ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನ ಲೋಪದ ಆರೋಪ; ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಉತ್ತರಿಸಲಿ
ಬೆಂಗಳೂರು, ಸೆ.22: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುತ್ತಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಿನ ಲೋಪ ಮತ್ತು ಪಾರದರ್ಶಕತೆಯ ಕೊರತೆ ಕುರಿತು ವಿಧಾನ ಪರಿಷತ್ತಿನಲ್ಲಿ ನಿಲುವಳಿ ಸೂಚನೆ ಮೂಲಕ ಚರ್ಚೆ ನಡೆಸಲು ಸದಸ್ಯರು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 59ನೇ ನಿಯಮದಡಿ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವಂತೆ ಪರಿಷತ್ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ಲಕ್ಷಾಂತರ ಯುವಜನರಿಗೆ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸುವ ಪ್ರಮುಖ ನೇಮಕಾತಿ ಸಂಸ್ಥೆಯಾಗಿರುವ KPSCಯ ಪರೀಕ್ಷಾ ಹಾಗೂ ನೇಮಕಾತಿ ಪ್ರಕ್ರಿಯೆಗಳ ಕುರಿತು ಇತ್ತೀಚಿನ ದಿನಗಳಲ್ಲಿ ಹಲವು ಗಂಭೀರ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಿನ ಲೋಪ ಹಾಗೂ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಕುರಿತ ಅನುಮಾನಗಳು ಅಭ್ಯರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿವೆ ಎಂದು ಸದಸ್ಯರು ತಿಳಿಸಿದ್ದಾರೆ.
ವರ್ಷಗಟ್ಟಲೆ ಶ್ರಮಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳ ಭವಿಷ್ಯವೇ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆ ಅವಲಂಬಿತವಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಲೋಪಗಳಾಗಿವೆ ಎಂಬ ಆರೋಪಗಳು ಕೇಳಿಬಂದಾಗ, ಅರ್ಹ ಅಭ್ಯರ್ಥಿಗಳಲ್ಲಿ ನಿರಾಶೆ ಹಾಗೂ ಅಸಮಾಧಾನ ಮೂಡುವುದು ಸಹಜ. ಇದರಿಂದ KPSC ಮೇಲಿನ ಸಾರ್ವಜನಿಕ ನಂಬಿಕೆಗೂ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ಅದಕ್ಕೆ ಹೊಣೆ ಯಾರು? ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಅಭ್ಯರ್ಥಿಗಳ ಹಿತಾಸಕ್ತಿಯನ್ನು ಹೇಗೆ ರಕ್ಷಿಸಲಾಗುತ್ತಿದೆ?” ಎಂಬ ಪ್ರಶ್ನೆಗಳಿಗೆ ಸರ್ಕಾರ ಸದನದಲ್ಲಿ ಸ್ಪಷ್ಟ ಉತ್ತರ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.
KPSC ಪರೀಕ್ಷೆಗಳಲ್ಲಿ ಕೇಳಿಬರುತ್ತಿರುವ ಆರೋಪಗಳ ಕುರಿತು ಸಮಗ್ರ ತನಿಖೆ, ಪರೀಕ್ಷಾ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ಸುಧಾರಣೆ, ಪಾರದರ್ಶಕ ನೇಮಕಾತಿ ವ್ಯವಸ್ಥೆ ಹಾಗೂ ಅಭ್ಯರ್ಥಿಗಳ ಹಕ್ಕುಗಳ ರಕ್ಷಣೆಗೆ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ರಾಜ್ಯದ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಈ ಗಂಭೀರ ವಿಷಯವನ್ನು ಕಡೆಗಣಿಸದೆ, ಇಂದು ನಡೆಯುವ ವಿಧಾನ ಪರಿಷತ್ ಅಧಿವೇಶನದಲ್ಲಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ರವಿಕುಮಾರ್ ಎನ್, ಡಿ ಎಸ್ ಅರುಣ, ಲಿಂಗರಾಜ ಪಾಟೀಲ, ಆರ್ ರಘು, ಡಾ. ದನಂಜಯ್ಯಾ, ವೈ.ಎಮ್ ಸತೀಶ ಸೇರಿದಂತೆ ಹಲವು ಸದಸ್ಯರು ಮನವಿ ಮಾಡಿದ್ದಾರೆ.