ಖಾದರ್ ಖಾತೆ ಬದಲು ಮುನಿಯಪ್ಪ ಪಟ್ಟಿಗೆ ಮಣಿದ ಸರ್ಕಾರ
ಅಪ್ಪು ಪೋತರಾಜ
ಬೆಂಗಳೂರು : ವಿಧಾನ ಮಂಡಳ ಅಧಿವೇಶನಕ್ಕೆ ಒಂದು ದಿನ ಬಾಕಿ ಇರುವಾಗಲೇ ಖಾತೆ ಹಂಚಿಕೆ ಜೊತೆಗೆ ಕೆಲವು ಸಚಿವರ ಖಾತೆ ಅದಲು ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ವಿಧಾನ ಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ
ಯು.ಟಿ. ಖಾದರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಾರಥ್ಯ ವಹಿಸಲಾಗಿತ್ತು. ಆರೋಗ್ಯ ಇಲಾಖೆಗೆ ಹೊಸ ಸ್ಪರ್ಶ ನೀಡುವ ಜೊತೆಗೆ ಗುಣಮಟ್ಟದ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಫೈವ್ ಸ್ಟಾರ್ ಹೋಟೆಲ್ ಗಳನ್ನು ಲೆಕ್ಕಿಸದೇ ನೋಟಿಸ್ ನೀಡಲು ಮುಂದಾಗಿದ್ದರು. ಈ ಲಾಬಿಗೆ ಮಣಿದು ಖಾದರ್ ಖಾತೆಯನ್ನು ಬದಲಿಸಲಾಗಿದೆ ಎಂಬ ಗುಸು ಗುಸು ಸಹ ಸದ್ದು ಮಾಡುತ್ತಿದೆ.
ಹೀಗಾಗಿ ಯು.ಟಿ. ಖಾದರ್ ಅವರಿಗೆ ನಗರಾಭಿವೃದ್ಧಿ ಖಾತೆ ವಹಿಸಿ, ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಡಾ.ಯತೀಂದ್ರ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡುವ ಸಾಧ್ಯತೆ ಇದ್ದು, ವೈದ್ಯಕೀಯ ಶಿಕ್ಷಣ ಖಾತೆ ಹೊಂದಿರುವ ಡಾ.ಶರಣಪ್ರಕಾಶ ಪಾಟೀಲರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರಥ್ಯ ನೀಡುವ ಸಾಧ್ಯತೆ ಇದೆ.
ಹಿಂದೆ ಸಿದ್ದರಾಮಯ್ಯಅವರ ಸರ್ಕಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜವಾಬ್ದಾರಿ ನಿರ್ವಹಿಸಿದ್ದ ಮಧುಬಂಗಾರಪ್ಪ ಅವರಿಗೆ ಅದೇ ಜವಾಬ್ದಾರಿ ನೀಡಲಾಗಿದೆ. ಚೆಲುವರಾಯ ಸ್ವಾಮಿ ಅವರಿಗೆ ಕೃಷಿ, ಸಂತೋಷ್‌ಲಾಡ್ ಅವರಿಗೆ-ಕಾರ್ಮಿಕ, ಜಮೀರ್ ಅಹಮದ್ ಖಾನ್ ಅವರಿಗೆ ವಸತಿ, ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಗಣಿ, ಭೂ ವಿಜ್ಞಾನ ಜವಾಬ್ದಾರಿಗಳನ್ನು ಮುಂದುವರಿಸಲಾಗಿದೆ.
ರಾಮಲಿಂಗಾ ರೆಡ್ಡಿಯವರನ್ನು ಜಲ ಸಂಪನೂಲ ಖಾತೆಯಲ್ಲೇ ಮುಂದುವರಿಸಲಾಗಿದೆ. ಆರ್ಥಿಕ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ ಜವಾಬ್ದಾರಿ ವಹಿಸಲಾಗಿದೆ.
*ಮುನಿಯಪ್ಪ ಪಟ್ಟಿಗೆ ಮಣಿದ ಸರ್ಕಾರ*
ಸಮಾಜ ಕಲ್ಯಾಣ ಇಲಾಖೆಯ ಸಾರಥ್ಯ ವಹಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆದಿತ್ತು. ಪಿ.ಎಂ. ನರೇಂದ್ರಸ್ವಾಮಿ, ಕೆ.ಬಸವಂತಪ್ಪ ಸೇರಿದಂತೆ ಅನೇಕರು ಸಮಾಜ ಕಲ್ಯಾಣ
ಮೇಲೆ ಕಣ್ಣಿರಿಸಿದ್ದರು. ಆದರೆ ಶತಾಯ ಗತಾಯ ಸಮಾಜ ಕಲ್ಯಾಣ ಇಲಾಖೆ ಖಾತೆ ಬೇಕು ಎಂದು ಮುನಿಯಪ್ಪ ಪಟ್ಟು ಹಿಡಿದಿದ್ದರು, ಅದಕ್ಕಾಗಿ ನವದೆಹೆಲಿಗೂ ತೆರಳಿ ಹೈಕಮಾಂಡ್ ಮನವೊಲಿಸುವ ಕಾರ್ಯ ಮಾಡಿದ್ದರು, ಅತ್ತ ನರೇಂದ್ರಸ್ವಾಮಿ ಸಹ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಲಾಬಿ ನಡೆಸಿದ್ದರು.
ಈಗ ಬಹುತೇಕ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ಒಲಿದಿದ್ದು, ರಿಜ್ವಾನ್ ಅರ್ಷದ್ ಹೆಗಲಿಗೆ ಆಹಾರ ಇಲಾಖೆಯ ಸಾರಥ್ಯ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಭಾವ್ಯ ಖಾತೆ
ಕೆ.ಎಸ್.ಬಸಂತಪ್ಪ :ಮೀನುಗಾರಿಕೆ, ಬಂದರು
ಲಕ್ಷ್ಮಣ ಸವದಿ : ಸಹಕಾರ, ಡಾ.ಅಜಯ್ ಸಿಂಗ್ : ಅರಣ್ಯ, ಪರಿಸರ ಜೀವಶಾಸ್ತ್ರ
ಬಾಲಕೃಷ್ಣ : ಸಣ್ಣ ನೀರಾವರಿ,
ಬಿ.ನಾಗೇಂದ್ರ :ಪೌರಾಡಳಿತ, ಟಿ.ರಘುಮೂರ್ತಿ : ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಪುಟ್ಟರಂಗ ಶೆಟ್ಟಿ :ಹಿಂದುಳಿದ ವರ್ಗಗಳ ಕಲ್ಯಾಣ,ಪಶುಸಂಗೋಪನೆ ಶಿವರಾಜ್ ತಂಗಡಗಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಾನಂದ ಕಾಶಪ್ಪನವರ್ : ಜವಳಿ, ಕೃಷಿ ಮಾರುಕಟ್ಟೆ, ಕೆ.ಎಂ.ಶಿವಲಿಂಗೇಗೌಡ : ತೋಟಗಾರಿಕೆ, ರೇಷೆ, ಪಿ.ಎಂ.ನರೇಂದ್ರಸ್ವಾಮಿ : ಅಬಕಾರಿ
ರುದ್ರಪ್ಪ ಲಮಾಣಿ :ಯೋಜನೆ ಮತ್ತು ಸಾಂಖ್ಯಿಕ ಜವಾಬ್ದಾರಿ