Loading...

ಬಿಡದಿ ಟೌನ್‌ಶಿಪ್‌ಗೆ ವಿರೋಧದ ಕಹಳೆ: 33 ಸಾವಿರ ಕೋಟಿ ಲಾಭಕ್ಕಾಗಿ ರೈತರ ಭೂಮಿ ಬೇಕಾ?'ಬೃಹತ್ ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್

Suddi Mitra Editor

June 14, 2026 • 10:14 AM

ಬಿಡದಿ ಟೌನ್‌ಶಿಪ್‌ಗೆ ವಿರೋಧದ ಕಹಳೆ: 33 ಸಾವಿರ ಕೋಟಿ ಲಾಭಕ್ಕಾಗಿ ರೈತರ ಭೂಮಿ ಬೇಕಾ?'ಬೃಹತ್ ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್

 ರಾಮನಗರ: ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ರೈತರ ಪರವಾಗಿ ನಿಂತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅರಳಾಳುಸಂದ್ರ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿದ ನಿಖಿಲ್ ಕುಮಾರಸ್ವಾಮಿ, ಟೌನ್‌ಶಿಪ್ ಯೋಜನೆಗೆ ಅಂತಿಮ ಅಧಿಸೂಚನೆ ಹೊರಡಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ರೈತರ ಭೂಮಿಯನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ಹೋರಾಟ ನಡೆಸುವುದಾಗಿ ಘೋಷಿಸಿದರು.

 ಡಿಕೆಶಿ ರಿಯಲ್ ಎಸ್ಟೇಟ್ ದಂಧೆ ಮಾಡುವ ಹುನ್ನಾರ

ಸರ್ಕಾರ ಈ ಯೋಜನೆಯ ಮೂಲಕ ರಿಯಲ್ ಎಸ್ಟೇಟ್ ದಂಧೆ ನಡೆಸಲು ಮುಂದಾಗಿದೆ ಎಂದು ಆರೋಪಿಸಿದ ನಿಖಿಲ್, “ರೈತರಿಗೆ ಒಂದು ಎಕರೆಗೆ ಸುಮಾರು 2.5 ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಆದರೆ ಅದೇ ಭೂಮಿಯನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುವ ಮೂಲಕ ಒಂದು ಎಕರೆಗೆ 25 ಕೋಟಿ ರೂಪಾಯಿವರೆಗೆ ಲಾಭ ಪಡೆಯುವ ಉದ್ದೇಶವಿದೆ. ಈ ಯೋಜನೆಯಿಂದ ಸುಮಾರು 33 ಸಾವಿರ ಕೋಟಿ ರೂಪಾಯಿ ಲಾಭ ಗಳಿಸುವ ಯೋಜನೆ ಸರ್ಕಾರದ್ದಾಗಿದೆ” ಎಂದು ಹೇಳಿದರು.

ವಡೇರಹಳ್ಳಿ, ಮಂಡಲಹಳ್ಳಿ ಹಾಗೂ ಕೆಂಪಯ್ಯನಪಾಳ್ಯ ಗ್ರಾಮಗಳ ಆಯ್ಕೆಯ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂದು ಒತ್ತಾಯಿಸಿದ ಅವರು, “ಈ ಭಾಗದ ಬಹುತೇಕ ರೈತರು ಒಂದು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಕೆಂಪಯ್ಯನಪಾಳ್ಯದಲ್ಲೇ 354 ಎಕರೆ ಭೂಮಿ ಅಧಿಸೂಚಿತವಾಗಿದ್ದು, ಸುಮಾರು 600 ರೈತರಲ್ಲಿ 500ಕ್ಕೂ ಹೆಚ್ಚು ರೈತರು ಒಂದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ” ಎಂದು ತಿಳಿಸಿದರು.

“ಬಿಡದಿ ಭಾಗದಲ್ಲಿ ರೈತರೇ ಇಲ್ಲ, ಇದು ಬರಡು ಭೂಮಿ ಎಂಬ ರೀತಿಯ ಪ್ರಚಾರ ಮಾಡಲಾಗುತ್ತಿದೆ. ಆದರೆ ಸರ್ಕಾರ ತರಾತುರಿಯಲ್ಲಿ, ರಾತ್ರೋರಾತ್ರಿ ಮೂರು ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ರೈತರ ಜಮೀನು ಕಬಳಿಸುವವರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಅವರು ಹೇಳಿದರು.

ನಿಖಿಲ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಆರೋಪ ಮಾಡಿದ್ದು, “ವೈಯಕ್ತಿಕ ಹಿತಾಸಕ್ತಿಗಾಗಿ ಬುದ್ಧಿವಂತಿಕೆಯ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಲಾಗುತ್ತಿದೆ” ಎಂದು ಟೀಕಿಸಿದರು.

 ಡಿಕೆಶಿ ವಿರುದ್ಧ ಬೃಹತ್ ಹೋರಾಟದ ಎಚ್ಚರಿಕೆ

ಯೋಜನೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನಿಖಿಲ್, “ಅಗತ್ಯವಿದ್ದರೆ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮಟ್ಟದ ಹೋರಾಟವನ್ನು ಸಂಘಟಿಸುತ್ತೇವೆ” ಎಂದು ಹೇಳಿದರು.

 450 ದಿನಗಳ ಹೋರಾಟದ ಇತಿಹಾಸ

ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಭಾಗಗಳಲ್ಲಿ ರೈತರು 450ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿರುವುದನ್ನು ಉಲ್ಲೇಖಿಸಿದ ಅವರು, “ಸ್ವಂತ ಜಮೀನನ್ನು ಉಳಿಸಿಕೊಳ್ಳಲು ರೈತರು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಕ್ಕೆ ರೈತರ ನೋವು ಕಾಣುತ್ತಿಲ್ಲ, ಕೇಳಿಸುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.

 ಡಿಕೆಶಿ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ಕುರಿತು ಸರ್ಕಾರದ ಉದ್ದೇಶವನ್ನೇ ಪ್ರಶ್ನಿಸಿದ ನಿಖಿಲ್, “ಆರ್ಥಿಕ ಇಲಾಖೆ ಸಂಪೂರ್ಣ ಒಪ್ಪಿಗೆ ನೀಡದಿದ್ದರೂ ಯೋಜನೆಯನ್ನು ಮುಂದುವರಿಸಲಾಗುತ್ತಿದೆ. ಅಧಿಕಾರಿಗಳೇ ಯೋಜನೆ ಸರ್ಕಾರಕ್ಕೆ ಆರ್ಥಿಕ ಹೊರೆ ಎಂದು ಹೇಳುತ್ತಿದ್ದಾರೆ. ಸಾಲ ಪಡೆಯಲು ರೈತರ ಭೂಮಿಯನ್ನೇ ಅಡ ಇಡುವ ಪರಿಸ್ಥಿತಿ ಏಕೆ? ಸರ್ಕಾರಕ್ಕೆ ಹಣವಿಲ್ಲದಿದ್ದರೆ ಇಂತಹ ಯೋಜನೆ ಕೈಗೆತ್ತಿಕೊಳ್ಳುವ ಅಗತ್ಯವೇನು? ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ಲಾಭ ಮಾಡುವ ಉದ್ದೇಶ ಯಾರ ಹಿತಕ್ಕಾಗಿ?” ಎಂದು ಪ್ರಶ್ನಿಸಿದರು.

- Advertisement -