ಮಿನಿಸ್ಟರಗಿರಿ ಗಿಟ್ಟಿಸಿಕೊಳ್ಳಲು ದೆಹಲಿಯಲ್ಲಯೇ ಆಕಾಂಕ್ಷಿಗಳ `ಠಿಕಾಣಿ' ಯಾರಿಗೆ ಒಲಿಯಲಿದೆ ಅದೃಷ್ಟದ ಲಕ್ಷ್ಮಿ?
ಅಪ್ಪು ಪೋತರಾಜ
ಬೆಂಗಳೂರು : ನೀಟ್ ಅಕ್ರಮ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಕಾವು ರಾಜಧಾನಿಯಲ್ಲಿ ಜೋರಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ಎರಡನೇಯ ಹಂತದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಆಕಾಂಕ್ಷಿಗಳ ಎದೆಬಡಿತವೂ ಜೋರಾಗಿದ್ದು ಶತಾಯ ಗತಾಯ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ನವದೆಹಲಿಯಲ್ಲಿಯೇ ಆಕಾಂಕ್ಷಿಗಳು ಠಿಕಾಣಿ ಹೂಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಾರ್ಥವಾಗಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧೀ ಭಾಗಿಯಾಗಿ ಬಂಧನವಾದ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ `ಅಸ್ತು' ಎನ್ನಲು ಸಾಧ್ಯವಾಗಲಿಲ್ಲ, ಹೀಗಾಗಿ ಮತ್ತೊಮ್ಮೆ ಆಕಾಂಕ್ಷಿಗಳು `ಸುಸ್ತು' ಹೊಡೆದು ಮರ‍್ನಾಲ್ಕು ದಿನ ನವದೆಹಲಿಯಲ್ಲಿಯೇ ಠಿಕಾಣಿ ಹೂಡುವಂತಾಗಿದೆ.
ಖಾಲಿ ಇರುವ 20ಕ್ಕೂ ಸ್ಥಾನಗಳಿಗೆ 60ಕ್ಕೂ ಹೆಚ್ಚು ಶಾಸಕರು ಕಣ್ಣಿಟ್ಟಿದ್ದು ಎಲ್ಲರೂ ಹೈಕಮಾಂಡ್ ಮನವೊಲಿಸಲು ನವದೆಹಲಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಇಲ್ಲಿಗೆ ಬರಬೇಡಿ, ಯಾರೂ ಬಂದು ಲಾಬಿ ಮಾಡಬೇಡಿ ಎಂದು ಹೇಳಿದರೂ ಸಹ ಆಕಾಂಕ್ಷಿಗಳ ದೆಹಲಿ ದೌಡು ಮಾತ್ರ ಕಡಿಮೆಯಾಗಿಲ್ಲ.
ಈಗಂತೂ ಪ್ರತಿಭಟನೆಯ ಕಾವು, ಆ ಪ್ರತಿಭಟನೆಗೆ ಬೆಂಬಲಿಸಲು, ಭಾಗಿಯಾಗಲು ಬಂದಿದ್ದೇವೆ ಎಂಬ ನೆಪದಿಂದಾದಲೂ ಹೈಕಮಾಂಡ್ ನಾಯಕರ `ಕಣ್ಣಿಗೆ' ಬೀಳುವ ನಿಟ್ಟಿನಲ್ಲಿ ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ
ಹೊಸಮುಖಗಳಿಗೆ ಆದ್ಯತೆ, ಜಾತಿ ಲೆಕ್ಕಾಚಾರ, ಹಿರಿಯರಿಗೆ ಮಣೆ, ಕೆಲವರಿಗೆ ಪಕ್ಷದ ಜವಾಬ್ದಾರಿ ಹೀಗೆ ವಿವಿಧ ಆಯಾಮಗಳಲ್ಲಿ ಸಚಿವ ಸಂಪುಟದ ಆಯ್ಕೆ ನಡೆಯುತ್ತಿದೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಎಲ್ಲರೂ ತಮ್ಮ `ಆಪ್ತ'ರಿಗೆ ಮಂತ್ರಿಗಿರಿ ಕೊಡಿಸುವ ನಿಟ್ಟಿನಲ್ಲಿ ಶತ ಪ್ರಯತ್ನ ತೊಡಗಿದ್ದಾರೆ. ಮೊದಲನೇ ಪಟ್ಟಿಯಲ್ಲಿ ಸಿದ್ಧರಾಮಯ್ಯ ಅವರ ಆಪ್ತ ವಲಯಕ್ಕೆ ಬಂಪರ್ ದೊರಕಿದೆ, ಅತ್ತ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಗಾದಿ ಗಿಟ್ಟಿಸಿಕೊಂಡಿದ್ದಾರೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯಕ್ಕೆ ಬಂಪರ್ ದೊರಕಬೇಕು, ಹೀಗಾಗಿ ಈ ಬಾರಿ ಅವರ ನಿರ್ಣಯವೇ ಮೇಲುಗೈಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಅವರ ಆಪ್ತ ವಲಯದಲ್ಲಿಯೂ ಸಹ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ, ಅವರ ತವರು ಜಿಲ್ಲೆಯಿಂದಲೇ ಡಾ.ಅಜಯಸಿಂಗ್, ಆಳಂದ ಶಾಸಕ ಬಿ.ಆರ್. ಪಾಟೀಲ ಆಳಂದ, ಅಲ್ಪಸಂಖ್ಯಾತ ಹಾಗೂ ಮಹಿಳಾ ಕೋಟಾದಿಂದ ಕನೀಜ್ ಫಾತಿಮಾ ಸಚಿವ ಸ್ಥಾನದ ರೇಸನಲ್ಲಿದ್ದಾರೆ, ತವರು ಜಿಲ್ಲೆ ಹೊರತುಪಡಿಸಿಯೂ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಖರ್ಗೆ ಆಪ್ತ ವಲಯದ ದೊಡ್ಡ ಶಾಸಕರಿದ್ದಾರೆ, ಅವರು ಸಹ ಸಚಿವರಾಗುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಮನವೊಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಿನಿಸ್ಟರ್ ಆಗಲು ಕಸರತ್ತು ನಡೆಸುತ್ತಿರುವವರು ರಾಜಕೀಯ ಗಾಢ್ ಫಾದರ್‌ಗಳ ಮೂಲಕ ಹೈಕಮಾಂಡ್ ಮನವೊಲಿಕೆಗೆ ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ. ಹೀಗಾಗಿ ಕರ್ನಾಟಕದ ಸರಿಸುಮಾರು ೪೦ ಕ್ಕೂ ಹೆಚ್ಚು ಶಾಸಕರು, ವಿಧಾನ ಪರಿಷತ್ ಸದಸ್ಯರು ನವದೆಹಲಿಯಲ್ಲಿಯೇ ಬೀಡುಬಿಟ್ಟಿದ್ದಾರೆ.
ಯಾವ ಕ್ಷಣದಲ್ಲಿಯಾದರೂ ಸಚಿವ ಸಂಪುಟ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬಹುದು ಎಂಬ ಉತ್ಸಾಹದೊಂದಿಗೆ ಬೆಂಗಳೂರಿಗೆ ಹೋಗಿ ವಾಪಾಸ್ಸು ಬರುವುದು ತಡವಾದರೆ ಕಷ್ಟ, ಇನ್ನೊಂದೆಡೆ ಹವಾಮಾನ ವೈಪರೀತ್ಯದಿಂದ ಅನೇಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ, ಹೀಗಾಗಿ ಬರಲು ತೊಂದರೆಯಾಗುವುದಕ್ಕಿಂತ ಇಲ್ಲಿಯೇ ಇರುವುದು ಲೇಸು ಎಂದು ಠಿಕಾಣಿ ಹೂಡಿದ್ದಾರೆ.
ಸಂಭಾವ್ಯತೆಯೇ ಈ ಬಾರಿ ಗೌಣ
ಸಂಭಾವ್ಯ ಸಚಿವರು ಎಂಬುದೇ ಈ ಬಾರಿ ಗೌಣ ಎನ್ನುವಂತಾಗಿದೆ. ಎಐಸಿಸಿ ಹೈಕಮಾಂಡ್ ಸಚಿವರ ಆಯ್ಕೆಯಲ್ಲಿ ವಿಭಿನ್ನತೆಯ ಸ್ಪರ್ಶ ಅಂದರೆ 60:40, ಹಿರಿಯರು ಹಾಗೂ ಕಿರಿಯರು, ಕೆಲವೊಬ್ಬರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ, ಯುವಕರಿಗೆ ಮಣೆ ಹೀಗೆ ಅನೇಕ ಆಯಾಮಗಳೊಂದಿಗೆ ಪಟ್ಟಿ ಸಿದ್ಧಪಡಿಸುತ್ತಿದೆ, ಹೀಗಾಗಿ ಇವರೇ ಸಚಿವರಾಗುತ್ತಾರೆ ಎಂದು ಸಂಭಾವ್ಯತೆಯ ಪಟ್ಟಿ ಹೇಳುವುದೇ ಈ ಬಾರಿ ಅಸಾಧ್ಯದ ಮಾತಾಗಿದೆ. ಕೊನೆ ಕ್ಷಣದಲ್ಲಿ ಯಾವ ಕೋಟಾದ ಅಡಿಯಲ್ಲಿ ಯಾವ ಲೆಕ್ಕಾಚಾರದಲ್ಲಿ ಯಾರ ಹೆಸರು ಸೇರಲಿದೆಯೋ, ಪಕ್ಷದ ಜವಾಬ್ದಾರಿ ಎಂದು ಯಾವ ಹಿರಿಯರ ಹೆಸರು ಕೈ ತಪ್ಪಲಿದೆಯೋ ಎಂಬುದು ಕೂತುಹಲ ಮೂಡಿಸಿದೆ.
ವಿಧಾನಸಭೆ ಅಧ್ಯಕ್ಷ ಸ್ಥಾನ ಯಾರಿಗೆ?
ಈ ಸಚಿವ ಸಂಪುಟಕ್ಕೆ ಯಾರು ಸೇರಲಿದ್ದಾರೆ ಎನ್ನುವ ಜೊತೆಗೆ ವಿಧಾನಸಭಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕೂತಹಲ ಕೆರಳಿಸಿದೆ. ಕೆಲವು ದಿನಗಳ ಹಿಂದೆ ಟಿ.ಬಿ. ಜಯಚಂದ್ರ ಅವರ ಹೆಸರು ಕೇಳಿ ಬಂದಿತ್ತು. ನಂತರ ಬಿ.ಆರ್. ಪಾಟೀಲ ಆಳಂದ ಅವರ ಹೆಸರು ಪ್ರತಿಧ್ವನಿಸುತ್ತಿದೆ, ಹಿರಿಯರಾದ ಎಚ್.ಕೆ. ಪಾಟೀಲ ಹಾಗೂ ದಿನೇಶ ಗುಂಡೂರಾವ್ ಅವರನ್ನು ಈ ಹುದ್ದೆಗೆ ನಿಯೋಜಿಸುವ ಚರ್ಚೆಯೂ ನಡೆಯುತ್ತಿದೆ, ಹೀಗಾಗಿ ಅಂತಿಮವಾಗಿ ಯಾರ ಹೆಸರು ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.