Loading...

ಅಸ್ತಿತ್ವಕ್ಕೆ ಬಂದ ರಾಜ್ಯ ಛಲವಾದಿ ಸಂಗಮ ಛಲವಾದಿ ಪದಕ್ಕೆ ವಿಶಾಲಾರ್ಥ : ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

Suddi Mitra Editor

August 09, 2026 • 10:01 AM

ಅಸ್ತಿತ್ವಕ್ಕೆ ಬಂದ  ರಾಜ್ಯ ಛಲವಾದಿ ಸಂಗಮ   ಛಲವಾದಿ ಪದಕ್ಕೆ ವಿಶಾಲಾರ್ಥ : ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಛಲವಾದಿ ಸಮಾಜದ ಸರ್ವತೋಮುಖ ಶ್ರೇಯೋಭಿವೃದ್ಧಿ ಹಾಗೂ ಸಂಘಟನಾತ್ಮಕವಾಗಿ ಬಲಗೊಳಿಸುವ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ರಾಜ್ಯ ಛಲವಾದಿ ಸಂಗಮ ಸಂಘಟನೆ ಅಸ್ತಿತ್ವಕ್ಕೆ ಬಂದಿತು.

ಯುವಜನತೆಯಲ್ಲಿ ವೈಚಾರಿಕ ಪ್ರಜ್ಞೆ, ಸಮಾನತೆಯ ಭಾವದೊಂದಿಗೆ ದೇಶವನ್ನು ಸಮರ್ಥವಾಗಿ ಕಟ್ಟುವ ಧ್ಯೇಯದೊಂದಿಗೆ ಬೆಂಗಳೂರಿನ ಎಪಿಐ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಂಘಟನೆಯ ಲಾಂಛನ ಬಿಡುಗಡೆ ಮಾಡಲಾಯಿತು. ಒಕ್ಕೂಟ ಉದ್ಘಾಟಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹೊಲೆಯ ಎಂದರೆ ಅಪಮಾನವಲ್ಲ, ಹೊಲೆಯ ಎಂದರೆ ಅವಮಾನ ಎಂದು ಭಾವಿಸಬೇಡಿ, ಛಲ ಹೊಂದಿದವ, ಬೆನ್ನಟ್ಟುವ, ಅಚಲ ಮನಸ್ಸುಳ್ಳ, ಧೃಡ ‌ನಿಶ್ಚಯವುಳ್ಳ ಗಟ್ಟಿ ಮನಸ್ಸಿನ, ಹಿಡಿದ ಪಟ್ಟು ಬಿಡದವ, ಚಂಚಲ ಮನಸ್ಸಿಲ್ಲದವನೇ ಛಲವಾದಿ ಎಂದರು.

ನನಗೆ ಹೆಸರು ನಂತರ, ನನ್ನ ಜಾತಿ ನನಗೆ ಪ್ರಮುಖ

ನಾರಾಯಣಸ್ವಾಮಿ ಹೆಸರಿನ ಮುಂದೆ ಛಲವಾದಿ ಇದೆ ಎಂದರ

ದಲಿತ ಸಂಘರ್ಷ ಸಮಿತಿಗೆ ಜಾತಿ ಇರಲಿಲ್ಲ, ತಳ ಸಮುದಾಯಗಳಿಗೆ ನ್ಯಾಯ ಒದಗಿಸುವ ಏಕೈಕ ಉದ್ದೇಶ ಹೊಂದಿತ್ತು, ದಲಿತರು ಬಂದರು ದಾರಿ ಬಿಡಿ ಎನ್ನುವ ರೀತಿಯಲ್ಲಿ ಗಟ್ಟಿಯಾಗಿ ಹೋರಾಟ ಮಾಡಿದ ಶ್ರೇಯಸ್ಸು ದಲಿತ ಸಂಘರ್ಷ ಸಮಿತಿಗೆ ಇದೆ ಎಂದರು. ಆದರೆ ಸಮಾಜಕ್ಕೆ ಹೋರಾಡಿದ ಅನೇಕರ ಬದುಕು ಹಸನಾಗಿಲ್ಲ, ದಿ.ಸಿದ್ದಲಿಂಗಯ್ಯ ಅವರಂತಹ ಮಹಾನುಭಾವರು ಎದುರಿಸಿದ‌ ನೋವು ಅಷ್ಟಿಷ್ಟಲ್ಲ ಎಂದರು.

ನಮ್ಮ ಸಮಾಜ ಇಂದಿಗೂ ಹಿಂದುಳಿದಿದೆ, ನಗರ ಪ್ರದೇಶದವರಿಗಿಂತ ಗ್ರಾಮೀಣ ಪ್ರದೇಶದ ಜನರಿಗೆ ನ್ಯಾಯ ಒದಗಿಸಬೇಕಿದೆ ಎಂದರು.

ಜ್ಞಾನಜ್ಯೋತಿ ಡಾ.ಅಂಬೇಡ್ಕರ್ ಅವರ ಸಮಾಜದಲ್ಲಿ ಜನಿಸಿದಕ್ಕೆ ನಾವು ಹೆಮ್ಮೆ ಪಡಬೇಕು ಎಂದರು.

ನೀವು ರಾಜಕೀಯದವರನ್ನೇ ನಂಬಿ ಕೂರಬೇಡ, ನಮ್ಮ ಸಮುದಾಯದ ಯಾರನ್ನೂ ನಾನು ಯಾವತ್ತೂ ದ್ವೇಷಿಸಲ್ಲ ಎಂದರು. ದಿ.ಶಿವರಾಂ ಅವರಿಲ್ಲದೇ ಛಲವಾದಿ ಮಹಾಸಭಾ ಈಗ ಅನಾಥವಾಗಿದೆ, ಹೀಗಾಗಿ ಸಂಘಟನೆ ಉದ್ದೇಶದಿಂದ ಈ ಒಕ್ಕೂಟ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದರು.

ಸಂಘಟನೆಗಳು ಟ್ರೇನ್ ಡಬ್ಬಿ ಇದ್ದಂತೆ, ಯಾರು ಇಂಜಿನ್ ಆಗುತ್ತಾರೋ ಸಂಘಟನೆಗಳು ಅವರ ಹಿಂದೆ ಸಾಗುತ್ತವೆ, ಹೀಗಾಗಿ ಇಂಜಿನ್ ಆಗಬೇಕು, ಎಲ್ಲರೂ ಒಗ್ಗೂಡಿ ಸೀನಿಯರ್ ಜ್ಯೂನಿಯರ್ ಬಿಟ್ಟು ಒಂದಾಗಬೇಕು, ಎಲ್ಲ ಹಿರಿಯರನ್ನು ಗೌರವಿಸುವುದು, ಕಿರಿಯರನ್ನು ಪ್ರೀತಿಸುವುದು ಸಂಘಟನೆ ಧ್ಯೇಯವಾಗಲಿ ಎಂದರು.

ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ನಮ್ಮ ಸಮುದಾಯ ನಾವು ಒಂದು ರೀತಿ ಅಸಂಘಟಿತ ಕಾರ್ಮಿಕರಂತೆ, ಈ ಅಸಂಘಟನೆ ಇಂದಿಗು ಮುಂದುವರೆಯುತ್ತಿರುವುದಕ್ಕೆ ನಮ್ಮ ವೈಫಲ್ಯವೇ ಕಾರಣ, ಛಲವಾದಿ, ಹೊಲೆಯ ಎಂಬ ಒಂದೇ ಪದವನ್ನು ಎಲ್ಲರೂ ಬಳಸಿದ್ದರೆ ಒಳ ಮೀಸಲಾತಿಯಲ್ಲಿ ನಮಗೆ ಹೆಚ್ಚಿನ ಪ್ರಮಾಣದ ಲಾಭ ದೊರಕುತ್ತಿತ್ತು ಎಂದರು.

ಸಂಘಟನೆಗಳು ಸಾವಿರವಾಗಲಿ ಆದರೆ ಗುರಿ ಒಂದೇ ಆಗಿರಲಿ, ಛಲವಾದಿ ಸಮುದಾಯದ ಸಂಘಟನೆಯಲ್ಲಿ ದಿ.ಕೆ. ಶಿವರಾಂ ಅವರ ಕೊಡುಗೆ ಅನನ್ಯ ಎಂದರು.

ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಮಾತನಾಡಿ, ನಾವು ಜನಸಂಖ್ಯೆ, ಬುದ್ಧಿವಂತಿಕೆ, ಪ್ರತಿಭೆ ಹೆಚ್ಚಾಗಿದ್ದರೂ ಸಹ ನಾವು ಒಗ್ಗಟ್ಟಾಗಿಲ್ಲದ ಪರಿಣಾಮ ಒಳ ಮೀಸಲಾತಿ ಪ್ರಯೋಜನ ನಮಗೆ ಆಗಲಿಲ್ಲ ಎಂದರು.

ಯಾರನ್ನೂ ನಾವು ತಾತ್ಸಾರ ಮನೋಭಾವದಿಂದ ನೋಡಬಾರದು, ನಮ್ಮಲ್ಲಿರುವ ಅಹಂಭಾವವನ್ನು ತೊರೆಯಬೇಕು ಎಂದರು. 

ತಾಂತ್ರಿಕ ಕ್ಷೇತ್ತದತ್ತ ಒಲವು ಇರಲಿ...

ಸರ್ಕಾರದ ನಿವೃತ್ತ ಕಾರ್ಯದರ್ಶಿ ಆರ್. ರುದ್ರಯ್ಯ ಮಾತನಾಡಿ, ಕೆಲವು ಸಂಘಟನೆಗಳು ಪ್ರಾಯೋಜಕತ್ವಕ್ಕೆ ಸೀಮಿತವಾಗಿರುವಂತೆ ಕಾರ್ಯ ನಿರ್ವಹಿಸುವ ಆರೋಪ ವ್ಯಾಪಕವಾಗುತ್ತಿದೆ, ಸಮಾಜ ಸಂಘಟನೆಯ ಆಶಯ ಆ ಸಂಘಟನೆಗಳಿಂದ ಗೌಣವಾಗಿದೆ, ಹೀಗಾಗಿ ದಲಿತ ಸಮುದಾಯಗಳ ಸರ್ವತೋಮುಖ ಪ್ರಗತಿಗೆ ಸದಾ ಕ್ರೀಯಾತ್ಮಕವಾಗಿ ಸ್ಪಂದಿಸುವ ಸಂಘಟನೆ ರೂಪುಗೊಳಿಸಬೇಕು ಎಂಬ ಚಿಂತನೆ ಇಂದು ನಿನ್ನೆಯದಲ್ಲ, ಅನೇಕ ಚರ್ಚೆ, ಚಿಂತನೆಗಳ ನಂತರ ಈ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ಇದು ವ್ಯಕ್ತಿಗತ ಸಂಘಟನೆಯಲ್ಲ, ಪ್ರಜಾತಾಂತ್ರಿಕ ಸಂಘಟನೆ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಎಲ್ಲ ಚಟುವಟಿಕೆಗಳಿಗೆ ಪ್ರಜಾಪ್ರಭುತ್ವದ ಆಶಯಗಳಿಗನುಗುಣವಾಗಿ ಕಾರ್ಯ ನಿರ್ವಹಣೆಗೆ ಸಂಕಲ್ಪ ‌ಮಾಡಲಾಗಿದೆ ಎಂದು ವಿವರಿಸಿದರು.

ಸದಸ್ಯತ್ವ ಅಭಿಯಾನ ನೊಂದಣಿ, ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರಗಳ ಜೊತೆ ಒಡಂಬಡಿಕೆ ಮಾಡಿ ವಿದ್ಯಾರ್ಥಿಗಳಿಗೆ ತರಬೇತಿ, ನವೋದ್ಯಮ ಹಾಗೂ ಡಿಜಿಟಲ್ ಕ್ಷೇತ್ರದಲ್ಲಿ ಸಮುದಾಯದ ಯುವಕರ ಸಹಭಾಗಿತ್ವ ಉತ್ತೇಜಿಸುವುದು, ಉದ್ಯೋಗ ಮಾರ್ಗದರ್ಶನ ಶಿಬಿರ ಹಾಗೂ ಉದ್ಯೋಗ ಮಾಹಿತಿ ಕೇಂದ್ರ, ಛಲವಾದಿ ಸಮುದಾಯದ ಸಹಕಾರಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ಅನೇಕ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿ ಹೊಂದಲಾಗಿದೆ ಎಂದು‌ ವಿವರಿಸಿದರು.

ನಮ್ಮ ಸಮುದಾಯದಲ್ಲಿರುವ ನಿರುದ್ಯೋಗ ಸಮಸ್ಯೆ ಮೊದಲಾದ ಸಮಸ್ಯೆ್ಳಿಂದ ಕೆಲವು ಸಂಘಟನೆಗಳು ಯುವಜನತೆ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ, ಈ ಹಿಂದೆ ಕಂಪ್ಯೂಟರ್ ಪ್ರವೇಶಿಸಿದಾಗ ನಮ್ಮ ಯುವಕರಿಗೆ ಇದನ್ನು ವಿರೋಧಿಸಲು ಹೇಳಲಾಯಿತು, ಪರಿಣಾಮ ಈ ನಮ್ಮ ಸಮುದಾಯ ಯುವಕರು ತಾಂತ್ರಿಕತೆಯ ಕ್ಷೇತ್ರ ಪ್ರವೇಶಿಸಲು ಸಾಧ್ಯವಾಗಲಿಲ್ಲ, ಈ ರೀತಿಯ ದಿಕ್ಕು ತಪ್ಪಿಸುವ ವಿದ್ಯಮಾನಗಳಿಂದ ಎಚ್ಚರವಾಗಿರಿ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿಯೂ ನಮ್ಮ ಸಮುದಾಯ ಸಕ್ರೀಯವಾಗಬೇಕಿದೆ ಎಂದರು.

ಸಂವಿಧಾನ ಜಾಥಾ ದಲಿತ ಬಾಂಧವರು ಇರುವಲ್ಲಿ ಮಾಡಲಾಗುತ್ತಿದೆ, ನಾವು ಸಂವಿಧಾನ ಆರಾಧಕರು, ನಮಗೆ ಜಾಗೃತಿ ಮೂಡಿಸುವ ಬದಲು ಎಲ್ಲಿ ಸಂವಿಧಾನ ವಿರೋಧಿಗಳಿದ್ದಾರೋ ಅಲ್ಲಿ ಸಂವಿಧಾನ ಜಾಗೃತಿ ಮೂಡಿಸಿ ಎಂದರು.ಛಲವಾದಿ ಮಹಾಸಂಸ್ಥಾನ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾಜಿ ಸಚಿವ ಎನ್. ಮಹೇಶ, ನಿವೃತ್ತ ನ್ಯಾಯಾಧೀಶ ಎಂ. ಮಹಾದೇವಯ್ಯ ಮಾತನಾಡಿದರು.

ಪಟಪಟ ಶ್ರೀನಿವಾಸ, ಡಾ.ಆರ್. ರಾಜು, ಛಲವಾದಿ ಕುಮಾರ್ , ಅರವಿಂದ ಘಟ್ಟಿ, ಡಾ.ನವೀನ್ ಕುಮಾರ್ ಪಾಲ್ಗೊಂಡಿದ್ದರು.

- Advertisement -