ಆದರೆ ಭರವಸೆ ಮುರಿದದ್ದಕ್ಕೆ ನನ್ನ ಅಸಮಾಧಾನ ವ್ಯಕ್ತಪಡಿಸಿದ್ದೆ. ನಿಮ್ಮೆಲ್ಲರ ಒತ್ತಾಸೆಯ ಮೇರೆಗೆ ನಾನು ನನ್ನ ರಾಜೀನಾಮೆಯನ್ನು ಹಿಂಪಡೆಯುತ್ತಿದ್ದೇನೆ" ಎಂದು ಘೋಷಿಸಿ, "ನಾನು ನಿಮ್ಮ ಶಾಸಕನಾಗಿದ್ದೇನೆ, ಇನ್ನೂ ಮುಂದೆಯೂ ಇರುತ್ತೇನೆ ಎಂದು ಹೇಳಿದ್ದಾರೆ.

- Advertisement -