Loading...

ರೆಡ್ಡಿ ಕೆಣಕಿದ್ರು… ತಂಗಡಗಿ ಗುಡುಗಿದ್ರು! “ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದ ಸಚಿವ

Suddi Mitra Editor

September 09, 2026 • 09:22 AM

ರೆಡ್ಡಿ ಕೆಣಕಿದ್ರು… ತಂಗಡಗಿ ಗುಡುಗಿದ್ರು! “ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದ ಸಚಿವ

ತಾರಕ್ಕೇರಿದ ನಾಯಕರಿಬ್ಬರ ವಾಕ್ಸಮರ

ಅಪ್ಪು ಪೋತರಾಜ

ಬೆಂಗಳೂರು : ರಾಜಕಾರಣದಲ್ಲಿ ಟೀಕೆ, ಪ್ರತಿ ಟೀಕೆ ಸಾಮಾನ್ಯ. ಈ ಟೀಕೆ ಹಾಗೂ ಪ್ರತಿ ಟೀಕೆಗಳು ಒಮ್ಮೊಮ್ಮೆ ರಾಜಕೀಯ ಕ್ಷೀಪ್ರ ಕ್ರಾಂತಿಗೂ ಕಾರಣ. ಅನೇಕ ಉಪ ಚುನಾವಣೆಗಳಿಗೂ ಈ ಟಾಕ್ ವಾರ್ ಕಾರಣವಾಗಿವೆ. ಈಗ ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಪಾದಯಾತ್ರೆಗಿಂತ ಶಾಸಕ ಜನಾರ್ಧನ ರೆಡ್ಡಿ ಹಾಗೂ ಸಚಿವ ಶಿವರಾಜ್ ತಂಗಡಗಿ ನಡುವಣ ನಡೆಯುತ್ತಿರುವ ಟಾಕ್ ವಾರ್ ಹೆಚ್ಚು ಸಂಚಲನ ಸೃಜಿಸುತ್ತಿದೆ. 

ಮಹರ್ಷಿ ವಾಲ್ಮೀಕಿ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಬಳ್ಳಾರಿ ಪಾದಯಾತ್ರೆ ನಡೆಯುತ್ತಿದೆ. ಬಳ್ಳಾರಿಯ ಗಣಿ ಧಣಿ ಎಂದೇ ಹೆಸರಾದ ಜನಾರ್ದನ ರೆಡ್ಡಿ ಅವರು ತಂಗಡಗಿ ಅವರ ವಿರುದ್ಧ ನಿರಂತರ ಟೀಕೆ, ಅದಕ್ಕೆ ಪ್ರತಿಯಾಗಿ ತಂಗಡಗಿ ಅವರು ಸಹ ಪ್ರತಿಟೀಕೆ ಮಾಡುತ್ತಿರುವುದು ಹೊಸ ರಾಜಕೀಯ ಕ್ಷೀಪ್ರ ಕ್ರಾಂತಿಗೆ ಕಾರಣವಾಗುವುದೇ ಎಂಬ ಕುತೂಹಲ ಕೆರಳಿಸಿದೆ.

ತಂಗಡಗಿ ಕೆಣಕಿದ ರೆಡ್ಡಿ : ಟೀಕಾ ಪ್ರಹಾರ ನಡೆಸಿದ ತಂಗಡಗಿ

ಪಾದಯಾತ್ರೆ ವೇಳೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರು ತಂಗಡಗಿ ಅವರನ್ನು ' ಲೇ ತಮ್ಮಾ' ಎಂದು ಕರೆದು ಟೀಕೆ‌ ನಡೆಸಿದ್ದಾರೆ. ಅವರು ಪ್ರಥಮ ಬಾರಿಗೆ ಶಾಸಕರಾಗಿದ್ದು, ಪ್ರಥಮ ಬಾರಿಗೆ ಸಚಿವರಾಗಿದ್ದು ನನ್ನ ಆಶೀರ್ವಾದದಿಂದ, ಅವರನ್ನು ರಾಜಕೀಯವಾಗಿ ಬೆಳೆಸಿದ್ದು ದೊಡ್ಡ ತಪ್ಪು, ನನ್ನ ಬಳಿಯೇ ಹಣ ಒಯ್ದು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ತಂಗಡಗಿ ವಿರುದ್ಧ ಜನಾರ್ಧನ ರೆಡ್ಡಿ ಗುಡುಗಿದ್ದರು. 

ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ತಂಗಡಗಿ ಅಣ್ತಮ್ಮಾ ಜನಾರ್ದನರೆಡ್ಡಿ, ಮತ್ತದೇ ಪೊಳ್ಳು ನುಡಿಗಳ ಮೊರೆ ಹೋಗಿದ್ದೀಯ, ನಾನು ನನ್ನ ಸ್ವಂತ ಆಸ್ತಿ ಮಾರಿಕೊಂಡು ಚುನಾವಣೆ ಎದುರಿಸಿದವನು. ಚುನಾವಣೆಗಾಗಿ ಯಾರ ಮುಂದೆಯೂ ಕೈ ಚಾಚಿದವನಲ್ಲ. ಅದು ನಿನಗೂ ಚೆನ್ನಾಗಿ ಗೊತ್ತಿದೆ ಎಂದು ಏಕವಚನದಲ್ಲಿಯೇ ಹರಿಹಾಯ್ದಿದ್ದಾರೆ.

ಎರಡು ದಿನ ಹುಡುಕಾಡಿ ತಡಕಾಡಿ ಒಂದು ವಿಡಿಯೋ ಹಾಕಿದ್ದೀಯ. ಸರಿ ಇದೆ. ಆದರೆ, ನಾನು ಮಾತನಾಡಿರುವ ಮಾತಿಗೂ ನೀನು ಹೇಳಿರುವುದಕ್ಕೂ ಸಾಸಿವೆ ಕಾಳಿನಷ್ಟಾದರೂ ಸಂಬಂಧವಿದೆಯೇ? 

ನನ್ನ ಯಾವ ಮಾತನ್ನು ಎಲ್ಲಿಗೆ ಜೋಡಿಸಿ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದೀಯಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನಾನು ನಿನ್ನ ಗಣಿ ಹಣದಿಂದ ಗೆದ್ದಿದ್ದೇನೆ. ನಿನ್ನ ಆಶೀರ್ವಾದ ಗೆದ್ದಿದ್ದೇನೆ ಎಂದೆಲ್ಲಾ ಬೊಗಳೆ ಬಿಟ್ಟಿರುವೆ. ಚುನಾವಣೆ ಸಂದರ್ಭದಲ್ಲಿ ನಾನು ಎಷ್ಟು ಆಸ್ತಿ ಮಾರಾಟ ಮಾಡಿ ಚುನಾವಣೆಯನ್ನು ಎದುರಿಸಿದ್ದೇನೆ ಎಂಬುದು ನಿನಗೆ ಗೊತ್ತಿಲ್ಲವೇ?

ನಿನ್ನ ಆಪ್ತ ಸಹಾಯಕನ ಮೂಲಕ ನನ್ನ ಆಸ್ತಿ ನಗದೀಕರಣ ಮಾಡಿಸಿದೆ. ನನ್ನ ಆಸ್ತಿ ನಗದೀಕರಣಕ್ಕೆ ಮಧ್ಯವರ್ತಿಯಾಗಿ ನೆರವಾಗಿದ್ದೆ ಅನ್ನೋದು ಬಿಟ್ಟರೆ ಬೇರೇನಿದೆ? ಎಂದು ಟೀಕೆ ಮಾಡಿದ್ದಾರೆ.

ಸಾಸಿವೆ ಕಾಳಿನಷ್ಟು ಸಹಾಯವನ್ನೂ ಬೆಟ್ಟದಂತೆ ನೆನೆಸುವವನು ನಾನು.‌ ಹೀಗಾಗಿಯೇ ತುರ್ತು ಸಮಯದಲ್ಲಿ ನನ್ನ ಆಸ್ತಿ‌ ನಗದೀಕರಣಕ್ಕೆ ನೆರವಾದ ನಿನಗೆ ತುಂಬು ಸಭೆಯಲ್ಲಿ ಮನ ಬಿಚ್ಚಿ ಧನ್ಯವಾದ ತಿಳಿಸಿದ್ದೇನೆ. ಆದರೆ ಅದನ್ನೇ 

ಬೇರೆ ರೀತಿ ಬಿಂಬಿಸಿ ಪೋಸು ಕೊಡುತ್ತಿದ್ದೀಯ ಎಂದು ವಾಕ್ ಪ್ರಹಾರ ನಡೆಸಿದ್ದಾರೆ.

ಪಕ್ಷೇತರ ಶಾಸಕನಾಗಿದ್ದ ನಾನು ನೀನು ಹೇಳಿದ ಪಕ್ಷಕ್ಕೆ ಬೇಷರತ್ ಬೆಂಬಲ ಕೊಟ್ಟೆ. ನನ್ನ ಅಡ್ಡ ಇಟ್ಟುಕೊಂಡು ನೀನು ಮಂತ್ರಿಯಾದೆ. ನಿನ್ನ ಸಹೋದರ, ಸ್ನೇಹಿತ ಎಲ್ಲರೂ ಅಧಿಕಾರದ ಪಡಸಾಲೆಗೆ ಬಂದಿರಿ.

ಹಳೆಯ ವಿಚಾರ ಕೆದಕ್ಕಿದ್ದೀಯಲ್ಲಪ್ಪ. ನೀನೇ ನಿನ್ನ ಬಾಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣವಲ್ಲ. ಭೋವಿ ಸಮಾಜದ ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ಕಾರಣ ಎಂದಿದ್ದೀಯಲ್ಲ. ಅದು ಮರೆತು ಹೋಯಿತೇ ಅಥವಾ ಮರೆತಂತೆ ನಾಟಕವೇ? ಎಂದು ಸಾಲು ಸಾಲು ಸವಾಲು ಹಾಕಿದ್ದಾರೆ.

“ ರಾಜ್ಯಸಭೆ ಚುನಾವಣೆ ನೆನಪಿಲ್ಲವೇ?” — ರೆಡ್ಡಿಗೆ ತಂಗಡಗಿ ಪ್ರಶ್ನೆಗಳ ಸುರಿಮಳೆ

ಇನ್ನೊಂದು ವಿಷಯದ ಬಗ್ಗೆಯೂ ರೆಡ್ಡಿ ಅವರ ಕಾಲೆಳೆದಿರುವ ಸಚಿವ ತಂಗಡಗಿ, ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನೀನು ಎಷ್ಟು ಬಾರಿ ನನ್ನ ಸಂಪರ್ಕಿಸಿದ್ದೆ? ನಮ್ಮ ಅಭ್ಯರ್ಥಿಗೆ ಬೆಂಬಲ‌ ನೀಡುತ್ತೇನೆ ಎಂದು ಎಷ್ಟು ಬಾರಿ ಗೋಗರೆದೆ. ಎಲ್ಲಿ ಯಾವ ರೀತಿ ಸಹಾಯ ಪಡೆದೆ ಎಂಬುದನ್ನು ಹೇಳಿಬಿಡು. ನಿನಗೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನೆನಪಾಗಲಿಲ್ಲವೇ?

ಎಂದು ಕೇಳಿದ್ದಾರೆ.

ಚುನಾವಣೆ ಎದುರಿಸುವ ಪಂಥಾಹ್ವಾನ

ಒಂದು ವೇಳೆ ಜನತೆಯ ಬಳಿಯ ಇದರ ತೀರ್ಪು ಆಗಲಿ, ಜನತಾ ನ್ಯಾಯಾಲಯಕ್ಕೆ ಹೋಗೂಣ, ನೀವು ರಾಜಿನಾಮೆ ನೀಡಿ, ನಾನು ಮರುಕ್ಷಣ ನಾನು ರಾಜಿನಾಮೆ ನೀಡುವೆ, ಉಪ ಚುನಾವಣೆ ಎದುರಿಸೋಣ ಗಂಗಾವತಿಯಲ್ಲಿಯೇ ನಾನು ಬಂದು ನಾನು ನಿಲ್ಲುವೆ ಎಂದು ಸಚಿವ ತಂಗಡಗಿ ಪಂಥಾಹ್ವಾನ ನೀಡಿದ್ದಾರೆ.

ಈ ಪಂಥಾಹ್ವಾನ ಮತ್ತೊಂದು ಉಪ‌ ಚುನಾವಣೆಗೆ ವೇದಿಕೆಯಾಗಲಿದೆಯೋ ಅಥವಾ ಇನ್ನೆರಡು ದಿನ ಈ ಗುಡುಗು ಶಾಂತವಾಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

- Advertisement -