ಬರ–ಕಸ್ತೂರಿರಂಗನ್ ಸವಾಲು: ರೈತರ ಪರ ದನಿಯಾಗಲಿದೆಯೇ ವಿಶೇಷ ಅಧಿವೇಶನ ?
ರೈತರ ನೋವಿಗೆ ದನಿಯಾಗುವುದೇ ಸದನ?
ಅಪ್ಪು ಪೋತರಾಜ್
ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಭೀಕರ ಬರ ತಾಂಡವವಾಡುತ್ತಿದ್ದರೆ, ಅತ್ತ ಪಶ್ಚಿಮ ಘಟ್ಟಗಳ ಜಿಲ್ಲೆಗಳ ಜನತೆಯ ಮೇಲೆ ಡಾ.ಕಸ್ತೂರಿ ರಂಗನ್ ವರದಿಯ ತೂಗುಗತ್ತಿ ಝಳಪಸುತ್ತಿದೆ. ಈ ಮಹತ್ವದ ವಿಷಯಗಳ ಮೇಲೆ ಕೇಂದ್ರಿಕರಿಸಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ.
ಹೀಗಾಗಿ ಇಡೀ ರೈತ ಸಮೂಹ, ಪಶ್ಚಿಮ ಘಟ್ಟದ ಜನತೆ ತಮ್ಮ ನೋವಿಗೆ ಈ ಸದನ ದನಿಯಾಗುವುದೇ ಎಂದು ಕಾಯುವಂತಾಗಿದೆ. ಅಥವಾ ಈ ಸದನವೂ ಕಳೆದ ಬಾರಿಯಂತೆ ವ್ಯರ್ಥವಾಗಿ ಹಾಳಾಗಿ ಹೋಗುವುದೇ, ಕೇವಲ ರಾಜಕೀಯ ಟೀಕೆ-ಪ್ರತಿಟೀಕೆಗೆ `ಮುಳುಗಿ' ಹೋಗುವುದೇ ಎಂಬುದು ಆತಂಕವೂ ಮೂಡಿಸಿದೆ.
ರಾಜ್ಯದದಲ್ಲಿ ೧೨೪ ತಾಲೂಕುಗಳು ಬರಪೀಡಿತವಾಗಿವೆ, ವಾಸ್ತವವಾಗಿ ಇನ್ನೂ ನೂರಾರು ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿ ಘೋಷಣೆಯಾಗಬೇಕಾಗಿರುವುದು ಬಾಕಿ ಇದೆ, ಒಂದರ್ಥದಲ್ಲಿ `ಬರ' ಇಡೀ ರಾಜ್ಯಕ್ಕೂ ವ್ಯಾಪಿಸಿದೆ. ಹೀಗಾಗಿ ಸಾಲಮನ್ನಾ ಮೊದಲಾದ ಮಹೋನ್ನತ ನಿರ್ಧಾರಗಳನ್ನು ಕೈಗೊಳ್ಳಲು ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಳ ಅಧಿವೇಶನವೇ ವೇದಿಕೆಯಾಗಲಿದೆ.
ಈ ಹಿಂದೆ ನಡೆದ ಅಧಿವೇಶನದ ರಾಜಕೀಯ ಗದ್ದಲ ಹಾಗೂ ರಾಜ್ಯದ ಪ್ರಸ್ತುತ ವಾಸ್ತವಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಈ ವಿಶೇಷ ಅಧಿವೇಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಸಾಮಾನ್ಯ ಅಧಿವೇಶನಕ್ಕಿಂತ ವಿಭಿನ್ನವಾಗಿ ಈ ವಿಶೇಷ ಅಧಿವೇಶನದಲ್ಲಿ ರಾಜ್ಯದ ಎರಡು ಪ್ರಮುಖ ಸವಾಲುಗಳಾದ ಬರ ಪರಿಸ್ಥಿತಿ ಮತ್ತು ಕಸ್ತೂರಿರಂಗನ್ ವರದಿ ಕೇಂದ್ರಬಿAದುವಾಗುವ ನಿರೀಕ್ಷೆಯಿದೆ.
ಮುಂಗಾರು ಅಭಾವದಿಂದಾಗಿ ರಾಜ್ಯದ ವಿವಿಧೆಡೆ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ವಿದ್ಯುತ್ ಅಭಾವ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೃಷಿ ವಲಯ ಎದುರಿಸುತ್ತಿರುವ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆಯೇ ಎಂಬುದು ಕಾದು ನೋಡಬೇಕಿದೆ.
ಡಾ.ರಂಗನ್ ವರದಿಯ ತೂಗುಗತ್ತಿ
ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ತಂಡ ನೀಡಿದ ವರದಿಯನ್ನಾಧರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಆತಂಕ ವ್ಯಕ್ತವಾಗಿದೆ. ವರದಿಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ರಾಜ್ಯದ ಸ್ಪಷ್ಟ ನಿಲುವನ್ನು ನಿರ್ಣಯದ ಮೂಲಕ ಕೇಂದ್ರಕ್ಕೆ ತಲುಪಿಸುವುದು ಈ ಅಧಿವೇಶನದ ಮುಖ್ಯ ಉದ್ದೇಶವಾಗಿದೆ.
ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ ೨೭ರಂದು ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಸಂಬAಧ ಏಳನೇ ಕರಡು ಅಧಿಸೂಚನೆ ಹೊರಡಿಸಿದೆ. ಕರಡು ಪ್ರಸ್ತಾವನೆಯಡಿ ಕರ್ನಾಟಕದ ೧೦ ಜಿಲ್ಲೆಗಳ ವ್ಯಾಪ್ತಿಯ ೨೦,೬೬೮ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸುವ ಪ್ರಸ್ತಾವವಿದೆ.
ಈ ಪ್ರಸ್ತಾವನೆಯ ಪರಿಣಾಮವಾಗಿ ಮಲೆನಾಡು ಮತ್ತು ಪಶ್ಚಿಮಘಟ್ಟಕ್ಕೆ ಹೊಂದಿಕೊAಡಿರುವ ಪ್ರದೇಶಗಳಲ್ಲಿನ ಕೃಷಿ, ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸ್ಥಳೀಯರ ಜೀವನೋಪಾಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ಪ್ರಮುಖ ಚರ್ಚೆಯ ವಿಷಯವಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ನಿಲುವು ವ್ಯಕ್ತಪಡಿಸಿದೆ.
ಈ ವಿಷಯಗಳ ನಡುವೆ ನೈಸ್, ಬಿಡದರಿ ಮೊದಲಾದ ವಿಷಯಗಳು ಪ್ರತಿಧ್ವನಿಸಿದರೂ ಅಚ್ಚರಿ ಇಲ್ಲ. ಈ ವಿಷಯ ಪ್ರಸ್ತಾಪಿಸಿದರೂ `ರೈತ' ಪರವೇ. ಆದರೆ ವಿನಾಕಾರಣ ರಾಜಕೀಯ ಚರ್ಚೆ, ಪ್ರತಿಷ್ಠೆಗೆ ಸದನದ ಸಮಯ ವ್ಯಯವಾದರೆ ರೈತ ಕುಲಕ್ಕೆ ಅನ್ಯಾಯವಾಗುವುದರಲ್ಲಿ ಎರಡು ಮಾತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.