Loading...

ನಾಗೇಂದ್ರ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ: ಆರ್. ಅಶೋಕ

Suddi Mitra Editor

August 20, 2026 • 07:12 AM

ನಾಗೇಂದ್ರ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ: ಆರ್. ಅಶೋಕ

ಬೆಂಗಳೂರು: ಬಡ ದಲಿತರಿಗೆ ಸೇರಬೇಕಿದ್ದ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ನಾಗೇಂದ್ರ ಅವರ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗೇಂದ್ರ ಅವರು ದಲಿತ ಕಾರ್ಡ್ ಬಳಸಿಕೊಂಡು ಲಕ್ಷಾಂತರ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಬಡ ದಲಿತರಿಗೆ ಸೇರಬೇಕಿದ್ದ ಸುಮಾರು ₹187 ಕೋಟಿ ಹಣವನ್ನು ಲಪಟಾಯಿಸಲಾಗಿದೆ ಎಂದು ಆರೋಪಿಸಿದ ಅಶೋಕ, “ನಾನು ದಲಿತ” ಎಂದು ಹೇಳಿಕೊಳ್ಳುವುದರಿಂದ ಮಾತ್ರ ದಲಿತರ ಪರವಾಗಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಲಕ್ಷಾಂತರ ದಲಿತರ ಹಿತ ಬೇಕೋ ಅಥವಾ ಒಬ್ಬ ನಾಗೇಂದ್ರ ಬೇಕೋ ಎಂಬುದನ್ನು ಸ್ಪಷ್ಟಪಡಿಸಬೇಕು. ನಾಗೇಂದ್ರ ಅವರು ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟ ಮತ್ತು ಪ್ರತಿಭಟನೆ ಮುಂದುವರಿಯಲಿದೆ ಎಂದು ಆರ್. ಅಶೋಕ ಹೇಳಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ತನಿಖೆಯಲ್ಲಿ ತಮ್ಮ ಹೆಸರು ಇಲ್ಲ ಎಂದು ಹೇಳುತ್ತಿರುವುದು ಸುಳ್ಳು ಎಂದು ಅಶೋಕ ಆರೋಪಿಸಿದರು. ತಮ್ಮ ಹೆಸರು ಇಲ್ಲದಿದ್ದರೆ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಏಕೆ ಕೋರಲಾಗಿದೆ ಎಂದು ಪ್ರಶ್ನಿಸಿದರು.

ಒಬ್ಬ ನಾಗೇಂದ್ರ ಅವರ ವಿಚಾರಕ್ಕಾಗಿ ವಿಧಾನಸಭೆಯ 224 ಶಾಸಕರ ಹಕ್ಕುಗಳನ್ನು ಕುಗ್ಗಿಸುವುದು ಸರಿಯಲ್ಲ. ಪ್ರಕರಣದ ಬಗ್ಗೆ ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ‘ವಂದೇ ಮಾತರಂ’ ವಿಚಾರವಾಗಿಯೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಶೋಕ, ರಾಷ್ಟ್ರಗೀತೆ ‘ಜನಗಣಮನ’ ರವೀಂದ್ರನಾಥ ಟ್ಯಾಗೋರ್ ಅವರ ರಚನೆ, ‘ವಂದೇ ಮಾತರಂ’ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ರಚನೆ ಎಂದು ಹೇಳಿದರು. ಬಿಜೆಪಿ ಎರಡೂ ಗೀತೆಗಳನ್ನು ಗೌರವದಿಂದ ಹಾಡುತ್ತದೆ ಎಂದರು.

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಸಂವಿಧಾನಕ್ಕೆ ಅಪಚಾರ ಹಾಗೂ ಅಗೌರವ ತೋರಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, “ನಾವು ಭಾರತೀಯರು, ಇಟಲಿಯವರಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಸಂಸ್ಕೃತಿ, ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಒತ್ತಾಯಿಸಿದರು

- Advertisement -