Loading...

ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಮುಂದಾದ ರಾಜ್ಯ ಸರ್ಕಾರ' `ಪ್ರಶ್ನೆಪತ್ರಿಕೆಗೆ ಅಡಚಣೆ ಮಾಡಿದರೆ ಮೊಳಗಲಿದೆ ಸೈರನ್....

Suddi Mitra Editor

August 01, 2026 • 02:54 PM

ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಮುಂದಾದ ರಾಜ್ಯ ಸರ್ಕಾರ'  `ಪ್ರಶ್ನೆಪತ್ರಿಕೆಗೆ ಅಡಚಣೆ ಮಾಡಿದರೆ ಮೊಳಗಲಿದೆ ಸೈರನ್....

`


ಅಪ್ಪು ಪೋತರಾಜ


ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಇಡೀ ದೇಶದಾದ್ಯಂತ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿ ಮಾಡಿತ್ತು. ದೊಡ್ಡಮಟ್ಟದ ವಿದ್ಯಾರ್ಥಿ-ಯುವಜನತೆಯ ಆಕ್ರೋಶದ ಭಾಗವಾಗಿ `ಪ್ರತಿಭಟನೆ' ಕಾವು ಪಡೆದುಕೊಂಡಿತ್ತು.

ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾಸ್ಟರ್‌ ಪ್ಲ್ಯಾನ್

ರೂಪಿಸಲು ಮುಂದಾಗಿದೆ. ಪರೀಕ್ಷಾ ನಕಲು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಎಲ್ಲ ಬಗೆಯ ನಕಲುಗಳನ್ನು ತಡೆಯುವ ನಿಟ್ಟಿನಲ್ಲಿ ಉತ್ತರ ಪತ್ರಿಕೆಗಳ ರ‍್ಯಾಂಡಮೈಜೇಷನ್ ಸೇರಿದಂತೆ ಅನೇಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಮುಂದಾಗಿದೆ. ಪ್ರಶ್ನೆ ಪತ್ರಿಕೆಗಳಿಗೆ ಯಾರಾದರೂ ಅಡಚಣೆ ಉಂಟು ಮಾಡುವ ಪ್ರಯತ್ನ ಮಾಡಿದರೆ ಸೈರನ್ ಮೊಳಗಿಸುವ ಹಾಗೂ ಪ್ರತಿ ಕೊಠಡಿಗೂ ಸಹ ಜಾಮರ್ ಅಳವಡಿಕೆಯ ಮಹತ್ವದ ಹೆಜ್ಜೆಯನ್ನು ಸರ್ಕಾರ ಇರಿಸಿದೆ.

ನಿನ್ನೆಯೂ ಸಹ ಮುಖ್ಯಮಂತ್ರಿಗಳು ಈ ವಿಷಯವಾಗಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ೩ ಗಂಟೆಗೂ ಅಧಿಕ ಕಾಲ ಈ ವಿಷಯದ ಕುರಿತು ಪರ್ಯಾಲೋಚನೆ ನಡೆಸಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಗೃಹ ಇಲಾಖೆ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಅನೇಕ ಸುಧಾರಿತ ಕ್ರಮಗಳಿಗೆ ತಕ್ಷಣಕ್ಕೆ `ಜಾರಿ'ಗೆ ಬರುವಂತೆ ರೂಪಿಸಲು ಉತ್ಸುಕವಾಗಿದೆ. ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಸಹ ಟೊಂಕ ಕಟ್ಟಿ ನಿಂತಿದ್ದಾರೆ. 

ಈ ವಿಷಯದ ಕುರಿತು ಸುದೀರ್ಘವಾಗಿ ವಿವರಣೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಹಣಕಾಸು ಇಲಾಖೆಯಿಂದ ೭೪ ಸಾವಿರ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅನುಮೋದನೆ ದೊರೆತಿದೆ. ಮುಂದಿನ ಒಂದು ವರ್ಷದಲ್ಲಿ ಇವುಗಳಿಗೆ ನೇಮಕಾತಿ ನಡೆಯಲಿದೆ. ಮೊದಲ ಹಂತದಲ್ಲಿ ಮುಂದಿನ ಆರು ತಿಂಗಳೊಳಗೆ ೩೬,೭೭೩ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುವುದು. ಸುಮಾರು ೩೫ ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.


*ಕೋಷನ್ ಬ್ಯಾಂಕ್ ಸೃಜನೆ : ಅಡಚಣೆ ಕಂಡು ಬಂದರೆ ಸೈರನ್*

ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶವೇ ಇಲ್ಲದಂತೆ ಈ ಬಾರಿ ಹಲವು ಹೊಸ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಒಂದೇ ಪ್ರಶ್ನೆ ಪತ್ರಿಕೆಯ ಬದಲಿಗೆ ವಿವಿಧ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ, ಪ್ರಶ್ನೆ ಪತ್ರಿಕೆಗಳ ಬ್ಯಾಂಕ್ ನಿರ್ಮಿಸಲಾಗಿದೆ. ವಿಷಯವಾರು ಮತ್ತು ನಿಗದಿತ ಪ್ರಮಾಣದಲ್ಲಿ ವಿವಿಧ ಸೆಟ್‌ಗಳ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಯಾವ ಪ್ರಶ್ನೆ ಪತ್ರಿಕೆ ಬಳಸಬೇಕು ಎಂಬುದು ಅಂತಿಮ ಕ್ಷಣದವರೆಗೆ ಗೌಪ್ಯವಾಗಿರಲಿದೆ ಎಂದು ವಿವರಿಸಿದರು.

ಪ್ರಶ್ನೆ ಪತ್ರಿಕೆಯ ಟ್ರಂಕ್ ಅಥವಾ ಕವರ್ ಅನ್ನು ಪರೀಕ್ಷೆ ಆರಂಭಕ್ಕೂ ಮುನ್ನ ತೆರೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಬಾರಿ ಬಹುಪದರ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಅನಧಿಕೃತ ವ್ಯಕ್ತಿ ಪ್ರಶ್ನೆ ಪತ್ರಿಕೆ ಇರುವ ಟ್ರಂಕ್ ತೆರೆಯಲು ಅಥವಾ ಭದ್ರತಾ ವ್ಯವಸ್ಥೆ ಭೇದಿಸಲು ಯತ್ನಿಸಿದರೆ ತಕ್ಷಣವೇ ಎಚ್ಚರಿಕೆಯ ಸೈರನ್ ಮೊಳಗಲಿದೆ ಎಂದು ಹೊಸ ವ್ಯವಸ್ಥೆಯ ಕುರಿತು ಪ್ರಿಯಾಂಕ್ ಖರ್ಗೆ ವಿವರಿಸಿದರು.

ಈ ಹಿಂದೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಮಾತ್ರ ಜಾಮರ್ ಅಳವಡಿಸಲಾಗುತ್ತಿತ್ತು. ಈಗ ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಜಾಮರ್ ಅಳವಡಿಸಲಾಗುತ್ತಿದೆ. ತನೂಲಕ ಮೊಬೈಲ್ ಅಥವಾ ಇತರೆ ತಂತ್ರಜ್ಞಾನದ ಮೂಲಕ ಪ್ರಶ್ನೆ ಪತ್ರಿಕೆ ಹೊರಹೋಗದಂತೆ ತಡೆಯಲಾಗುವುದು ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಯಲು ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನು ರ್ಯಾಂಡಮೈಸೇಶನ್ ಪದ್ಧತಿಯ ಮೂಲಕ ವಿತರಿಸಲಾಗುತ್ತದೆ. ಉದಾಹರಣೆಗೆ ಒಂದು ಕೊಠಡಿಯಲ್ಲಿ ೨೫ ಅಭ್ಯರ್ಥಿಗಳಿದ್ದರೆ ಪ್ರತಿಯೊಬ್ಬರಿಗೂ ವಿಭಿನ್ನ ಕ್ರಮಾಂಕದ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಇದರಿಂದ ಕಾಪಿ ಮಾಡುವ ಸಾಧ್ಯತೆ ಕಡಿಮೆಯಾಗಲಿದೆ ಎಂದು ಹೇಳಿದರು.

ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್‌ಗಳನ್ನು ಕನಿಷ್ಠ ಐದು ಅಭ್ಯರ್ಥಿಗಳ ಸಮುಖದಲ್ಲೇ ತೆರೆಯಬೇಕು. ಪರೀಕ್ಷಾ ಕೇಂದ್ರಗಳನ್ನು ೨೪ ಗಂಟೆಗಳ ಮುಂಚಿತವಾಗಿ ಸಂಪೂರ್ಣ ಪರಿಶೀಲಿಸಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗೃಹ ಇಲಾಖೆ ಪ್ರಮಾಣಿತ ಕಾರ್ಯಸೂಚಿ ಹೊರಡಿಸಿದೆ ಎಂದು ಪ್ರಿಯಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

- Advertisement -