Loading...

ಇನ್ನೂ ಎರಡು ಉಪಮುಖ್ಯಮಂತ್ರಿ ಹುದ್ದೆ `ಖಾತ್ರಿ'? ಹೈಕಮಾಂಡ್ ಮುಂದೆ ಡಿಕೆಶಿ ಪಟ್ಟು

Suddi Mitra Editor

July 23, 2026 • 11:30 AM

ಇನ್ನೂ ಎರಡು ಉಪಮುಖ್ಯಮಂತ್ರಿ ಹುದ್ದೆ `ಖಾತ್ರಿ'?  ಹೈಕಮಾಂಡ್ ಮುಂದೆ ಡಿಕೆಶಿ ಪಟ್ಟು

ಅಪ್ಪು ಪೋತರಾಜ

ಬೆಂಗಳೂರು : ರಾಜ್ಯದಲ್ಲಿ ಇನ್ನೂ ಎರಡು ಉಪಮುಖ್ಯಮಂತ್ರಿಗಳನ್ನು ಸೃಜಿಸುವ ಜೊತೆಗೆ ಎಲ್ಲರನ್ನೂ `ಸರಿದೂಗಿಸಿ'ಕೊಂಡು ಹೋಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದ್ದು, ಹೈಕಮಾಂಡ್ ಅಂಗಳದಲ್ಲಿ ಈ ಬೇಡಿಕೆಯನ್ನು ಮಂಡಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆ ರದ್ದುಗೊಂಡಿತ್ತಾದರೂ ಸಚಿವ ಸಂಪುಟ ಚಟುವಟಿಕೆಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ದೆಹಲಿ ಮಟ್ಟದಲ್ಲಿ ಚಟುವಟಿಕೆಗಳು ಭರ್ಪೂರವಾಗಿ ನಡೆಯುತ್ತಿವೆ.

ಖಾಲಿ ಉಳಿದಿರುವ 20 ಸ್ಥಾನಗಳ ಸಚಿವ ಸ್ಥಾನ ಭರ್ತಿ ಜೊತೆಗೆ ಇನ್ನಿಬ್ಬರು ಹಿರಿಯ ಸಚಿವರಿಗೆ ಡಿಸಿಎಂ ಪಟ್ಟ ದೊರಕಿಸುವ ನಿಟ್ಟಿನಲ್ಲಿ ಸಿ.ಎಂ. ಶಿವಕುಮಾರ್ ವಿಶೇಷ ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ ದಲಿತ ಸಮಾಜದಿಂದ ಡಾ.ಜಿ. ಪರಮೇಶ್ವರ ಉಪಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಪರಿಶಿಷ್ಟ ಪಂಗಡ ಸಮುದಾಯದಿಂದ ಹಾಗೂ ಲಿಂಗಾಯತ ಸಮುದಾಯದಿಂದ ಎರಡು ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನು ಸ್ವತ: ಸಿಎಂ ಹೈಕಮಾಂಡ್ ಮುಂದೆ ಇರಿಸಿದ್ದಾರೆ ಎನ್ನಲಾಗಿದೆ.

ಇಬ್ಬರು ಹಿರಿಯ ನಾಯಕರಿಗೆ ಈ ಪಟ್ಟ ನೀಡಿದರೆ ಸಮನ್ವಯದ ಜೊತೆಗೆ ಮುಂದಿನ ಚುನಾವಣೆ ಎದುರಿಸಲು ಹೆಚ್ಚಿನ ಬಲ ಬರಲಿದೆ ಎಂಬ ಲೆಕ್ಕಾಚಾರ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಆಪ್ತ ವಲಯದ ನಾಯಕರನ್ನೇ ಡಿಸಿಎಂ ಹುದ್ದೆಗೆ ಪ್ರತಿಷ್ಠಾಪಿಸಲು ಡಿ.ಕೆ. ಶಿವಕುಮಾರ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಜಾರಕಿಹೊಳಿ-ಹರಿಪ್ರಸಾದ್-ಎಂಬಿಪಿ ಒಲಿಯುವುದೇ ಡಿಸಿಎಂ ಪಟ್ಟ?

ಸರ್ಕಾರ ರಚನೆಯಾದ ಪ್ರಥಮ ಹಂತದ ಸಚಿವ ಸಂಪುಟದಲ್ಲಿಯೇ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿಸಿಕೊಂಡಿದ್ದ ಬಿ.ಕೆ. ಹರಿಪ್ರಸಾದ್ ಎರಡನೇಯ ಹಂತದಲ್ಲಿ ಸಚಿವ ಸ್ಥಾನವನ್ನು ಪ್ರಬಲವಾಗಿ ನಿರೀಕ್ಷಿಸಿದ್ದರು. ಆದರೆ ಕೊನೆಗೂ ಕೆಪಿಸಿಸಿ ಹುದ್ದೆ ಅವರನ್ನು ಅರಸಿ ಬಂದಿತು. ಕೆಪಿಸಿಸಿ ಅಧ್ಯಕ್ಷರಾದವರು ಸಚಿವರಾಗಬಾರದು ಎಂದೇನಿಲ್ಲ, ಈ ಹಿಂದೆ ಡಿ.ಕೆ. ಶಿವಕುಮಾರ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾಗುವ ಜೊತೆಗೆ ಪಕ್ಷದ ಸಾರಥ್ಯವನ್ನು ವಹಿಸಿದ್ದುಂಟು. ಇದೇ ಸೂತ್ರದ ಅಡಿಯಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಸಚಿವ ಸಂಪುಟ ಸೇರಿ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನೂ ಕೆಪಿಸಿಸಿ ಅಧ್ಯಕ್ಷ - ಸಚಿವ ಸ್ಥಾನ ಎರಡರ ಮೇಲೆಯೂ ಕಟ್ಟಿಟ್ಟಿದ್ದ ಸತಿಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಜೊತೆಗೆ ಅಹಿಂದ ವರ್ಗದ `ನೂತನ ಐಕಾನ್' ಆಗಿ ಸತೀಶ ಜಾರಕಿಹೊಳಿ ಗುರುತಿಸಿಕೊಂಡಿದ್ದಾರೆ.

ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ಧರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಸಾತ್ವಿಕ ಸಿಟ್ಟು ಕಾಂಗ್ರೆಸ್ ಆಂತರಿಕ ವಲಯ ಹಾಗೂ ಹಾಲುಮತ ಸಮಾಜದಲ್ಲಿಯೂ ಇರುವುದು ಸುಳ್ಳೇನಲ್ಲ. ಆ ಮೂಲಕ ಜಾರಕಿಹೊಳಿ ಅವರಿಗೆ ಡಿಸಿಎಂ ಪಟ್ಟ ಅಲಂಕರಿಸುವಂತೆ ಮಾಡಿದರೆ ಅಹಿಂದ ವರ್ಗದ ಒಲವು ಗಳಿಸಿಕೊಳ್ಳುವ ಲೆಕ್ಕಾಚಾರವೂ ನಡೆಯುತ್ತಿದೆ.

ಇನ್ನೊಂದೆಡೆ ಲಿಂಗಾಯತ ಸಮುದಾಯದಿಂದ ಡಿಸಿಎಂ ಹುದ್ದೆ ನೀಡುವುದಾದರೆ ಡಾ.ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲರ ಹೆಸರು ಮುಂಚೂಣಿಯಲ್ಲಿದೆ. ಮುಂದಿನ ಚುನಾವಣೆ ಗಮನಲ್ಲಿರಿಸಿಕೊಂಡು ತಮ್ಮ ಆಪ್ತ ವಲಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ ರಣತಂತ್ರ ಹಣೆಯುತ್ತಿದ್ದು ಇನ್ನೂ ಎರಡು ಡಿಸಿಎಂ ಸ್ಥಾನಗಳು ರಾಜ್ಯಕ್ಕೆ ಒಲಿಯಲಿವೆ ಎಂಬುದು ಕಾದು ನೋಡಬೇಕಿದೆ.

- Advertisement -