ಕಾವೇರಿ ನೀರು ಹರಿಸುವ ವಿಚಾರ.... ಗುರು ಬಂಗಾರಪ್ಪ ಅವರಂತೆ ದಿಟ್ಟ ಹೆಜ್ಜೆ ಇರಿಸುತ್ತಾರಾ ಡಿಕೆಶಿ?
ಅಪ್ಪು ಪೋತರಾಜ್
ಬೆಂಗಳೂರು : ಅದು 1991 ರ ಸಮಯ. ಆಗ ಮುಖ್ಯಮಂತ್ರಿಯಾಗಿದ್ದವರು ದಿ.ಎಸ್. ಬಂಗಾರಪ್ಪ. ಆ ವೇಳೆಯೂ ಕಾವೇರಿ ವಿವಾದ ಇದೇ ಸ್ವರೂಪ ಪಡೆದಿತ್ತು. ಆಗ ಬಂಗಾರಪ್ಪ
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ದಿಟ್ಟ ಸುಗ್ರೀವಾಜ್ಞೆ ಹೊರಡಿಸಿದ್ದರು. ಇಂದಿಗೂ ಕಾವೇರಿ ಬಿಕ್ಕಟ್ಟು ಎದುರಾದಾಗಲೆಲ್ಲಾ ರೈತರು ಹಾಗೂ ಹೋರಾಟಗಾರರು ಬಂಗಾರಪ್ಪರ ಆ ದಿಟ್ಟ ನಿರ್ಧಾರವನ್ನು ಉದಾಹರಣೆಯಾಗಿ ನೆನಪಿಸಿಕೊಳ್ಳುತ್ತಾರೆ. ಈಗ ಅವರ ಕಟ್ಟಾ ಶಿಷ್ಯನಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗ ರಾಜ್ಯದ ಮುಖ್ಯಮಂತ್ರಿ. ಹೀಗಾಗಿ ಗುರುವಿನಂತೆ ದಿಟ್ಟ ನಿರ್ಧಾರ ಕೈಗೊಳ್ಳುವರೇ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.
ಇಂದಿಗೂ ಕಾವೇರಿ ಬಿಕ್ಕಟ್ಟು ಎದುರಾದಾಗಲೆಲ್ಲಾ ರೈತರು ಹಾಗೂ ಹೋರಾಟಗಾರರು ದಿ.ಬಂಗಾರಪ್ಪರ ಆ ದಿಟ್ಟ ನಿರ್ಧಾರವನ್ನು ಉದಾಹರಣೆಯಾಗಿ ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಅಧಿಕಾರದಲ್ಲಿ ಅವರ ಶಿಷ್ಯನೇ ಇರುವುದರಿಂದ ರೈತ ವಲಯದಲ್ಲಿ ಹೊಸ ನಿರೀಕ್ಷೆ ಹಾಗೂ ಭರವಸೆ ಮೂಡಿದೆ.
ಮೊದಲನೇ ಹಂತವಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕನ್ನಡಿಗರು ಕೆರಳಿದ್ದು, ಈ ವಿಚಾರವನ್ನು ಚಾಣಾಕ್ಷತನದಿಂದ ನಿಭಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವಿವಾರ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.
ಸರ್ವ ಪಕ್ಷಗಳ ಸಭೆಯ ಮೂಲಕ ಯಾವ ನಿರ್ಧಾರ ಹೊರ ಬೀಳಲಿದೆ, ರವಿವಾರದ ಈ ಮಹತ್ವದ ಸಭೆಯಲ್ಲಿ ಕಾವೇರಿ ಜಲ ಹಂಚಿಕೆಯ ವಿಷಯಕ್ಕೆ ಯಾವ ಸ್ವರೂಪದ ಪರಿಹಾರ ದೊರಕಲಿದೆ ಎಂಬಹದು ಕಾದು ನೋಡಬೇಕಿದೆ.
ಈ ಬಾರಿ ಮೊದಲೇ ಮಳೆ ಕೈ ಕೊಟ್ಟಿದೆ, ಇಂತಹ ವೇಳೆ ನಮ್ಮ ರಾಜ್ಯಕ್ಕೆ ಬಿಟ್ಟು ನೆರೆಯ ರಾಜ್ಯಕ್ಕೆ ನೀರು ಹರಿಸುವುದು ಯಾವ ನ್ಯಾಯ? ಈ ಭಾಗದ ರೈತರು ನೀರಿಲ್ಲದೇ ಪರದಾಡಬಹದು, ಆದರೆ ನೆರೆಯ ರಾಜ್ಯಕ್ಕೆ ನೀರು ಬಿಡಬೇಕು ಎಂಬುದು ಯಾವ ನ್ಯಾಯ ಎಂದು ಕನ್ನಡಪರ ಸಂಘಟನೆಗಳು ವ್ಯಾಪಕ ಪ್ರತಿಭಟನೆಗೆ ಅಣಿಯಾಗಿವೆ.
ಕಾವೇರಿ ಕೊಳ್ಳದ ಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರತಿಭಟನೆಯ ಕಾವು ಸಹ ಜೋರಾಗಿದೆ. ರಸ್ತೆ ತಡೆ, ಖಾಲಿ ಕೊಡಗಳ ಪ್ರದರ್ಶನ ಹೀಗೆ ವಿವಿಧ ಸ್ವರೂಪದಲ್ಲಿ ಹೋರಾಟ ನಡೆಯಲಿದೆ, ಈ ವಿಷಯದಲ್ಲಿ ತೀವ್ರ ಸ್ವರೂಪ ಪಡೆಯುವುದನ್ನು ಅಲ್ಲ ಗಳೆಯುವಂತಿಲ್ಲ.
ಕಾವೇರಿ ನೀರಿನ ವಿಚಾರವಾಗಿ ರವಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿದ್ದು, ಮುಂದೆ ಈ ವಿಚಾರವನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಸಂಸದರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸೋಮಣ್ಣ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಜೊತೆ ಚರ್ಚೆ ಮಾಡಿದ್ದು, ಅವರು ರಾಜ್ಯದ ಹಿತಕ್ಕಾಗಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ನಾಯಕರ ಬದಲು ದೆಹಲಿ ಸರ್ಕಾರವನ್ನು ಭೇಟಿ ಮಾಡಿ ಎಂದು ತಮಿಳುನಾಡು ಸಿಎಂ ವಿಜಯ್ ಅವರಿಗೆ ಡಿಎಂಕೆ ನಾಯಕ ಅನ್ಬುಮಣಿ ಸಲಹೆ ನೀಡಿರುವ ಬಗ್ಗೆ ಕೇಳಿದಾಗ, ಆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಪರಸ್ಪರ ಕಿತ್ತಾಟ ಮಾಡಲು ಇಷ್ಟವಿಲ್ಲ. ನೆಲದ ಕಾನೂನು ಇದೆ. ನಾವು ಪರಸ್ಪರ ಗೌರವಿಸಬೇಕು. ಇಡೀ ದೇಶ ಒಂದಾಗಿ ಕೆಲಸ ಮಾಡಬೇಕು ಎಂದರು.
ಮೇಲ್ಮನವಿ ಸಲ್ಲಿಸುವುದಂತೂ ದಿಟ...
ನವದೆಹಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ
ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಅಡ್ವೊಕೇಟ್ ಜನರಲ್, ಕಾನೂನು ತಜ್ಞರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದ್ದು, ಮೇಲ್ಮನವಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಈಗಾಗಲೇ ಸ್ಟಷ್ಟವಾಗಿ ತಿಳಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಸಿ.ಡಬ್ಲೂ.ಸಿ.ಎ ನೀಡಿರುವ ಆದೇಶದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಸಭೆ ಮಾಡಿದ್ದೇವೆ. ಈ ಬಾರಿ ವರುಣ ಕೃಪೆ ತೋರಿಲ್ಲ. ಈ ಹಿಂದೆ ಸಮಿತಿಯು ಕಾವೇರಿ ನೀರು ಹರಿಸಬೇಕು ಎಂಬ ತಮಿಳುನಾಡಿನ ಮನವಿಯನ್ನು ಎರಡು ಬಾರಿ ತಿರಸ್ಕರಿಸಿತ್ತು. ಈ ಬಾರಿ ನೀರು ಹರಿಸಲು ಸೂಚಿಸಿದೆ. ಈ ಆದೇಶದ ವಿರುದ್ಧ ಮೇಲ್ಮನವಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ” ಎಂದರು.
“ಬೆಂಗಳೂರಿಗೆ ಮರಳಿದ ನಂತರ ವಿರೋಧ ಪಕ್ಷದ ನಾಯಕರ ಜೊತೆಯೂ ಈ ಬಗ್ಗೆ ಚರ್ಚೆ ಮಾಡಲಾಗುವುದು. ಈ ಮಧ್ಯೆ ತಮಿಳುನಾಡು ಸಿಎಂ ನನ್ನ ಜೊತೆ ಚರ್ಚೆ ಮಾಡಲು ಇಂಗಿತ ವ್ಯಕ್ತಪಡಿಸಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ನನ್ನ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾವು ಅವರಿಗೆ ಕೊಡಬೇಕಾದ ಗೌರವ ನೀಡಿ, ಸಭೆಗೆ ಬನ್ನಿ ಎಂದು ಹೇಳಿದ್ದೇನೆ. ನಮ್ಮ ರಾಜ್ಯಕ್ಕೆ ಬರುತ್ತೇವೆ ಎನ್ನುವ ಅತಿಥಿಗಳನ್ನು ಗೌರವದಿಂದ ಸ್ವೀಕಾರ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ಬನ್ನಿ ಎಂದು ಹೇಳಿದ್ದು, ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿದರು.
ನಮ್ಮ ಪರಿಸ್ಥಿತಿ ವೀಕ್ಷಿಸಿ ಎಂದು ತಮಿಳುನಾಡು ಸಿಎಂಗೆ ಆಹ್ವಾನ:
ನಮ್ಮ ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ನೋಡಿ ಎಂದು ಸಿಎಂ ವಿಜಯ್ ಅವರಿಗೆ ನಾವು ಮನವಿ ಮಾಡಿದ್ದೇವೆ. ಅದಕ್ಕೆ ಅಗತ್ಯವಿರುವ ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದೂ ಹೇಳಿದ್ದೇನೆ. ಅವರಿಗೂ ವಾಸ್ತವ ಪರಿಸ್ಥಿತಿ ಅನುಭವ ಆಗಬೇಕು. ಅವರ ತೀರ್ಮಾನ ಏನು ಎಂದು ನೋಡೋಣ ಎಂದು ಸಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.