ಶಾಸಕ ಗುಡಗುಂಟಿಗೆ ಮಾಜಿ ಸಚಿವ ನಿರಾಣಿ ಪರೋಕ್ಷ ಟಾಂಗ್ ಫ್ಯಾಕ್ಟರಿ ಇದೆ, ಹಣ ಇದೆ… ಟಿಕೆಟ್ ಸಿಗುತ್ತದೆ ಎಂಬ ಭ್ರಮೆ ನಾವು ಬಿಡಬೇಕು
ಜಮಖಂಡಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರು ಹಾಗೂ ಸಚಿವರಿಗೆ ಟಿಕೆಟ್ ನಿರಾಕರಿಸಿರುವ ಉದಾಹರಣೆಗಳನ್ನು ಉಲ್ಲೇಖಿಸುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ, ಜಮಖಂಡಿ ಕ್ಷೇತ್ರದ ಹಾಲಿ ಶಾಸಕ ಜಗದೀಶ ಗುಡಗುಂಟಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ಬಿಜೆಪಿ ಸೇವಾ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ 57 ಹಾಲಿ ಶಾಸಕರಿಗೆ ಹಾಗೂ 16 ಹಾಲಿ ಸಚಿವರಿಗೆ ಟಿಕೆಟ್ ನೀಡಿಲ್ಲ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿಯೂ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವ ಉದಾಹರಣೆಗಳಿವೆ. ಕರ್ನಾಟಕದಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರಿಗೆ ಲೋಕಸಭಾ ಟಿಕೆಟ್ ನೀಡಿಲ್ಲ, ಪಕ್ಷವನ್ನು ಕಟ್ಟಿ ಬೆಳೆಸಿದ ಅನಂತಕುಮಾರ್ ಅವರಿಗೂ ಟಿಕೆಟ್ ನೀಡಿರಲಿಲ್ಲ ಎಂದರು.
ಫ್ಯಾಕ್ಟರಿ ಇದೆ, ಹಣ ಇದೆ, ನನಗೆ ಟಿಕೆಟ್ ಸಿಗುತ್ತದೆ ಎಂಬ ಭ್ರಮೆ ಯಾರಿಗೂ ಇರಬಾರದು. ಕಾರ್ಯಕರ್ತರ ಪ್ರೀತಿ ಇದ್ದರೆ ಮಾತ್ರ ಟಿಕೆಟ್ ಸಿಗುತ್ತದೆ. ಕಾರ್ಯಕರ್ತರ ಪ್ರೀತಿ, ಹೃದಯ ಮತ್ತು ವಿಶ್ವಾಸವನ್ನು ಗೆದ್ದಿದ್ದರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲುವು ನಿಶ್ಚಿತ ಎಂದರು.
ಜಮಖಂಡಿಗೆ ಯಡಿಯೂರಪ್ಪ ಬಂದರೆ 15 ಸಾವಿರ ಜನ ಸೇರುತ್ತಿದ್ದರು
ಯಡಿಯೂರಪ್ಪ ಅವರು ಜಮಖಂಡಿಗೆ ಬಂದಿದ್ದರೆ ಕನಿಷ್ಠ 15 ಸಾವಿರ ಜನ ಸೇರುತ್ತಿದ್ದರು, ಕಾರ್ಯಕರ್ತರನ್ನು ದೂರ ಇಡುವ ಹಾಲಿ ಶಾಸಕರಿಗಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ಭ್ರಮೆಯಲ್ಲಿ ಇರಬಾರದು. ಕಾರ್ಯಕರ್ತರು ನಮ್ಮ ಆಸ್ತಿ ಎಂಬ ಮಾತನ್ನು ಸಹ ಉಲ್ಲೇಖಿಸಿದರು.
ಆಹ್ವಾನ ನೀಡದ್ದಕ್ಕೆ ಅಸಮಾಧಾನ
ತಾವು ಮಾಜಿ ಸಚಿವರಾಗಿದ್ದು, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದರೂ ಜಮಖಂಡಿಯ ಸ್ಥಳೀಯ ಶಾಸಕರು ಹಾಗೂ ಪಕ್ಷದ ಅಧ್ಯಕ್ಷರು ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನಿರಾಣಿ, ನಾನು ಇಲ್ಲಿ ಯಾರ ಆಹ್ವಾನದಿಂದಲೂ ಬಂದಿಲ್ಲ. ಬಿ.ವೈ. ವಿಜಯೇಂದ್ರ ಹಾಗೂ ಕಾರ್ಯಕರ್ತರ ಸಲುವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ವಿಸಿಟಿಂಗ್ ಕಾರ್ಡ್ ಅಧ್ಯಕ್ಷರಾಗಬೇಡಿ..
ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸಬೇಕು. ಪಕ್ಷದ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರತಿಯೊಬ್ಬ ಕಾರ್ಯಕರ್ತರಿಗೂ ತಲುಪಿಸುವ ಜವಾಬ್ದಾರಿ ಗ್ರಾಮೀಣ ಹಾಗೂ ನಗರ ಮಂಡಲ ಅಧ್ಯಕ್ಷರದ್ದಾಗಿದೆ ಎಂದರು.
ಈ ಕೆಲಸವನ್ನು ಬಿಟ್ಟು ವಿಸಿಟಿಂಗ್ ಕಾರ್ಡ್ ಅಧ್ಯಕ್ಷರಾಗಬಾರದು. ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯ ಪಕ್ಷದ ಪದಾಧಿಕಾರಿಗಳಿಗೆ ಮುರಗೇಶ ನಿರಾಣಿ ಕಿವಿಮಾತು ಹೇಳಿದರು.
ನಿರಾಣಿ ಅವರ ಈ ಹೇಳಿಕೆಗಳು ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತವೇ? ಎಂಬ ರಾಜಕೀಯ ಚರ್ಚೆಗೆ ಮತ್ತಷ್ಟು ಕುತೂಹಲ ಮೂಡಿಸಿವೆ.
ಇನ್ನೊಬ್ಬರಿಗೆ ಬೊಟ್ಟು ಮಾಡುವ ಮುನ್ನ ಯೋಚಿಸಿ ಬಿವೈ ವಿಜಯೇಂದ್ರ
ನಾವು ಇನ್ನೊಬ್ಬರ ಮೇಲೆ ಬೊಟ್ಟು ಮಾಡುವ ಮುನ್ನ ಹತ್ತು ಸಾರಿ ಯೋಚಿಸಬೇಕು, ಬೊಟ್ಟು ಮಾಡುವಾಗ ನಾಲ್ಕು ಬೆರಳುಗಳು ನಮ್ಮ ಕಡೆ ಇರುತ್ತವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅತ್ತ ನಿರಾಣಿ ಅವರು ಸಹ ಸ್ವ ಪಕ್ಷದ ಶಾಸಕರ ವಿರುದ್ಧವೇ ಪರೋಕ್ಷವಾಗಿಯೇ ಖಾರವಾದ ಟೀಕಾ ಪ್ರಹಾರ ಪ್ರಯೋಗಿಸಿದರು. ನಂತರ ವಿಜಯೇಂದ್ರ ಸಹ ಈ ಮಾತನ್ನು ಉಲ್ಲೇಖಿಸಿದ್ದು ಯಾರಿಗೆ ಎಂಬುದು ಕುತೂಹಲ ಕೆರಳಿಸಿತು.
ವೇದಿಕೆಯಲ್ಲಿ ಕುಳಿತವರಾದಿಯಾಗಿ ಹಾಗೂ ನನಗೂ ಅನ್ವಯವಾಗುವಂತೆ ಯಾರೂ ಯಾರೊಬ್ಬರ ಮೇಲೆ ದೂಷಿಸಬಾರದು, ದೂಷಿಸಲು ಅವರತ್ತ ಬೊಟ್ಟು ಮಾಡಿದರೆ ನಾಲ್ಕು ಬೆರಳುಗಳು ನಮ್ಮತ್ತ ಇರುತ್ತವೆ ಎಂದು ಮೊದಲು ನಾವು ಮನವರಿಕೆ ಮಾಡಿಕೊಳ್ಳಬೇಕು ಎಂದು ಖಾರವಾಗಿಯೇ ಹೇಳಿದರು.