Loading...

ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜಿನಾಮೆ?

Suddi Mitra Editor

August 07, 2026 • 10:20 AM

ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜಿನಾಮೆ?

ಬೆಂಗಳೂರು : ಹಿರಿಯ ಮುತ್ಸದ್ಧಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜೀನಾಮೆ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹೊರಟ್ಟಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

75 ಸದಸ್ಯ ಬಲದ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ, ಸಭಾಪತಿ ಮತ್ತು ಉಪಸಭಾಪತಿ ಎರಡೂ ಹುದ್ದೆಗಳನ್ನು ತನ್ನ ವಶಕ್ಕೆ ಪಡೆಯಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ. ಈ ರಾಜಕೀಯ ಬೆಳವಣಿಗೆಯ ನಡುವೆಯೇ ಬಸವರಾಜ ಹೊರಟ್ಟಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಅಂದರೆ ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು.

ಈಗ ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದಲೇ ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಬಸವರಾಜ ಹೊರಟ್ಟಿ ಅವರೇ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹೊರಟ್ಟಿ ಅವರಿಗೆ ಹೊರಟ್ಟಿ ಅವರೇ ಸಾಟಿ

೪೫ ವರುಷಗಳ ವಿಧಾನ ಪರಿಷತ್ ಸದಸ್ಯರಾಗಿ ದಾಖಲೆ ಬರೆದಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ಹೇಳಿ ಮಾಡಿಸಿದಂತಿದ್ದರು. 

ಶಾಸನ ಸಭೆಯ ಕಾರ್ಯ ಕಲಾಪಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಅವರು ಕಲಾಪವನ್ನು ಅತ್ಯಂತ ಸಮರ್ಥವಾಗಿ ಹಾಗೂ ಸೂಸೂತ್ರ ನಡೆಸುತ್ತಿದ್ದರು. 

ಯಾವ ರೂಲ್ಸ್ ಅಡಿಯಲ್ಲಿ ಚರ್ಚಿಸಬೇಕು, ನಿಯಮವಾಳಿಗಳ ಅವಕಾಶ ಎಲ್ಲವೂ ಅವರಿಗೆ ಕರಗತವಾಗಿತ್ತು, ರೂಲ್ಸ್ ಬುಕ್ ನೋಡದೇ ಆ ಆಂಶವನ್ನು ನಿಖರವಾಗಿ ಹೇಳುತ್ತಾರೆ. 

ಪರಿಷತ್ ನಲ್ಲಿ ಸದಾ ಹೆಡ್ ಮಾಸ್ಟರ್ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುವ ಹೊರಟ್ಟಿ ಅವರು ಸಂಬಂಧಿಸಿದ ಸಚಿವರು ಗೈರು ಹಾಜರಾದರೆ ಅವರ ಕಾರ್ಯ ವೈಖರಿಯ ಬಗ್ಗೆ ಟೀಕೆ ಮಾಡಿದ್ದುಂಟು. ಸರಿಯಾಗಿ ಸದನಕ್ಕೆ ಹಾಜರಾಗಿ ಎಂದು ಕಿವಿ ಮಾತು ಸಹ ಪೀಠದಿಂದ ಹೇಳಿದ್ದಾರೆ.

ರೈತರ, ಶಿಕ್ಷಕರ ಹಾಗೂ ಸಮಾಜದ ಹಿತದ ವಿಷಯ ಬಂದಾಗ ಅದಕ್ಕೆ ಸದಾ ಚರ್ಚೆಗೆ ಹೆಚ್ಚಿನ ಸಮಯ ನೀಡುವ ಜೊತೆಗೆ ಆ ವಿಷಯವಾಗಿ ಸರ್ಕಾರಕ್ಕೆ ಅನೇಕ ಬಾರಿ ಪೀಠದಿಂದ ಸಲಹೆ ನೀಡುತ್ತಾ ಬಂದಿದ್ದಾರೆ. 

ತೃತೀಯ ಲಿಂಗಿಗಳಿಗೆ ಸ್ವಾವಲಂಬಿ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆದಾಗ ವಿಧಾನ ಪರಿಷತ್ ಸಚಿವಾಲಯದಲ್ಲಿ ತೃತೀಯ ಲಿಂಗಿ ಸಿಬ್ಬಂದಿ ನೇಮಕ‌ ಮಾಡುವ ಮೂಲಕ ಹೊಸ ಬದಲಾವಣೆಯ ಹೆಜ್ಜೆ ಇರಿಸಿದ್ದು ಸಹ ಇದೆ. 

ಮೇಲ್ಮನೆ ಚಿಂತಕರ ಚಾವಡಿಯನ್ನು ಸಮರ್ಥವಾಗಿ ಹೊರಟ್ಟಿ ಮುನ್ನೆಡೆಸಿದ್ದು, ಈಗ ಸಂಖ್ಯಾಬಲ ಕಾರಣದಿಂದಾಗಿ ಈಗ ಅವರು ರಾಜಿನಾಮೆ ನೀಡಬೇಕಾದ ಪ್ರಸಂಗ ಸೃಜನೆಯಾಗಿದೆ.

ಮುತ್ಸದ್ಧಿತನ ಹಾಗೂ ಹಿರಿತನದಲ್ಲಿ ಹೊರಟ್ಟಿ ಅವರಿಗೆ ಹೊರಟ್ಟಿಯೇ ಸಾಟಿ.

- Advertisement -