Loading...

ರಾಜಕೀಯ ಹಸ್ತಕ್ಷೇಪದ ಆರೋಪ : ಸಂಘಟನೆಗಳಿಂದ ವ್ಯಾಪಕ ಆಕ್ಷೇಪ' *`ಸಾರಸ್ವತ ಹಬ್ಬಕ್ಕೆ ಪ್ರತಿಭಟನೆಯ ಬಿಸಿ'* *ಮುನ್ನಚ್ಚರಿಕೆ ಇದ್ದರೂ ಎಚ್ಚರ ತಪ್ಪಿದರೇ ಆರಕ್ಷಕರು?*

Suddi Mitra Editor

October 04, 2026 • 03:06 PM

ರಾಜಕೀಯ ಹಸ್ತಕ್ಷೇಪದ ಆರೋಪ : ಸಂಘಟನೆಗಳಿಂದ ವ್ಯಾಪಕ ಆಕ್ಷೇಪ'   *`ಸಾರಸ್ವತ ಹಬ್ಬಕ್ಕೆ ಪ್ರತಿಭಟನೆಯ ಬಿಸಿ'*  *ಮುನ್ನಚ್ಚರಿಕೆ ಇದ್ದರೂ ಎಚ್ಚರ ತಪ್ಪಿದರೇ ಆರಕ್ಷಕರು?*

ಜಮಖಂಡಿ : ಜಮಖಂಡಿಯಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದ್ದು, ಉದ್ಘಾಟನಾ ಕಾರ್ಯಕ್ರಮದ ನಡುವೆಯೇ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ ಘಟನೆ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ. 

ಸಮ್ಮೇಳನಕ್ಕೆ ರಾಜಕೀಯ ಬಣ್ಣ ನೀಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಿದ್ದು, ಅವರ ಬೆಂಬಲಿಗರೂ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಇದರಿಂದ ಸಮ್ಮೇಳನದ ಆರಂಭದಲ್ಲೇ ರಾಜಕೀಯ ಚರ್ಚೆ ಮುನ್ನೆಲೆಗೆ ಬಂತು. 

ಏತನ್ಮಧ್ಯೆ ವಿವಿಧ ಸಂಘಟನೆಗಳ ಮುಖಂಡರಾದ ಗೋಪಿನಾಥ್ ಮಿಶಿ, ಚನ್ನಬಸವ ಗುಣದಾಳ, ರಮೇಶ್ ಬಳೋಲಗಿಡದ ಸೇರಿದಂತೆ ಹಲವರು ಕೈಯಲ್ಲಿ ಬಿಳಿ ಹಾಳೆಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಹುದ್ದೆಗಳಿಗೆ ಕನ್ನಡದ ಬಗ್ಗೆ ಸಮರ್ಪಕ ಅರಿವು ಇಲ್ಲದವರನ್ನು ನೇಮಿಸಲಾಗಿದೆ ಎಂಬ ಆರೋಪವನ್ನೂ ಪ್ರತಿಭಟನಾಕಾರರು ಮುಂದಿಟ್ಟರು.

ಮುನ್ನಚ್ಚರಿಕೆ ಇದ್ದರೂ ಎಚ್ಚರ ತಪ್ಪಿದರೇ ಆರಕ್ಷಕರು?

ಅದ್ದೂರಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ಪ್ರತಿಭಟನಾಕಾರರು ಸಭಾಂಗಣದೊಳಗೆ ಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ಇದ್ದರೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಯಿತೇ ಎಂಬ ಚರ್ಚೆ ಸಹ ಸಾರ್ವಜನಿಕ ವಲಯದಲ್ಲಿ ಸಹಜವಾಗಿ ಮೂಡಿದೆ. 

ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ಪೊಲೀಸರಿಗೆ ಮೊದಲೇ ಇದ್ದಿದ್ದರೆ, ಪ್ರತಿಭಟನಾಕಾರರು ಸಮ್ಮೇಳನದ ವೇದಿಕೆಯ ಸಮೀಪದವರೆಗೆ ಹೇಗೆ ಪ್ರವೇಶಿಸಿದರು? ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಿದೆಯೇ? ಅಥವಾ ಪ್ರತಿಭಟನೆಗೆ ಪೊಲೀಸ್ ಇಲಾಖೆಯಲ್ಲೇ ಕೆಲವರಿಂದ ಪರೋಕ್ಷ ಸಹಕಾರ ದೊರಕಿತೇ? ಎಂಬ ಪ್ರಶ್ನೆಗಳು ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಲ್ಲಿ ಕೇಳಿಬರುತ್ತಿವೆ.

ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ಸಂಬAಧಿಸಿದAತೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಹೀಗಾಗಿ ಪ್ರತಿಭಟನೆಗೆ ಪೊಲೀಸ್ ಅಧಿಕಾರಿಗಳ ಕೈವಾಡವಿದೆ ಎಂಬ ಮಾತುಗಳು ಸದ್ಯಕ್ಕೆ ಶಂಕೆ ಮತ್ತು ಆರೋಪಗಳ ಮಟ್ಟದಲ್ಲಿದ್ದು, ಅಧಿಕೃತ ದೃಢೀಕರಣ ಅಗತ್ಯವಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲಕಾಲ ಸಮ್ಮೇಳನದ ವಾತಾವರಣದಲ್ಲಿ ಗೊಂದಲ ಉಂಟಾದರೂ, ಬಳಿಕ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಕನ್ನಡ ಸಾಹಿತ್ಯದ ಹಬ್ಬವಾಗಬೇಕಿದ್ದ ಸಮ್ಮೇಳನಕ್ಕೆ ರಾಜಕೀಯ ವಿವಾದ ಹಾಗೂ ಪ್ರತಿಭಟನೆಯ ಬಿಸಿ ತಟ್ಟಿರುವುದು ಇದೀಗ ಜಮಖಂಡಿ ತಾಲ್ಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕಸಾಪ ತಾಲೂಕಾಧ್ಯಕ್ಷ ತಳಕೇರಿ ಕಾರ್ಯವೈಖರಿ ವಿರುದ್ಧ ಅಸಮಾಧಾನ

`ಬಿಳಿಹಾಳೆ' ಪ್ರದರ್ಶಿಸಿ ಆಕ್ಷೇಪ ಹೊರಹಾಕಿದ ಪ್ರತಿಭಟನಾಕಾರರು....

೧೦ ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಅಧ್ಯಕ್ಷ ವಿರುದ್ಧ ಅಸಮಾಧಾನ ಭುಗಿಲೆದ್ದ ಘಟನೆ ನಡೆದಿದ್ದು, ಭೀಮ್ ಆರ್ಮಿ ಕಾರ್ಯದರ್ಶಿ ಗೋಪಿನಾಥ ಮೀಸಿ ಮೊದಲಾದವರು ಬಿಳಿ ಹಾಳೆ ಪ್ರದರ್ಶಿಸುವ ಮೂಲಕ ವಿನೂತನವಾಗಿ ಅಸಮಾಧಾನ ಹೊರಹಾಕಿದರು.

ಕಸಾಪ ಜಿಲ್ಲಾ ಘಟಕದ ಸಾರಥ್ಯ ವಹಿಸಿದ ವ್ಯಕ್ತಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ, ಅವರು ಬಿಳಿಹಾಳೆ ಇದ್ದಂತೆ, ಅವರಲ್ಲಿ ಯಾವ ಸಾಹಿತ್ಯಿಕ ಪಾಂಡಿತ್ಯವೂ ಇಲ್ಲ, ಅತ್ತ ಹಣಕಾಸಿನ ವ್ಯವಸ್ಥೆಯೂ ಸರಿಯಾಗಿಲ್ಲ, ಸರ್ಕಾರಿ ನೌಕರರಾಗಿರುವ ಅವರು ಎನ್‌ಓಸಿ ಪಡೆಯದೇ ಈ ಹುದ್ದೆಯಲ್ಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.  

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಾಹಿತಿಗಳನ್ನು ಕಡೆಗಣಿಸಿ, ರಾಜಕೀಯ ಮುಖಂಡರು ಹಾಗೂ ಹಣವಂತರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿರುವ ದಲಿತ ಮುಖಂಡ ಹಾಗೂ ಭೀಮ ಆರ್ಮಿ ರಾಜ್ಯ ಕಾರ್ಯದರ್ಶಿ ಗೋಪಿನಾಥ ಮೀಸಿ, ಕಸಾಪ ಆಡಳಿತದಲ್ಲಿ ಪಾರದರ್ಶಕತೆ ತರಬೇಕು ಎಂದು ಆಗ್ರಹಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಶಿಕ್ಷಕರಾಗಿರುವ ಸಂತೋಷ ತಳಕೇರಿ ಅವರು ಅರ್ಹರೇ ಎಂಬುದನ್ನು ಸಂಬಂಧಪಟ್ಟ ಇಲಾಖೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ನೌಕರರಾಗಿರುವ ಅವರು ಹುದ್ದೆ ವಹಿಸಿಕೊಳ್ಳುವ ಮುನ್ನ ಅಗತ್ಯ ಅನುಮತಿ ಹಾಗೂ ಎನ್‌ಒಸಿ ಪಡೆದಿದ್ದಾರೆಯೇ ಎಂಬುದನ್ನು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

- Advertisement -