ನೀಟ್ ವಿವಾದ ಭುಗಿಲೆದ್ದಿದೆ: ಬಾಂಗ್ಲಾದೇಶ–ಶ್ರೀಲಂಕಾ ಮಾದರಿಯ ಪ್ರತಿಭಟನೆಗಳ ಚರ್ಚೆ, ಮೋದಿ ಸರ್ಕಾರಕ್ಕೆ ರಾಜಕೀಯ ಅಗ್ನಿಪರೀಕ್ಷೆ?
ಅಪ್ಪು ಪೋತರಾಜ
ಬೆಂಗಳೂರು/ನವದೆಹಲಿ: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯ ಸಂಬಂಧಿಸಿದ ವಿವಾದ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಅಸಮಾಧಾನ ಈಗ ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಿ ರೂಪುಗೊಂಡಿದ್ದು, ಜಂತರ್ ಮಂತರ್ ಸೇರಿದಂತೆ ಹಲವು ಕಡೆ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿರುವುದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಮತ್ತಷ್ಟು ಹೆಚ್ಚಾಗಿ, ವಿದ್ಯಾರ್ಥಿಗಳ ಪರವಾಗಿ ದೇಶದ ಗಡಿ ದಾಟಿ ವಿದೇಶಗಳಲ್ಲಿಯೂ ಪ್ರತಿಧ್ವನಿಸುತ್ತಿದೆ. ಇಂಗ್ಲೆಂಡ್‌ನ ಮಾಂಚೆಸ್ಟರ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಭಾರತೀಯ ಸಮುದಾಯದ ಸದಸ್ಯರು ಸೇರಿ ಪ್ರತಿಭಟನೆ ನಡೆಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ದಿನದಿಂದ ದಿನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸಿನಿತಾರೆಯರು, ಪ್ರಗತಿಪರ ಚಿಂತಕರು, ಸಾಹಿತಿಗಳು ಹಾಗೂ ವಿವಿಧ ವಿರೋಧ ಪಕ್ಷಗಳು ವಿದ್ಯಾರ್ಥಿಗಳ ಪರವಾಗಿ ಧ್ವನಿಯೆತ್ತಿವೆ.
ಪ್ರತಿಭಟನೆನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ತೀವ್ರ ಟೀಕೆಗೆ ಕೇಂದ್ರ ಸರ್ಕಾರ ಗುರಿಯಾಗಿದೆ. ವಿರೋಧ ಪಕ್ಷಗಳು ಈ ಕ್ರಮವನ್ನು ಖಂಡಿಸಿದ್ದು, ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿವೆ. ಈ ಬೆಳವಣಿಗೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರಬಹುದೆಂಬ ರಾಜಕೀಯ ಚರ್ಚೆಗೂ ಕಾರಣವಾಗಿವೆ
ಈ ನಡುವೆ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯವೂ ತೀವ್ರಗೊಂಡಿದ್ದು, ಸಂಸತ್ತಿನ ಒಳಗೂ ಹೊರಗೂ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಟ್ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲು ಮುಂದಾದಾಗ ಗದ್ದಲ ಉಂಟಾಗಿ ಕಲಾಪ ಮುಂದೂಡಲ್ಪಟ್ಟಿರುವ ಬೆಳವಣಿಗೆಯೂ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಕೆಲ ರಾಜಕೀಯ ನಾಯಕರು ಮತ್ತು ಪ್ರತಿಭಟನಾಕಾರರು ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಸರ್ಕಾರಗಳ ವಿರುದ್ಧ ನಡೆದ ಭಾರಿ ಜನಾಂದೋಲನಗಳ ಮಾದರಿಯಲ್ಲಿ ಪ್ರಧಾನಿ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಲು ಮುಂದಾದಾಗ ವಿಪಕ್ಷ ನಾಯಕ ರಾಹುಲ್ ಗಾಂದಿ ಪ್ರಿಯಾಂಕ ವಾದ್ರಾ ಸೇರಿದಂತೆ ಪೋಲಿಸರು ವಶಕ್ಕೆ ಪಡೆದುಕೊಂಡು ತಡರಾತ್ರಿ ಬಿಡಲಾಯಿತು.
ಆದರೆ, ವಿದ್ಯಾರ್ಥಿಗಳ ಅಸಮಾಧಾನ, ವಿರೋಧ ಪಕ್ಷಗಳ ಆಕ್ರಮಣಕಾರಿ ನಿಲುವು ಹಾಗೂ ಕೇಂದ್ರ ಸರ್ಕಾರದ ಮೇಲೆ ಹೆಚ್ಚುತ್ತಿರುವ ಪ್ರಶ್ನೆಗಳು ಕೇಂದ್ರ ಸರ್ಕಾರದ ಸಾರ್ವಜನಿಕ ವರ್ಚಸ್ಸಿನ ಮೇಲೆ ರಾಜಕೀಯ ಒತ್ತಡವನ್ನು ಸೃಷ್ಟಿಸುತ್ತಿವೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಜನಾಭಿಪ್ರಾಯದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎಂಬುದು ಸರ್ಕಾರದ ನಿಲವು ಮತ್ತು ಸಮಸ್ಯೆ ಪರಿಹರಿಸುವ ಕ್ರಮಗಳ ಮೇಲೆ ಅವಲಂಬಿತವಾಗಿರಲಿದೆ.
ಇನ್ನೊಂದೆಡೆ ಧಾರಾಕಾರ ಮಳೆಯ ನಡುವೆಯೂ ಸಂಸತ್ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ಕುಳಿತು ಸಂಸದ ಚಂದ್ರಶೇಖರ್ ಆಜಾದ್ ಧರಣಿ ಪ್ರತಿಭಟನೆ ಪ್ರಾರಂಭಿಸಿ, ವಿದ್ಯಾರ್ಥಿಗಳ ಹಕ್ಕು ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು ದಮನಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು, ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಒಟ್ಟಿನಲ್ಲಿ, ನೀಟ್ ವಿವಾದವು ಕೇವಲ ಪರೀಕ್ಷೆಯ ಪ್ರಶ್ನೆಯಾಗಿರದೆ, ಆಡಳಿತದ ವಿಶ್ವಾಸಾರ್ಹತೆ, ರಾಜಕೀಯ ಹೊಣೆಗಾರಿಕೆ ಮತ್ತು ಯುವಜನರ ಭವಿಷ್ಯದ ಕುರಿತ ರಾಷ್ಟ್ರೀಯ ಚರ್ಚೆಯಾಗಿ ರೂಪುಗೊಂಡಿದೆ. ಈ ಸವಾಲನ್ನು ಸರ್ಕಾರ ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳ ದಿಕ್ಕು ಬಹುಮಟ್ಟಿಗೆ ನಿರ್ಧಾರವಾಗುವ ಸಾಧ್ಯತೆಯಿದೆ