Loading...

ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ ಮಾತುಗಳಿಂದ ಹುರಿದುಂಬಿಸಿದ ಶಾಸಕ ಗುಡಗುಂಟಿ

Suddi Mitra Editor

October 11, 2026 • 01:00 PM

ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ ಮಾತುಗಳಿಂದ ಹುರಿದುಂಬಿಸಿದ ಶಾಸಕ ಗುಡಗುಂಟಿ

ಜಮಖಂಡಿ : ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಛಲವಾದಿ ಮಹಾಸಭಾ ತಾಲ್ಲೂಕು ಘಟಕ, ಜಮಖಂಡಿ ವತಿಯಿಂದ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ತಲಾ ಒಂದು ಸಾವಿರ ರೂ.ಗಳಂತೆ ೧.೨೦ ಲಕ್ಷ ರೂ. ಮೊತ್ತದ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹದ‌ ಜೊತೆಗೆ ಸ್ಪೂರ್ತಿ ತುಂಬುವ ಮಾತುಗಳನ್ನಾಡಿದರು.

ಮಕ್ಕಳು ದೈಹಿಕವಾಗಿ ಸದೃಢರಾಗಿ, ಮಾನಸಿಕವಾಗಿ ಬಲಿಷ್ಠರಾಗುವ ಜೊತೆಗೆ ಗುಣಮಟ್ಟದ ಶಿಕ್ಷಣ ಪಡೆಯಲು ಆದ್ಯತೆ ನೀಡಬೇಕು. ಶಿಕ್ಷಣವೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಕರೆ ನೀಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಗೌರವಿಸುವುದು ಅವರಲ್ಲಿ ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲವನ್ನು ಹೆಚ್ಚಿಸುತ್ತದೆ. ವಿದ್ಯರ‍್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಸಮಾನ ಆದ್ಯತೆ ನೀಡಬೇಕು. ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ಉತ್ತಮ ಗುಣಗಳು, ಆತ್ಮವಿಶ್ವಾಸ ಹಾಗೂ ಜೀವನದಲ್ಲಿ ಗುರಿ ಸಾಧಿಸುವ ಸಂಕಲ್ಪವನ್ನು ಬೆಳೆಸಿಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ದೊಡ್ಡ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಛಲವಾದಿ ಸಮಾಜವು ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಾಜದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಐಎಎಸ್‌, ಐಪಿಎಸ್‌ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಅಧಿಕಾರ ಮತ್ತು ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.

ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ ಅವರು ಒಳಮೀಸಲಾತಿಯ ಸಾಧಕ-ಬಾಧಕಗಳ ಕುರಿತು ಉಪನ್ಯಾಸ ನೀಡಿದರು. ಸಮಾಜದ ಪ್ರಗತಿಗೆ ಒಗ್ಗಟ್ಟು, ಸ್ವಾಭಿಮಾನ ಹಾಗೂ ಶೈಕ್ಷಣಿಕ ಜಾಗೃತಿ ಅಗತ್ಯವೆಂದು ಪ್ರತಿಪಾದಿಸಿದರು. 

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳಿ ಮಿಸಿ ಅವರೂ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಶಶಿಕಾಂತ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಸಹಜಾನಂದ ಅವಧೂತರು ದಿವ್ಯ ಸಾನ್ನಿಧ್ಯ ವಹಿಸಿದರೆ, ಕೃಷ್ಣಾನಂದ ಅವಧೂತರು ಸಾನ್ನಿಧ್ಯ ವಹಿಸಿದ್ದರು. ರವಿ ಬಬಲೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಕಾಶ ಮೀಸಿ, ಅಪ್ಪು ಪೋತರಾಜ, ರಮೇಶ ಆಲಬಾಳ, ಪ್ರೇಮ ಬಳೋಲಗಿಡದ ಪ್ರಕಾಶ ಕಾಳೆ ಶಶಿಧರ ಮೀಸಿ ಉಪಸ್ಥಿತರಿದ್ದರು.

ಪುಟ್ಟು ಪಾಣಿ ಸ್ವಾಗತಿಸಿದರು. ರವಿ ಲಗಳಿ ಹಾಗೂ ಶ್ರೀನಿವಾಸ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ನ್ಯಾಯವಾದಿ ವಕೀಲ ದೊಡ್ಡಮನಿ ವಂದಿಸಿದರು.

- Advertisement -