ಹೈಕಮಾಂಡ್ ನಡೆಗೆ ಬೇಸರ ದೊರಕದ ಮಂತ್ರಿಗಿರಿ : ರಾಜಿನಾಮೆಗೆ ಮುಂದಾದ ಇಂಡಿ ಶಾಸಕ ಯಶವಂತರಾಯಗೌಡ
ವಿಜಯಪುರ : ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವರಾಗುವುದು ಸಂಪೂರ್ಣ ಖಾತ್ರಿಯಾದರೂ ಸಹ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಈಗಾಗಲೇ ರಾಜಿನಾಮೆ ಪತ್ರವನ್ನು ವಿಧಾನಸಭೆ ಕಾರ್ಯದರ್ಶಿಗಳಿಗೆ ಸಲ್ಲಿಕೆ ಮಾಡಲು ಯಶವಂತರಾಯಗೌಡ ಪಾಟೀಲ ಅಣಿಯಾಗುತ್ತಿದ್ದಾರೆ. ಹೈಕಮಾಂಡ್ ಈ ಬಾರಿ ಯಶವಂತರಾಯಗೌಡ ಪಾಟೀಲ ಸಚಿವ ಸ್ಥಾನ ಒದಗಿಸುವ ನಿಟ್ಟಿನಲ್ಲಿ `ಮಾತು' ನೀಡಿತ್ತು. ಆದರೆ ಈ ಮಾತು ತಪ್ಪಿರುವುದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಯಶವಂತರಾಯಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿರುವ ಶಾಸಕ ಯಶವಂತರಾಯಗೌಡ ಪಾಟೀಲ, ನಿನ್ನೆಯೂ ಸಚಿವ ಸ್ಥಾನ ದೊರಕಿಸುವ ನಿರೀಕ್ಷೆ ಇತ್ತು, ಪ್ರಮಾಣವಚನಕ್ಕೆ ಸಿದ್ಧರಾಗಿ ಎಂಬ ಸಂದೇಶವೂ ಬಂದಿತ್ತು. ಈಗ ಏಕಾಏಕಿಯಾಗಿ ನನ್ನ ಹೆಸರು ಕೈ ತಪ್ಪಿ ಹೋಗಿದೆ, ಈ ರೀತಿ ನಡೆದುಕೊಂಡವರ ಜೊತೆ ಜೊತೆಯಾಗಿ ನಡೆಯುವುದು ಹೇಗೆ ಸಾಧ್ಯ? ನಾನು ಕಟ್ಟಾ ಕಾಂಗ್ರೆಸ್ಸಿಗೆ, ಕಳೆದ ಹಲವಾರು ವರ್ಷಗಳಿಂದ ಇಂಡಿ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯಾಗಿಸಿದ್ದೇನೆ, ಪಕ್ಷ ನಿಷ್ಠೆ ಎಂಬುದು ನನ್ನ ರಕ್ತದ ಕಣಕಣಲ್ಲಿ ಹರಿಯುತ್ತಿದೆ, ಇಷ್ಟೆಲ್ಲಾ ಇದ್ದರೂ ಸಹ ಸಚಿವ ಸ್ಥಾನಕ್ಕೆ ನನ್ನ ಹೆಸರು ಅಂತಿಮಗೊಳಿಸಿ, ನಂತರ ರದ್ದುಗೊಳಿಸಿರುವುದು ಒಬ್ಬ ಪ್ರಾಮಾಣಿಕವಾಗಿ ಕಾರ್ಯ ಮಾಡಿದ ನನ್ನಂತಹ ವ್ಯಕ್ತಿಗೆ ಮನಸ್ಸಿಗೆ ನೋವಾಗಿದೆ, ಕಾಣದ ಕೈಗಳ ಆಟ ಇದರಲ್ಲಿ ಆಗಿದೆ, ಆದರೆ ಹೈಕಮಾಂಡ್ ಅವರ ಅಣತಿಯಂತೆ ನಡೆಯುತ್ತಿರುವುದು ಮನಸ್ಸಿಗೆ ಬೇಜಾರಾಗುವಂತೆ ಮಾಡಿದೆ ಎಂದರು.
ರಾಜಿನಾಮೆಯಿಂದ ಹಿಂದೆ ಸರಿಯಲ್ಲ
ನಾನು ಬದ್ಧತೆ ಇರುವ ವ್ಯಕ್ತಿ, ಪಕ್ಷಕ್ಕೂ ಅಷ್ಟೇ ಬದ್ಧತೆ ಹೊಂದಿದ್ದೇನೆ, ನನ್ನ ಬದ್ಧತೆಯ ಬಗ್ಗೆ ಇಡೀ ಜನರಿಗೆ ಗೊತ್ತಿದೆ, ಯಾರೂ ಎಷ್ಟೇ ಮನವೊಲಿಸಿದರೂ ಸಹ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಪ್ರಮಾಣ ವಚನ ಕಾರ್ಯಕ್ರಮಕ್ಕೂ ಮಾಜಿ ಶಾಸಕ ಎಂಬ ರೀತಿಯಲ್ಲಿಯೇ ಭಾಗವಹಿಸುವೆ, ನನಗೆ ಹೈಕಮಾಂಡ್ ಮನವೊಲಿಸಿದರೂ ಸಹ ನಿರ್ಧಾರದಿಂದ ಹಿಂದೆ ಸರಿಯಲ್ಲ, ಮಾತು ನೀಡಿ ನಂತರ ಮನವೊಲಿಕೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.
ಇಂಡಿ ಕ್ಷೇತ್ರ ರಚನೆಯಾದ ದಿನದಿಂದಲೂ ಸಚಿವ ಸ್ಥಾನ ದೊರಕಿರಲಿಲ್ಲ, ಹೀಗಾಗಿ ನನ್ನ ಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕಿತ್ತು, ನನ್ನ ಮತಕ್ಷೇತ್ರಕ್ಕೂ ಸಹ ಅವಮಾನ ಮಾಡಲಾಗಿದೆ, ಹೀಗಾಗಿ ನಾನು ಶಾಸಕನಾಗಿದ್ದರೆ ಏನು ಪ್ರಯೋಜನನ, ಮುಂದಿನ ನಡೆಯನ್ನು ಕಾರ್ಯಕರ್ತ ಹಾಗೂ ಅಭಿಮಾನಿ ಬಂಧುಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಯಶವಂತಯರಾಗೌಡ ಪಾಟೀಲ ಗುಡುಗಿದ್ದಾರೆ.