Loading...

ನಾಗೇಂದ್ರ ರಾಜಿನಾಮೆಗೆ ಬಿಜೆಪಿ ಪಟ್ಟು : ಜೆಡಿಎಸ್ ಇಕ್ಕಟ್ಟು ಬಿಡದಿ ಬಗ್ಗೆ ಬಿಜೆಪಿ ಉದಾಸೀನ : ಜೆಡಿಎಸ್ ನಿಂದ ಮೈತ್ರಿ ಧರ್ಮದ ಚಿಂತನ

Suddi Mitra Editor

August 21, 2026 • 09:03 AM

ನಾಗೇಂದ್ರ ರಾಜಿನಾಮೆಗೆ ಬಿಜೆಪಿ ಪಟ್ಟು : ಜೆಡಿಎಸ್ ಇಕ್ಕಟ್ಟು  ಬಿಡದಿ ಬಗ್ಗೆ ಬಿಜೆಪಿ ಉದಾಸೀನ : ಜೆಡಿಎಸ್ ನಿಂದ ಮೈತ್ರಿ ಧರ್ಮದ ಚಿಂತನ

ಅಪ್ಪು ಪೋತರಾಜ

ಬೆಂಗಳೂರು : ಉಭಯ ಸದನದಲ್ಲಿ ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಒತ್ತಾಯಿಸಿ ವಿವಿಧ ಹಂತದಲ್ಲಿ ಬಿಜೆಪಿ ನಾಯಕರು ವಿವಿಧ ಸ್ವರೂಪದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ, ವಿಷಯದಲ್ಲಿ ಜೆಡಿಎಸ್ ಸಹ ಪ್ರತಿಯೊಂದಕ್ಕೂ ಸಾಥ್ ನೀಡುತ್ತಿದೆ.

ಆದರೆ ಬಿಜೆಪಿ ನಾಯಕರು ಬಿಡದಿ ಹೋರಾಟಕ್ಕೆ ಆದ್ಯತೆ ವಿಷಯ ಪರಿಗಣಿಸದೇ ಇರುವುದು ಜೆಡಿಎಸ್ ಪಕ್ಷಕ್ಕೆ ಮುಜುಗುರ ಉಂಟು ಮಾಡುವ ಜೊತೆಗೆ ಇಕ್ಕಟ್ಟಿಗೂ ಸಿಲುಕಿಸಿದೆ.

ಬಿಡದಿ ಬೇಡಿಕೆ ಹಾಗೂ ನಾಗೇಂದ್ರ ರಾಜೀನಾಮೆ ವಿಷಯವಾದ ದೋಸ್ತಿಗಳ ಅಜೆಂಡಾ ಬೇರೆಬೇರೆಯಾಗಿರುವುದು ರಾಜಕೀಯ ಕ್ಷಿಪ್ರ ಕ್ರಾಂತಿಗೆ ದಾರಿಯಾಗಲಿದೆಯೇ ಎಂಬ ಚಿಂತನೆಯನ್ನೂ ಉದಯಿಸುವಂತೆ ಮಾಡಿದೆ.

ಮೈತ್ರಿ ಧರ್ಮವೋ, ರಾಜಕೀಯ ಅಸ್ತಿತ್ವವೋ? ದಳದ ಮುಂದಿರುವ ಹೊಸ ಸವಾಲು ಜೆಡಿಎಸ್ ಪಕ್ಷವನ್ನು ಕಾಡುತ್ತಿದೆ.

ರಾಜಕೀಯ ಸಮರದ ಕೇಂದ್ರಬಿಂದುವಾಗಿ ನಿಂತಿರುವುದು ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿದೆ. ಆಗಸ್ಟ್‌ 17ರಿಂದಲೇ ಸದನದಲ್ಲಿ ಈ ವಿಚಾರ ಗದ್ದಲಕ್ಕೆ ಕಾರಣವಾಗಿದ್ದು, ಬಿಜೆಪಿ–ಜೆಡಿಎಸ್‌ ಶಾಸಕರು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದತ್ತ ಮೆರವಣಿಗೆ ನಡೆಸುವ ಮಟ್ಟಕ್ಕೆ ಹೋರಾಟ ತೀವ್ರಗೊಂಡಿದೆ.

ಇತ್ತ ಕಾಂಗ್ರೆಸ್‌ ಮಾತ್ರ ಪ್ರತಿಪಕ್ಷದ ಒತ್ತಡಕ್ಕೆ ಮಣಿಯುವ ಯಾವುದೇ ಲಕ್ಷಣ ತೋರಿಸುತ್ತಿಲ್ಲ. ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ ನಾಯಕರು, ನ್ಯಾಯಾಲಯದಿಂದ ನಾಗೇಂದ್ರ ತಪ್ಪಿತಸ್ಥರೆಂದು ಘೋಷಣೆಯಾಗಿಲ್ಲ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂಬ ನಿಲುವನ್ನು ಸರ್ಕಾರ ಮುಂದುವರಿಸುತ್ತಿದೆ.

ಈ ಹೋರಾಟದ ನಡುವೆ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಾಗಿರುವುದು ಜೆಡಿಎಸ್‌ಗೆ.

ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಾಗ ಎರಡೂ ಪಕ್ಷಗಳು ಕಾಂಗ್ರೆಸ್‌ ವಿರುದ್ಧ ಒಗ್ಗಟ್ಟಿನ ಹೋರಾಟದ ಸಂದೇಶ ನೀಡಿದ್ದವು. ಬಿಡದಿ ಟೌನ್‌ಶಿಪ್‌ ಯೋಜನೆ ಸೇರಿದಂತೆ ಹಲವು ವಿಚಾರಗಳಲ್ಲಿ ಎರಡೂ ಪಕ್ಷಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ. ಬಿಡದಿ ಯೋಜನೆ ವಿಚಾರದಲ್ಲಿ ರೈತರ ಪರವಾಗಿ ಒಗ್ಗಟ್ಟಿನಿಂದ ಹೋರಾಡುವ ನಿರ್ಧಾರವನ್ನೂ ಬಿಜೆಪಿ–ಜೆಡಿಎಸ್‌ ನಾಯಕರು ಪ್ರಕಟಿಸಿದ್ದರು.

ಬಿಡದಿ ವಿಷಯಕ್ಕೇಕೆ ಬಿಜೆಪಿ ನಿರ್ಲಕ್ಷ್ಯ?

ಜೆಡಿಎಸ್‌ಗೆ ಬಿಡದಿ ಟೌನ್‌ಶಿಪ್‌ ವಿಚಾರ ಅತ್ಯಂತ ಪ್ರಮುಖ. ಯೋಜನೆ ವಿರೋಧಿಸಿ ಪಕ್ಷ ಈಗಾಗಲೇ ಪಾದಯಾತ್ರೆ ನಡೆಸಿದೆ. ಈ ವಿಚಾರವನ್ನು ರೈತರ ಭೂಮಿ, ಜೀವನೋಪಾಯ ಮತ್ತು ಸ್ಥಳೀಯ ಹಿತಾಸಕ್ತಿಗಳ ಪ್ರಶ್ನೆಯಾಗಿ ಜೆಡಿಎಸ್‌ ಮುಂದಿಟ್ಟಿದೆ.

ಬಿಜೆಪಿಯ ಅಜೆಂಡಾದಲ್ಲಿ ನಾಗೇಂದ್ರ ರಾಜೀನಾಮೆ ಮುಂಚೂಣಿಗೆ ಬಂದಿದೆ.

ಹೀಗಾಗಿ ಮೈತ್ರಿ ಒಂದೇ ಆಗಿದ್ದರೂ, ಹೋರಾಟದ ಆದ್ಯತೆಗಳು ಒಂದೇ ಆಗಿಲ್ಲ ಎಂಬ ಸಂದೇಶ ಹೊರಬರುತ್ತಿದೆ. ರಾಜಕೀಯ ಮೈತ್ರಿಯ ಯಶಸ್ಸಿಗೆ ಕೇವಲ ಚುನಾವಣಾ ಒಪ್ಪಂದ ಸಾಕಾಗುವುದಿಲ್ಲ; ಸದನದೊಳಗಿನ ಹೋರಾಟದಲ್ಲೂ ಪರಸ್ಪರ ಹೆಜ್ಜೆಗೆ ಹೆಜ್ಜೆ ಹಾಕಬೇಕಾಗುತ್ತದೆ.ಇಲ್ಲಿಯೇ ಜೆಡಿಎಸ್‌ನ ಪರೀಕ್ಷೆಆರಂಭವಾಗಿದೆ.

ಜೆಡಿಎಸ್‌ ಈ ವಿಚಾರದಲ್ಲಿ ಬಹಿರಂಗವಾಗಿ ಅತಿಯಾದ ಆಕ್ರಮಣಕಾರಿ ನಿಲುವು ತಾಳದಿದ್ದರೆ, ಅದನ್ನೂ ರಾಜಕೀಯ ವಲಯದಲ್ಲಿ ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ.

ಬಿಜೆಪಿಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದರೆ ಕಾಂಗ್ರೆಸ್‌ ವಿರುದ್ಧದ ಮೈತ್ರಿ ಮತ್ತಷ್ಟು ಗಟ್ಟಿಯಾಗುತ್ತದೆ. ಆದರೆ ನಾಗೇಂದ್ರ ವಿಚಾರದಲ್ಲಿ ಬಿಜೆಪಿ ನಿರೀಕ್ಷಿಸಿದಷ್ಟು ಆಕ್ರಮಣಕಾರಿ ನಿಲುವು ತೆಗೆದುಕೊಳ್ಳದಿದ್ದರೆ, ಮೈತ್ರಿಯೊಳಗೆ ಅಂತರವಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಬಹುದು.

ಈಗಾಗಲೇ ಬಿಡದಿ ಪಾದಯಾತ್ರೆ ವಿಚಾರದಲ್ಲಿಯೂ ಎರಡೂ ಪಕ್ಷಗಳ ನಡುವೆ ಪ್ರತ್ಯೇಕ ರಾಜಕೀಯ ಸ್ಪೇಸ್‌ಗಾಗಿ ಪ್ರಯತ್ನಗಳು ಗೋಚರಿಸಿದ್ದವು. ಜೆಡಿಎಸ್‌ ತನ್ನದೇ ಪಾದಯಾತ್ರೆ ನಡೆಸಲು ಮುಂದಾಗಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿರುವುದು ಕೂಡ ರಾಜಕೀಯ ಕುತೂಹಲಕ್ಕೆ ಕಾರಣವಾಗಿತ್ತು.

ಹೀಗಾಗಿ ನಾಗೇಂದ್ರ ಪ್ರಕರಣ ಕೇವಲ ಕಾಂಗ್ರೆಸ್‌ ವಿರುದ್ಧದ ಹೋರಾಟವಲ್ಲ; ಬಿಜೆಪಿ–ಜೆಡಿಎಸ್‌ ಮೈತ್ರಿಯ ಒಳಗಿನ ಹೊಂದಾಣಿಕೆಯನ್ನೂ ಪರೀಕ್ಷಿಸುವ ವೇದಿಕೆಯಾಗಿದೆ.

ಕಾಂಗ್ರೆಸ್‌ಗೆ ಈ ಗದ್ದಲ ಲಾಭವೋ, ನಷ್ಟವೋ?

ಸದನದ ಕಲಾಪ ನಿರಂತರವಾಗಿ ಸ್ಥಗಿತಗೊಳ್ಳುವುದರಿಂದ ಸರ್ಕಾರದ ಮೇಲೂ ಒತ್ತಡ ಹೆಚ್ಚಾಗುತ್ತಿದೆ. ಜನರ ಸಮಸ್ಯೆಗಳು, ಅಭಿವೃದ್ಧಿ, ಆಡಳಿತಾತ್ಮಕ ನಿರ್ಧಾರಗಳು ಚರ್ಚೆಯಾಗಬೇಕಾದ ಸದನದಲ್ಲಿ ರಾಜೀನಾಮೆ ವಿಚಾರವೇ ಮರುಮರು ಪ್ರಸ್ತಾಪವಾಗುತ್ತಿರುವುದು ಸರ್ಕಾರಕ್ಕೆ ರಾಜಕೀಯವಾಗಿ ಅಸೌಕರ್ಯಕರ.

ಆದರೆ ಕಾಂಗ್ರೆಸ್‌ ಕೂಡ ಪ್ರತಿಪಕ್ಷದ ಆರೋಪಗಳಿಗೆ ಪ್ರತಿಯಾಗಿ ಬಿಜೆಪಿ ವಿರುದ್ಧ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ತಿರುಗೇಟು ನೀಡುತ್ತಿದೆ.

ಇದರಿಂದ ಮೂಲ ಪ್ರಶ್ನೆ—ವಾಲ್ಮೀಕಿ ನಿಗಮದ ಹಣಕಾಸು ಅಕ್ರಮದ ಕುರಿತು ಸಂಪೂರ್ಣ ಉತ್ತರದಾಯಿತ್ವ ಯಾರದ್ದು?—ಎಂಬುದಕ್ಕಿಂತ, ಕಾಂಗ್ರೆಸ್‌–ಬಿಜೆಪಿ ನಡುವಿನ ಆರೋಪ–ಪ್ರತ್ಯಾರೋಪವೇ ಹೆಚ್ಚು ಮುನ್ನೆಲೆಗೆ ಬರುತ್ತಿದೆ.

- Advertisement -